ಸಾರಾಂಶ
ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ)ಯು ಏಕದಿನ ಪಂದ್ಯಗಳಲ್ಲಿ 2 ಹೊಸ ಚೆಂಡುಗಳ ಬಳಕೆ ರದ್ದುಗೊಳಿಸಲು ಚಿಂತನೆ ನಡೆಸುತ್ತಿದೆ. ಇನ್ನು ಮುಂದೆ 25 ಓವರ್ ಬಳಿಕ ಕೇವಲ ಒಂದು ಚೆಂಡು ಬಳಸಲು ಅವಕಾಶ ನೀಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಸೌರವ್ ಗಂಗೂಲಿ ಮುಖ್ಯಸ್ಥರಾಗಿರುವ ಕ್ರಿಕೆಟ್ ಸಮಿತಿಯು ಹೊಸ ಶಿಫಾರಸ್ಸುಗಳನ್ನು ಐಸಿಸಿ ಮುಂದಿಟ್ಟಿದೆ. ಜಿಂಬಾಬ್ವೆಯಲ್ಲಿ ನಡೆಯುತ್ತಿರುವ ಐಸಿಸಿ ಸಭೆಯಲ್ಲಿ ಈ ಶಿಫಾರಸ್ಸುಗಳ ಬಗ್ಗೆ ಚರ್ಚಿಸುವ ನಿರೀಕ್ಷೆಯಿದೆ. ಸದ್ಯ ಏಕದಿನ ಕ್ರಿಕೆಟ್‌ನಲ್ಲಿ ಕ್ರೀಸ್‌ನ ಎರಡೂ ಕಡೆಗಳಿಂದ ಎರಡು ಚೆಂಡುಗಳನ್ನು ಏಕಕಾಲದಲ್ಲಿ ಬಳಸಲಾಗುತ್ತಿದೆ. ಅಂದರೆ ಒಂದು ಚೆಂಡಿನಿಂದ ತಲಾ 25 ಓವರ್ ಎಸೆಯಲಾಗುತ್ತದೆ. ಆದರೆ ಹೊಸ ನಿಯಮ ಪ್ರಕಾರ, 2 ಚೆಂಡಗಳಿಂದ ಇನ್ನಿಂಗ್ಸ್ ಆರಂಭಿಸಿದರೂ 25 ಓವರ್ ಬಳಿಕ ಒಂದೇ ಚೆಂಡನ್ನು ಬಳಸಲು ಅವಕಾಶ ನೀಡಲಾಗುತ್ತದೆ. ಯಾವ ಚೆಂಡನ್ನು ಬಳಸಬೇಕು ಎಂಬುದನ್ನು ಬೌಲಿಂಗ್ ತಂಡವೇ ನಿರ್ಧರಿಸಲಿದೆ.
ಇದೇ ವೇಳೆ, 2028ರ ಬಳಿಕ ಅಂಡರ್-19 ವಿಶ್ವಕಪ್ ಟೂರ್ನಿಯನ್ನು ಟಿ20 ಮಾದರಿಯಲ್ಲಿ ಆಡಿಸಲು ಐಸಿಸಿ ಚಿಂತಿಸುತ್ತಿದೆ. ಸದ್ಯ ಏಕದಿನ ಮಾದರಿಯಲ್ಲಿ ಟೂರ್ನಿ ನಡೆಯುತ್ತಿದೆ.-
ಟೆಸ್ಟ್ ಓವರ್ ಮಧ್ಯೆ 1 ನಿಮಿಷದ ಬ್ರೇಕ್
ಇನ್ನು, ಟಿ20 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಇರುವಂತೆ ಟೆಸ್ಟ್‌ನಲ್ಲೂ ಓವರ್‌ಗಳ ಮಧ್ಯೆ ಇರುವ ಬಿಡುವಿನ ಸಮಯವನ್ನು 1 ನಿಮಿಷಕ್ಕೆ ಸೀಮಿತಗೊಳಿಸಲು ಐಸಿಸಿ ಚಿಂತನೆ ನಡೆಸುತ್ತಿದೆ. ಈ ಮೂಲಕ ದಿನದಾಟದ ಅವಧಿ ಹೆಚ್ಚಾಗದಂತೆ ನೋಡಿಕೊಳ್ಳಲಾಗುತ್ತದೆ.