ಸಾರಾಂಶ
ಭೂಮಿ ಮತ್ತು ಸಾಗರದ ಮೇಲ್ಪದರವನ್ನು ಅಧ್ಯಯನ ಮಾಡುವ ಮೂಲಕ ಹವಾಮಾನದ ಕುರಿತು ನಿಖರ ಮಾಹಿತಿ ಸಂಗ್ರಹಿಸಿಕೊಡುವ ಉದ್ದೇಶ ಹೊಂದಿರುವ ಇನ್‌ಸ್ಯಾಟ್ -3ಡಿಎಸ್ ಉಪಗ್ರಹವನ್ನು ಇಸ್ರೋ ಶನಿವಾರ ಯಶಸ್ವಿಯಾಗಿ ಉಡ್ಡಯನ ಮಾಡಿದೆ.
ಶ್ರೀಹರಿಕೋಟಾ: ಭೂಮಿ ಮತ್ತು ಸಾಗರದ ಮೇಲ್ಪದರವನ್ನು ಅಧ್ಯಯನ ಮಾಡುವ ಮೂಲಕ ಹವಾಮಾನದ ಕುರಿತು ನಿಖರ ಮಾಹಿತಿ ಸಂಗ್ರಹಿಸಿಕೊಡುವ ಉದ್ದೇಶ ಹೊಂದಿರುವ ಇನ್‌ಸ್ಯಾಟ್ -3ಡಿಎಸ್ ಉಪಗ್ರಹವನ್ನು ಇಸ್ರೋ ಶನಿವಾರ ಯಶಸ್ವಿಯಾಗಿ ಉಡ್ಡಯನ ಮಾಡಿದೆ.
‘ನಾಟಿ ಬಾಯ್’ ಎಂದೇ ಕರೆಸಿಕೊಳ್ಳುವ ಜಿಎಸ್‌ಎಲ್‌ವಿ ರಾಕೆಟ್ ಯಶಸ್ವಿಯಾಗಿ ಉಪಗ್ರವನ್ನು ಕಕ್ಷೆಗೆ ಸೇರಿಸಿದೆ. ಯಶಸ್ವಿನ ಬಳಿಕ ಮಾತನಾಡಿದ ಯೋಜನೆಯ ನಿರ್ದೇಶಕ, ‘ನಾಟಿ ಬಾಯ್ ಇದೀಗ ನಿಷ್ಠ, ಶಿಸ್ತಿನ ಹುಡುಗನಾಗಿ ಬೆಳೆದಿದ್ದಾನೆ’ ಎಂದು ಹೇಳಿದ್ದಾರೆ.
ಇನ್‌ಸ್ಯಾಟ್- 3 ಡಿಎಸ್ ಉಪಗ್ರಹ 2274 ಕೇಜಿ ತೂಕವಿದ್ದು, ಹವಾಮಾನ ಅಧ್ಯಯನಕ್ಕೆ ಉಡಾವಣೆ ಮಾಡುತ್ತಿರುವ 3ನೇ ಸರಣಿ ಉಪಗ್ರಹವಾಗಿದೆ. ಶ್ರೀಹರಿಕೋಟಾದಿಂದ ಶನಿವಾರ ಸಾಯಂಕಾಲ 5.35ಕ್ಕೆ ಉಡಾವಣೆಗೊಂಡ ಜಿಎಸ್‌ಎಲ್‌ವಿ- ಎಫ್14 ರಾಕೆಟ್ ಯಶಸ್ವಿಯಾಗಿ ಉಪಗ್ರಹವನ್ನು ಭೂಸ್ಥಿರ ಕಕ್ಷೆಯಲ್ಲಿ ಸ್ಥಾಪಿಸಿದೆ.
ಇದರ ನಿರ್ಮಾಣಕ್ಕೆ ಭೂವಿಜ್ಞಾನ ಸಚಿವಾಲಯ ಧನ ಸಹಾಯ ಒದಗಿಸಿದೆ. 3ನೇ ಉಪಗ್ರಹ:ಹವಾಮಾನ ಅಧ್ಯಯನಕ್ಕೆ ಭಾರತ ಇಂಡಿಯನ್ ನ್ಯಾಷನಲ್ ಸ್ಯಾಟಲೈಟ್ ಸಿಸ್ಟಮ್ (ಇನ್‌ಸ್ಯಾಟ್) ಹೆಸರಿನಲ್ಲಿ ಸರಣಿ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿದ್ದು, ಇದು 3ನೇ ಉಪಗ್ರಹವಾಗಿದೆ ಈಗಾಗಲೇ 2013ರಲ್ಲಿ ಇನ್‌ಸ್ಯಾಟ್-3ಡಿ, 2016ರಲ್ಲಿ ಇನ್‌ಸ್ಯಾಟ್-3ಡಿಆರ್ ಉಪಗ್ರಹಗಳನ್ನು ಇಸ್ರೋ ಉಡಾವಣೆ ಮಾಡಿತ್ತು.
ಸೋಮನಾಥ್ ಹರ್ಷ: ಜಿಎಸ್‌ಎಲ್‌ವಿ ರಾಕೆಟ್ ಯಶಸ್ವಿಯಾಗಿರುವುದಕ್ಕೆ ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಅವರು ಹರ್ಷ ವ್ಯಕ್ತಪಡಿಸಿದ್ದು,‘ ಇದು ಮುಂದಿನ ಯೋಜನೆಗಳಿಗೆ ಭರವಸೆಯನ್ನು ಒದಗಿಸಿದೆ.
ಉತ್ತಮವಾದ ಕಕ್ಷೆಯಲ್ಲಿ ಉಪಗ್ರಹವನ್ನು ರಾಕೆಟ್ ಸ್ಥಾಪಿಸಿದೆ. ಇನ್‌ಸ್ಯಾಟ್- 3ಡಿಎಸ್ ಮುಂದಿನ ತಲೆಮಾರಿನ ಹವಾಮಾನ ಉಪಗ್ರಹವಾಗಿದ್ದು, ನಿಖರವಾದ ಮಾಹಿತಿಯನ್ನು ಒದಗಿಸಲಿದೆ’ ಎಂದು ಹೇಳಿದ್ದಾರೆ.
ನಾಟಿ ಬಾಯ್ ಎಂಬ ಹೆಸರೇಕೆ?
ಜಿಎಸ್‌ಎಲ್‌ವಿ ರಾಕೆಟ್ ಈವರೆಗೆ ಕೈಗೊಂಡಿರುವ ಉಡಾವಣೆಗಳಲ್ಲಿ ಶೇ.40ರಷ್ಟು ವೈಫಲ್ಯ ಅನುಭವಿಸಿದೆ. ಈವರೆಗೆ 15 ಉಡಾವಣೆಗಳನ್ನು ಜಿಎಸ್‌ಎಲ್‌ವಿಯಲ್ಲಿ ಕೈಗೊಳ್ಳಲಾಗಿದೆ. 2023ರಲ್ಲಿ ನಡೆದ ಉಡಾವಣೆ ಯಶಸ್ವಿಯಾಗಿತ್ತು. ಆದರೆ ಅದರ ಹಿಂದಿನ ಯೋಜನೆ ವಿಫಲವಾಗಿತ್ತು. ಹೀಗಾಗಿ ಜಿಎಸ್‌ಎಲ್‌ವಿಗೆ ನಾಟಿ ಬಾಯ್ ಎಂದು ಕರೆಯಲಾಗುತ್ತದೆ.