ಧೂಮ್‌-2 ಸ್ಫೂರ್ತಿ : ಮ್ಯೂಸಿಯಂ ದರೋಡೆಗೆ ಯತ್ನಿಸಿ ಹಾರಲಾಗದೇ ಕೆಳಗೆ ಉರುಳಿಬಿದ್ದು ಸಿಕ್ಕಿಬಿದ್ದ ಕಳ್ಳ!

| Published : Sep 05 2024, 12:31 AM IST / Updated: Sep 05 2024, 04:44 AM IST

ಸಾರಾಂಶ

ಧೂಮ್‌-2 ಚಿತ್ರದಲ್ಲಿ ಹೃತಿಕ್ ರೋಶನ್ ಮಾಡಿದಂತೆ ಮ್ಯೂಸಿಯಂ ದರೋಡೆಗೆ ಯತ್ನಿಸಿದ ಕಳ್ಳ, 23 ಅಡಿ ಎತ್ತರದಿಂದ ಬಿದ್ದು ಸಿಕ್ಕಿಬಿದ್ದಿದ್ದಾನೆ. 15 ಕೋಟಿ ಮೌಲ್ಯದ ಕಲಾಕೃತಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಭೋಪಾಲ್‌: ಧೂಮ್‌-2 ಚಿತ್ರದಲ್ಲಿ ನಟ ಹೃತಿಕ್‌ ರೋಶನ್‌ ನಿರ್ವಹಿಸಿದ ಪಾತ್ರದಿಂದ ಪ್ರಭಾವಿತನಾಗಿ ಕಳ್ಳನೊಬ್ಬ ಇಲ್ಲಿನ ಮ್ಯೂಸಿಯಂ ದರೋಡೆಗೆ ಯತ್ನಿಸಿದ ಘಟನೆ ನಡೆದಿದೆ. ಆದರೆ ಚಿತ್ರದಲ್ಲಿ ಹೃತಿಕ್‌ ಹಾರಿದ ರೀತಿ ಸರಿಯಾಗಿ ಹಾರಲಾಗದೇ ಕೆಳಗೆ ಉರುಳಿಬಿದ್ದು ಸಿಕ್ಕಿಹಾಕಿಕೊಂಡಿದ್ದಾನೆ.

ವಿನೋದ್‌ ಎಂಬಾತ ಭಾನುವಾರ ವಸ್ತುಸಂಗ್ರಹಾಲಯ ಪ್ರವೇಶಕ್ಕೆ ಟಿಕೆಟ್‌ ಖರೀದಿಸಿ ರಾತ್ರಿ ಯಾರಿಗೂ ಗೊತ್ತಾಗದಂತೆ ಅಲ್ಲೇ ಉಳಿದುಕೊಂಡಿದ್ದಾನೆ. ಸೋಮವಾರ ಮ್ಯೂಸಿಯಂಗೆ ರಜೆ ಇದ್ದ ಕಾರಣ 2 ಗ್ಯಾಲರಿ ಮುರಿದು ಒಳಗಿದ್ದ ಅಪರೂಪದ ಕಲಾಕೃತಿ, ಚಿನ್ನದ ನಾಣ್ಯಗಳನ್ನು ದೋಚಿದ್ದಾನೆ. ಬಳಿಕ ಆ ಕಟ್ಟಡದಿಂದ ಹೊರಗೆ ಬರುವ ಯತ್ನದ ವೇಳೆ 23 ಅಡಿ ಎತ್ತರದಿಂದ ಕೆಳಗೆ ಬಿದ್ದು ಪ್ರಜ್ಞೆ ತಪ್ಪಿ ಹೋಗಿದೆ.

ಮರುದಿನ ಭದ್ರತಾ ಸಿಬ್ಬಂದಿ ಒಡೆದ ಗಾಜು ಮತ್ತು ಕೆಲ ವಸ್ತುಗಳು ಕಾಣೆಯಾಗಿದ್ದನ್ನು ಕಂಡು ಹುಡುಕಾಡಿದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವಿನೋದ್‌ ಸಿಕ್ಕಿಬಿದ್ದಿದ್ದಾನೆ. ಆತನ ಬಳಿ ಗುಪ್ತರ ಬಂಗಾರ ನಾಣ್ಯಗಳು, ಬ್ರಿಟಿಷ್ ಹಾಗೂ ನವಾಬರ ಕಾಲದ ವಸ್ತುಗಳು ತುಂಬಿದ್ದ ಚೀಲ ದೊರಕಿದೆ. ಇವುಗಳ ಮೌಲ್ಯ ಸರಾಸರಿ 15 ಕೋಟಿ ರು. ಇರಬಹುದು ಎನ್ನಲಾಗಿದೆ.