ಸಾರಾಂಶ
ನವದೆಹಲಿ : ಚುನಾವಣೆ ಬಂತೆಂದರೆ ಸಾಕು ವಿವಾದಿತ ಹೇಳಿಕೆಗಳನ್ನು ನೀಡುವಲ್ಲಿ ಹೆಸರುವಾಸಿಯಾಗಿರುವ ಕಾಂಗ್ರೆಸ್ ನಾಯಕ ಮತ್ತು ಮಾಜಿ ರಾಜತಾಂತ್ರಿಕ ಅಧಿಕಾರಿ ಮಣಿಶಂಕರ್ ಅಯ್ಯರ್ ಅವರು ಈ ಹಿಂದಿನ ಭಾರತೀಯ ವಿದೇಶಾಂಗ ಸೇವೆಯನ್ನು (ಐಎಫ್‌ಎಸ್) ‘ಮೇಲ್ಜಾತಿ ಸೇವೆ’ ಆಗಿತ್ತು. ಇದರಲ್ಲಿ ಕೇವಲ ‘ಮೆಕಾಲೆ ಕಿ ಔಲಾದ್’ (ಮೆಕಾಲೆಯ ಮಕ್ಕಳು) ಇದ್ದರು ಎಂದಿದ್ದಾರೆ. ಆದರೆ ಇದು ಈಗ ದೇಶದ ಸ್ವಾದವನ್ನು ಪಡೆಯುವುದರೊಂದಿಗೆ ಹೆಚ್ಚು ಪ್ರಜಾಪ್ರಭುತ್ವವಾಗುತ್ತಿದೆ ಎಂದು ಪ್ರಶಂಸಿಸಿದ್ದಾರೆ.
ನೆಹರು ಕುರಿತ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ‘ನನ್ನ ತಲೆಮಾರಿನವರೆಗೆ ಮತ್ತು 21ನೇ ಶತಮಾನದವರೆಗೂ ಐಎಫ್‌ಎಸ್ ಮೇಲ್ಜಾತಿಯ ಸೇವೆಯಾಗಿತ್ತು. ಇದು ‘ಮೆಕಾಲೆ ಕಿ ಔಲಾದ್’ಗಳ ಸೇವೆ ಆಗಿತ್ತು. ಆದರೆ ಈಗ ಇದು ಹೆಚ್ಚು ಪ್ರಜಾಸತ್ತಾತ್ಮಕವಾಗುತ್ತಿದೆ ಮತ್ತು ಇದು ಬಹಳಷ್ಟು ಹಿಂದಿ ಮಾತನಾಡುವವರನ್ನು ಹೊಂದಿದೆ. ನಾವು ನಮ್ಮ ದೇಶದ ಪರಿಮಳವನ್ನು ವಿದೇಶಾಂಗ ಸೇವೆಯಲ್ಲಿ ಪಡೆಯುತ್ತಿದ್ದೇವೆ ಮತ್ತು ಅದು ತುಂಬಾ ಒಳ್ಳೆಯದು ಎಂದು ನಾನು ಭಾವಿಸುತ್ತೇನೆ’ ಎಂದರು.
ಅಲ್ಲದೆ, ‘ಭಾರತೀಯ ವಿದೇಶಾಂಗ ಸೇವೆಯಲ್ಲಿ ಭಾರತೀಯತೆಯನ್ನು ತಂದವರೇ ನೆಹರು. ನೆಹರು ಅವರ ಆಡಳಿತಾವಧಿಯ ಕೊನೆಕೊನೆಗೆ (1963) ನಾನು ವಿದೇಶಾಂಗ ಸೇವೆ ಸೇರಿಕೊಂಡೆ. ಆ ಅವಧಿಯಲ್ಲಿ ಐಎಫ್‌ಎಸ್‌ನಲ್ಲಿ ಹೊಸತನ ಬಂತು. ಒಮ್ಮೆ ನಾನು ಇಸ್ತಾಂಬುಲ್‌ಗೆ ಹೋದಾಗ ಅಲ್ಲಿ ಹಿಂದಿ ಪಾರಂಗತ ಭಾರತೀಯ ರಾಜತಾಂತ್ರಿಕನನ್ನು ನೋಡಿದೆ. ಆಗ ನನ್ನ ಮನದುಂಬಿ ಬಂತು.’ ಎಂದು ಕೊಂಡಾಡಿದರು.
ಬ್ರಿಟಿಷರ ಲಾರ್ಡ್ ಥಾಮಸ್ ಬಾಬಿಂಗ್ಟನ್ ಮೆಕಾಲೆ ಅವರು ಭಾರತದಲ್ಲಿ ಇಂಗ್ಲಿಷ್ ಶಿಕ್ಷಣವನ್ನು ಪರಿಚಯಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಹೀಗಾಗಿ ಅದು ‘ಮೆಕಾಲೆ ಶಿಕ್ಷಣ ಪದ್ಧತಿ’ ಎಂದೇ ಹೆಸರುವಾಸಿಯಾಗಿದೆ.
ಅಯ್ಯರ್‌ರ ‘ಶಂಕಿತ ಚೀನಾ ದಾಳಿ’ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ: ಕಾಂಗ್ರೆಸ್
ನವದೆಹಲಿ: 1962ರಲ್ಲಿ ಭಾರತದ ಮೇಲೆ ಯುದ್ಧ ಸಾರಿದ್ದ ಚೀನಾ ದಾಳಿಯನ್ನು ‘ಶಂಕಿತ ದಾಳಿ’ ಎಂದಿದ್ದ ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಹೇಳಿಕೆ ಕಾಂಗ್ರೆಸ್‌ಗೆ ಮುಜುಗರ ತಂದಿದೆ. ಹೀಗಾಗಿ ಹೇಳಿಕೆಯಿಂದ ಪಕ್ಷ ದೂರ ಸರಿದಿದೆ.ಬುಧವಾರ ಟ್ವೀಟ್ ಮಾಡಿರುವಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ‘ಅಯ್ಯರ್ ಅವರ ವಯಸ್ಸಿಗೆ ಬೆಲೆ ಕೊಡೋಣ. ಕಾಂಗ್ರೆಸ್ ಪಕ್ಷವು ಅಯರ್ ನುಡಿಗಟ್ಟುಗಳಿಂದ ದೂರವಿರುತ್ತದೆ. ಅಕ್ಟೋಬರ್ 20, 1962 ರಂದು ಭಾರತದ ಮೇಲೆ ಚೀನಾದ ಆಕ್ರಮಣ ಆರಂಭಿಸಿದ್ದು ನಿಜ. ಹಾಗೆಯೇ ಮೇ 2020ರ ಆರಂಭದಲ್ಲಿ ಲಡಾಖ್‌ನಲ್ಲಿ ಚೀನಾ ಆಕ್ರಮಣದಿಂದ 20 ನಮ್ಮ ಸೈನಿಕರು ಹುತಾತ್ಮರಾದರು ಮತ್ತು ಆಗ ಯಥಾಸ್ಥಿತಿಗೆ ಭಂಗ ಬಂತು’ ಎಂದಿದ್ದಾರೆ.ಅಯ್ಯರ್ ಕೂಡ ಮಂಗಳವಾರ ರಾತ್ರಿಯೇ ತಾವು ಪ್ರಮಾದವಶಾತ್ ‘ಶಂಕಿತ’ ಬಳಸಿದ್ದಾಗಿ ಹೇಳಿ ಕ್ಷಮೆ ಕೇಳಿದ್ದರು.