ಇಂಡಿಯಾ ಕೂಟ ವಿಸರ್ಜನೆ ಒಳಿತು: ಒಮರ್‌ ಅಬ್ದುಲ್ಲಾ

| Published : Jan 10 2025, 12:49 AM IST

ಸಾರಾಂಶ

‘ಇಂಡಿಯಾ ಮೈತ್ರಿಕೂಟ ರಚನೆ ಉದ್ದೇಶ ಕಳೆದ ಲೋಕಸಭಾ ಚುನಾವಣೆಯನ್ನು ಎದುರಿಸುವುದಷ್ಟೇ ಆಗಿದ್ದರೆ ಇನ್ನು ಈ ಮೈತ್ರಿಕೂಟವನ್ನು ಉಳಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಅದನ್ನು ವಿಸರ್ಜಿಸುವುದು ಒಳಿತು’ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಹೇಳಿದ್ದಾರೆ.

ಪಿಟಿಐ ಜಮ್ಮು

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಂಡಿಯಾ ಕೂಟವು ಕೇವಲ ಲೋಕಸಭಾ ಚುನಾವಣೆಗಷ್ಟೇ ಸೀಮಿತವಾಗಿತ್ತು’ ಎಂಬ ಆರ್‌ಜೆಡಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದರು. ‘ದಿಲ್ಲಿ ಚುನಾ‍ವಣೆ ನಂತರ ಎಲ್ಲ ಇಂಡಿಯಾ ಕೂಟದ ಅಂಗಪಕ್ಷಗಳ ಸಭೆ ಕರೆಯಬೇಕು. ಕೇವಲ ಮೈತ್ರಿ ಲೋಕಸಭೆ ಚುನಾವಣೆಗೆ ಸೀಮಿತ ಎಂದಷ್ಟೇ ಆದರೆ ಕೂಟವನ್ನು ವಿಸರ್ಜಿಸಬೇಕು’ ಎಂದರು.

‘ಭವಿಷ್ಯದ ಕಾರ್ಯಸೂಚಿ ಮತ್ತು ಮುಖ್ಯ ನಾಯಕತ್ವದ ಕುರಿತು ಈ ಮೈತ್ರಿಕೂಟದಲ್ಲಿ ಯಾವುದೇ ಸ್ಪಷ್ಟತೆ ಇಲ್ಲ’ ಎಂದು ಮತ್ತೊಮ್ಮೆ ಅಭಿಪ್ರಾಯಪಟ್ಟ ಅ‍ವರು, ‘ಈ ಮೈತ್ರಿಕೂಟ ಮುಂದುವರಿಯುತ್ತೋ, ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ದೆಹಲಿ ಚುನಾವಣೆ ಬಳಿಕ ಒಕ್ಕೂಟದ ಪಕ್ಷಗಳ ಸಭೆ ಕರೆದು ಚರ್ಚೆ ನಡೆಸಿದರೆ, ಈ ಕುರಿತ ಗೊಂದಲಗಳು ನಿವಾರಣೆಯಾಗಿ ಎಲ್ಲವೂ ಸ್ಪಷ್ಟವಾಗಲಿವೆ’ ಎಂದರು.

‘ನನಗೆ ನೆನಪಿರುವಂತೆ ಈ ಒಕ್ಕೂಟ ಇಂತಿಷ್ಟೇ ಅವಧಿಗೆ ಇರುತ್ತದೆ ಎಂಬ ಯಾವುದೇ ಸಮಯದ ಗುಡುವು ಹಾಕಿರಲಿಲ್ಲ. ಒಂದು ವೇಳೆ ಮುಂದಿನ ವಿಧಾನಸಭಾ ಚುನಾವಣೆಗಳಲ್ಲೂ ಈ ಮೈತ್ರಿಕೂಟ ಮುಂದುವರಿಯುವಂತಿದ್ದರೆ ಎಲ್ಲರೂ ಒಂದೆಡೆ ಸೇರಿ, ಜತೆಯಾಗಿ ಕೆಲಸ ಮಾಡುವ ಸಂಕಲ್ಪ ಮಾಡಬೇಕು’ ಎಂದರು.