ಸಾರಾಂಶ
ಚೆನ್ನೈ: ಭಾರತದ ವಿರುದ್ಧ ನಡೆದ ಸಂಘರ್ಷದಲ್ಲಿ ಸೋತು ಸುಣ್ಣವಾಗಿದ್ದರೂ, ತಾನೇ ಯುದ್ಧ ಗೆದ್ದಂತೆ ಬಡಾಯಿ ಕೊಚ್ಚಿಕೊಳ್ಳುವ ಪಾಕಿಸ್ತಾನದ ಕುರಿತು ಭಾರತೀಯ ಸೇನಾ ಮುಖ್ಯಸ್ಥ ಜ. ಉಪೇಂದ್ರ ದ್ವಿವೇದಿ ವ್ಯಂಗ್ಯವಾಡಿದ್ದಾರೆ.
‘ಯಾವುದೇ ಪಾಕಿಸ್ತಾನೀಯನ ಬಳಿ ಹೋಗಿ ಯುದ್ಧ ಗೆದ್ದಿದ್ದು ಯಾರು ಎಂದು ಕೇಳಿ. ಆತ, ನಮ್ಮ ಸೇನಾ ಮುಖ್ಯಸ್ಥರು ಫೀಲ್ಡ್ ಮಾರ್ಷಲ್ ಆಗಿದ್ದಾರೆ. ನಾವು ಯುದ್ಧ ಗೆದ್ದಿರಲೇಬೇಕು. ಹಾಗಾಗಿ ಅವರು ಫೀಲ್ಡ್ ಮಾರ್ಷಲ್ ಆದರು ಎನ್ನುತ್ತಾನೆ’ ಎಂದು ಲೇವಡಿ ಮಾಡಿದ್ದಾರೆ.
ಐಐಟಿ ಮದ್ರಾಸ್‌ನಲ್ಲಿ ಮಾತನಾಡಿದ ಅವರು, ‘ನಿರೂಪಣಾ ನಿರ್ವಹಣೆಯ ವ್ಯವಸ್ಥೆಯನ್ನು ವಿಶಾಲ ರೀತಿಯಲ್ಲಿ ಅರಿತುಕೊಳ್ಳಬೇಕು. ನೀವು ಯಾವುದೇ ಪಾಕಿಸ್ತಾನೀಯನ ಬಳಿ ಹೋಗಿ, ನೀವು ಯುದ್ಧ ಗೆದ್ದಿದ್ದೀರೋ ಇಲ್ಲವೋ ಕೇಳಿ. ಆತ ತಮ್ಮ ಸೇನಾ ಮುಖ್ಯಸ್ಥರಿಗೆ ಫೀಲ್ಡ್ ಮಾರ್ಷಲ್ ಆಗಿ ಪದೋನ್ನತಿ ದೊರೆತಿದೆ. ಹಾಗಾಗಿ ನಾವು ಯುದ್ಧ ಗೆದ್ದಿರಲೇಬೇಕು ಎನ್ನುತ್ತಾನೆ’ ಎಂದರು.
ಈ ಮೂಲಕ ಸೇನಾ ಮುಖ್ಯಸ್ಥ ಆಸೀಂ ಮುನೀರ್‌ಗೆ ಫೀಲ್ಡ್ ಮಾರ್ಷಲ್ ಪದೋನ್ನತಿ ನೀಡುವ ಮೂಲಕ ಜನಮಾನಸದಲ್ಲಿ ವಿಜಯದ ಭ್ರಮೆ ಹುಟ್ಟುವಂತೆ ಮಾಡಿದ ಪಾಕಿಸ್ತಾನದ ತಂತ್ರಗಾರಿಕೆಯನ್ನು ತೆರೆದಿಟ್ಟಿದ್ದಾರೆ.