ಸಾರಾಂಶ
ನವದೆಹಲಿ: ಭಾರತದೊಂದಿಗೆ ರಾಜತಾಂತ್ರಿಕ ಸಂಬಂಧ ಹಾಳು ಮಾಡಿಕೊಂಡಿರುವ ಮಾಲ್ಡೀವ್ಸ್, ಚೀನಾದ ಸಾಲದ ಸುಳಿಯಲ್ಲಿ ಸಿಕ್ಕಿಬಿದ್ದಿದೆ ಎನ್ನಲಾಗಿದೆ.
ಇದಕ್ಕೆ ಪೂರಕವೆಂಬಂತೆ ಶೀಘ್ರದಲ್ಲೇ ಮಾಲ್ಡೀವ್ಸ್ ತನ್ನ ನೀತಿಗಳಲ್ಲಿ ಬದಲಾವಣೆ ತರದಿದ್ದರೆ, ಮತ್ತಷ್ಟು ಸಮಸ್ಯೆಗೆ ಸಿಲುಕಿಕೊಳ್ಳಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಎಚ್ಚರಿಕೆ ನೀಡಿದೆ ಎಂದು ವರದಿಗಳು ತಿಳಿಸಿವೆ.
ಮೊಹಮದ್ ಮಯಿಜು ಮಾಲ್ಡೀವ್ಸ್ ಅಧ್ಯಕ್ಷರಾದ ಬಳಿಕ ಚೀನಾ ಮತ್ತು ಮಾಲ್ಡೀವ್ಸ್ ಸಂಬಂಧ ಮತ್ತಷ್ಟು ಬಿಗಿಗೊಂಡಿದ್ದು, ಹಲವು ಅಭಿವೃದ್ಧಿ ಕಾರ್ಯಗಳಿಗಾಗಿ ಚೀನಾ ಹೂಡಿಕೆಯ ಘೋಷಣೆ ಮಾಡಿದೆ.
ಆದರೆ ಈಗಾಗಲೇ ಮಾಲ್ಡೀವ್ಸ್ 2 ಲಕ್ಷ ಕೋಟಿ ರು.ಗೂ ಹೆಚ್ಚಿನ ಸಾಲ ಹೊಂದಿದ್ದು, ಈ ಪೈಕಿ ಚೀನಾವೊಂದಕ್ಕೇ 25000 ಕೋಟಿ ರು. ಸಾಲ ಬಾಕಿ ಉಳಿಸಿಕೊಂಡಿದೆ. ಹೊಸ ಸಾಲ ಪಡೆಯಲು ಚೀನಾದ ಮತ್ತಷ್ಟು ಷರತ್ತು ಒಪ್ಪಲೇ ಬೇಕಿದೆ.
ಒಪ್ಪದೇ ಇದ್ದರೆ ಸಾಲ ಸಿಗುವುದಿಲ್ಲ, ಸಿಕ್ಕಿದರೆ ಸಾಲದ ಸುಳಿಯಿಂದ ಹೊರಬರಲು ಸಾಧ್ಯವಾಗದ ಪರಿಸ್ಥಿತಿ ಸಿಲುಕಬೇಕಾಗಲಿದೆ.ಹೀಗಾಗಿಯೇ ಶೀಘ್ರವೇ ತನ್ನ ನೀತಿಗಳನ್ನು ಬದಲಾವಣೆ ತಂದುಕೊಳ್ಳಬೇಕು.
ಇಲ್ಲದಿದ್ದರೆ ಇದು ದ್ವೀಪ ರಾಷ್ಟ್ರಕ್ಕೆ ಮತ್ತಷ್ಟು ಕಠಿಣ ಸಮಯವನ್ನು ತಂದೊಡ್ಡಲಿದೆ ಎಂದು ಐಎಂಎಫ್ ಎಚ್ಚರಿಸಿದೆ.
ಈಗಾಗಲೇ ಚೀನಾದ ಸಾಲದ ಸುಳಿಗೆ ಸಿಲುಕಿ ಶ್ರೀಲಂಕಾ, ಪಾಕಿಸ್ತಾನ ಸೇರಿದಂತೆ ಹಲವು ದೇಶಗಳು ಸಂಕಷ್ಟಕ್ಕೀಡಾಗಿವೆ. ಹೀಗಾಗಿ ಅನಿವಾರ್ಯವಾಗಿ ಚೀನಾದ ಯೋಜನೆಗಳನ್ನು ಒಪ್ಪಿಕೊಳ್ಳಲೇ ಬೇಕಾದ ತುರ್ತಿಗೆ ಸಿಲುಕಿಕೊಂಡಿವೆ.