ಪ್ರಯಾಗರಾಜ್‌ನ ಕುಂಭಮೇಳದಲ್ಲಿ ಖ್ಯಾತಿ ಗಳಿಸಿದ್ದ ಐಐಟಿ ಬಾಬಾ ಗಾಂಜಾ ಕೇಸಲ್ಲಿ ಬಂಧನ

| N/A | Published : Mar 04 2025, 12:32 AM IST / Updated: Mar 04 2025, 07:06 AM IST

ಸಾರಾಂಶ

ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ಕಾಣಿಸಿಕೊಂಡು ಭಾರಿ ಸುದ್ದಿಯಾಗಿದ್ದ ಐಐಟಿ ಬಾಬಾ (ಅಭಯ್‌ ಸಿಂಗ್‌) ಅವರನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.

ಜೈಪುರ: ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ಕಾಣಿಸಿಕೊಂಡು ಭಾರಿ ಸುದ್ದಿಯಾಗಿದ್ದ ಐಐಟಿ ಬಾಬಾ (ಅಭಯ್‌ ಸಿಂಗ್‌) ಅವರನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. ಬಾಬಾ ಬಳಿ ಗಾಂಜಾ ಪತ್ತೆಯಾದ ಕಾರಣ ಅವರನ್ನು ಬಂಧಿಸಿದ್ದಾರೆ. 

 ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಐಐಟಿ ಬಾಬಾ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೆದರಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ವಿಚಾರಣೆ ನಡೆಸಲು ತೆರಳಿದರು. ಈ ವೇಳೆ ಅವರಲ್ಲಿ ಸಣ್ಣ ಪ್ರಮಾಣದ ಗಾಂಜಾ ಪತ್ತೆಯಾಗಿದೆ. ಕಾರ್ಯೋನ್ಮುಖರಾದ ಪೊಲೀಸರು ಬಾಬಾರನ್ನು ಕೂಡಲೇ ಬಂಧಿಸಿದ್ದರು.

ಕೇಸು ರದ್ದು ಕೋರಿದ್ದ ಸೆಬಿ ಮಾಧವಿಗೆ ಹೈ ತಾತ್ಕಾಲಿಕ ರಿಲೀಫ

ಮುಂಬೈ: ಷೇರುಪೇಟೆ ನಿಯಂತ್ರಣಾ ಸಂಸ್ಥೆ ಸೆಬಿಯ ಮಾಜಿ ಮುಖ್ಯಸ್ಥೆ ಮಾಧವಿ ಬುಚ್‌, ತಮ್ಮ ವಿರುದ್ಧ ಎಫ್‌ಐಆರ್‌ ದಾಖಲು ಕೋರಿ ಸ್ಥಳೀಯ ನ್ಯಾಯಾಲಯ ಶನಿವಾರ ಹೊರಡಿಸಿದ್ದ ಆದೇಶದ ವಿರುದ್ಧ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಲು ಒಪ್ಪಿರುವ ಹೈಕೋರ್ಟ್‌ ಅಲ್ಲಿಯವರೆಗೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸೂಚಿಸಿದೆ. 1994ರಲ್ಲಿ ಷೇರುಪೇಟೆ ಲಿಸ್ಟಿಂಗ್‌ನಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯವು ಮಾಧವಿ ಸೇರಿ ಬಾಂಬೆ ಷೇರುಪೇಟೆಯ ಐವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಎಸಿಬಿಗೆ ಸೂಚಿಸಿತ್ತು.

ವೆಚ್ಚ ಕಡಿತ, ಲಾಭಕ್ಕಾಗಿ 1000 ಸಿಬ್ಬಂದಿ ವಜಾಕ್ಕೆ ಓಲಾ ಕಂಪನಿ ಸಿದ್ಧತೆ

ನವದೆಹಲಿ: ವಿದ್ಯುತ್‌ ಚಾಲಿತ ವಾಹನ ತಯಾರಿಕಾ ಕಂಪನಿ ಓಲಾ ನಷ್ಟದಲ್ಲಿದ್ದು, 1000 ನೌಕರರು ಮತ್ತು ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕುತ್ತಿದೆ ಎಂದು ಮೂಲಗಳು ತಿಳಿಸಿವೆ. ಕಂಪನಿಯ ಇ-ಸ್ಕೂಟರ್‌ಗಳ ಮಾರಾಟ ಕಡಿಮೆಯಾಗಿದ್ದು, ಲಾಭ ಇಲ್ಲದಂತಾಗಿದೆ. ಡಿಸೆಂಬರ್ ತ್ರೈಮಾಸಿಕದಲ್ಲಿ ನಷ್ಟದ ಪ್ರಮಾಣ ಶೇ.50ರಷ್ಟು ಏರಿಕೆಯಾಗಿದೆ. ಈ ಹಿನ್ನೆಲೆ, ವೆಚ್ಚ ಸರಿದೂಗಿಸುವ ಉದ್ದೇಶದಿಂದ ವಿವಿಧ ವಿಭಾಗಗಳಲ್ಲಿರುವ ಹೆಚ್ಚುವರಿ ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ಕಳೆದ ನವೆಂಬರ್‌ನಲ್ಲಷ್ಟೆ 500 ನೌಕರರರನ್ನು ತೆಗೆದುಹಾಕಲಾಗಿತ್ತು.

ಗುರುತಿನ ಚೀಟಿ ದೋಷ ಸರಿಪಡಿಸಲು ಆಯೋಗಕ್ಕೆ ದೀದಿ 24 ಗಂಟೆ ಗಡುವು

ನವದೆಹಲಿ: ಬಿಜೆಪಿ ನಕಲಿ ಮತದಾರರನ್ನು ಸೃಷ್ಟಿಸುತ್ತಿದೆ ಎಂಬ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆರೋಪಕ್ಕೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದ ಹೊರತಾಗಿಯೂ, ‘ಅದು ತನ್ನ ತಪ್ಪನ್ನು ಒಪ್ಪಿ, ತಿದ್ದಿಕೊಳ್ಳಬೇಕು’ ಎಂದು ಟಿಎಂಸಿ ಆಗ್ರಹಿಸಿದೆ. ಜೊತೆಗೆ, ಅಗತ್ಯ ಬಿದ್ದರೆ ಧರಣಿ ನಡೆಸುವುದಾಗಿಯೂ ಮಮತಾ ಎಚ್ಚರಿಸಿದ್ದಾರೆ. ‘ಆಯೋಗ ತಪ್ಪಾಗಿರುವುದನ್ನು ಒಪ್ಪಿದೆಯಾದರೂ, ಅದು ತಪ್ಪೆಂದು ಒಪ್ಪಿಕೊಳ್ಳುತ್ತಿಲ್ಲ. 24 ಗಂಟೆಯಲ್ಲಿ ಇದನ್ನು ಸರಿಪಡಿಸದಿದ್ದರೆ ಸಿಎಂ ಮಮತಾ ಅವರು ಆಯೋಗದ ಕಚೇರಿಯ ಎದುರು ಉಪವಾಸ ಕೂರುತ್ತಾರೆ’ ಎಂದು ಟಿಎಂಸಿ ಎಚ್ಚರಿಸಿದೆ.

ಭಾರತದ ನದಿಗಳಲ್ಲಿ 6,327 ಡಾಲ್ಫಿನ್‌ಗಳು: ಮೊದಲ ಡಾಲ್ಫಿನ್ ವರದಿ

ಸಾಸನ್: ಭಾರತದ ನದಿಗಳಲ್ಲಿ 6,327 ಡಾಲ್ಫಿನ್‌ಗಳು ನೆಲೆಗೊಂಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿದ ದೇಶದ ಮೊದಲ ನದಿ ಡಾಲ್ಫಿನ್ ಅಂದಾಜಿನ ವರದಿ ತಿಳಿಸಿದೆ. ಸೋಮವಾರ ಗುಜರಾತ್‌ನ ಸಾಸನ್‌ನಲ್ಲಿ ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ (ಎನ್‌ಬಿಡಬ್ಲುಎಲ್) 7ನೇ ಸಭೆಯಲ್ಲಿ ಪ್ರಧಾನಿ ವರದಿಯನ್ನು ಬಿಡುಗಡೆಗೊಳಿಸಿದರು. 8 ರಾಜ್ಯಗಳ 28 ನದಿಗಳಲ್ಲಿ, 3150 ದಿನಗಳ ಕಾಲ 8500 ಕಿ.ಮೀ. ದೂರ ಕ್ರಮಿಸಿ ಡಾಲ್ಫಿನ್‌ಗಳ ಸಮೀಕ್ಷೆ ನಡೆಸಲಾಗಿತ್ತು. ಡಾಲ್ಫಿನ್‌ ಸಂಖ್ಯೆಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದು, ಬಿಹಾರ, ಪ.ಬಂಗಾಳ, ಅಸ್ಸಾಂ ನಂತರದ ಸ್ಥಾನಗಳಲ್ಲಿವೆ ಎಂದು ವರದಿ ತಿಳಿಸಿದೆ.