ಸಾರಾಂಶ
ಇತ್ತೀಚೆಗೆ ಇಹಲೋಕ ತ್ಯಜಿಸಿದ ಟಾಟಾ ಉದ್ಯಮ ಸಾಮ್ರಾಜ್ಯದ ಅಧಿಪತಿ ರತನ್ ಟಾಟಾ ಅವರಿಗೆ ನಾಯಿಗಳ ಬಗ್ಗೆ ಇರುವ ಪ್ರೀತಿ ತಿಳಿದಿದೆ. ಆದರೆ, ಅವರು ಬಿಟ್ಟುಹೋದ 10,000 ಕೋಟಿ ರು. ಮೌಲ್ಯದ ಆಸ್ತಿಯಲ್ಲಿ ತಮ್ಮ ನೆಚ್ಚಿನ ಜರ್ಮನ್ ಶೆಫರ್ಡ್ ನಾಯಿ ‘ಟೀಟೂ’ವಿಗೂ ಪಾಲು ನೀಡಿರುವ ಕುತೂಹಲಕರ ಸಂಗತಿ ಬೆಳಕಿಗೆ
ಮುಂಬೈ: ಇತ್ತೀಚೆಗೆ ಇಹಲೋಕ ತ್ಯಜಿಸಿದ ಟಾಟಾ ಉದ್ಯಮ ಸಾಮ್ರಾಜ್ಯದ ಅಧಿಪತಿ ರತನ್ ಟಾಟಾ ಅವರಿಗೆ ನಾಯಿಗಳ ಬಗ್ಗೆ ಇರುವ ಪ್ರೀತಿ ಎಲ್ಲರಿಗೂ ತಿಳಿದಿದೆ. ಆದರೆ, ಅವರು ಬಿಟ್ಟುಹೋದ 10,000 ಕೋಟಿ ರು. ಮೌಲ್ಯದ ಆಸ್ತಿಯಲ್ಲಿ ತಮ್ಮ ನೆಚ್ಚಿನ ಜರ್ಮನ್ ಶೆಫರ್ಡ್ ನಾಯಿ ‘ಟೀಟೂ’ವಿಗೂ ಪಾಲು ನೀಡಿರುವ ಕುತೂಹಲಕರ ಸಂಗತಿ ಬೆಳಕಿಗೆ ಬಂದಿದೆ.
ಅಷ್ಟೇ ಅಲ್ಲ, ತಮ್ಮ ಮನೆಗೆಲಸದವರು ಹಾಗೂ ಮಲಸಹೋದರ, ಸಹೋದರಿಯರಿಗೂ ಟಾಟಾ ತಮ್ಮ ಆಸ್ತಿಯನ್ನು ಹಂಚಿದ್ದಾರೆ. ಉಳಿದ ಆಸ್ತಿಯನ್ನು ತಮ್ಮ ಸಮಾಜ ಸೇವಾ ಪ್ರತಿಷ್ಠಾನಕ್ಕೆ ಬರೆದಿದ್ದಾರೆ.
ವಿಲ್‌ನಲ್ಲಿ ನಾಯಿಗೆ ‘ಮಿತಿಯಿಲ್ಲದ ಆರೈಕೆ’ ಸಿಗಬೇಕು ಎಂದು ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಟಾಟಾ ಮಾಡಿದ್ದಾರೆ. ಅದನ್ನು ತಮ್ಮ ಜೊತೆಗೆ ದೀರ್ಘಕಾಲದಿಂದ ಇದ್ದ ಬಾಣಸಿಗ ರಾಜನ್ ಶಾ ನೋಡಿಕೊಳ್ಳಬೇಕು ಎಂದು ಬರೆದಿದ್ದಾರೆ. ಇನ್ನು, ತಮ್ಮ ಮನೆಗೆಲಸದ ವ್ಯಕ್ತಿ ಸುಬ್ಬಯ್ಯ ಹಾಗೂ ತಮ್ಮ ಸಹಾಯಕ ಶಂತನು ನಾಯ್ಡು ಅವರ ಹೆಸರಿಗೂ ಆಸ್ತಿ ಬರೆದಿದ್ದಾರೆ.
ಇನ್ನುಳಿದ ಆಸ್ತಿಯನ್ನು ತಮ್ಮ ಮಲಸಹೋದರ ಜಿಮ್ಮಿ ಟಾಟಾ, ಮಲಸಹೋದರಿಯರಾದ ಶಿರೀನ್ ಹಾಗೂ ಡಿಯಾನಾ ಜೀಜಾಬಾಯ್, ಇನ್ನಿತರ ಮನೆಗೆಲಸದವರಿಗೆ ಹಂಚಿದ್ದಾರೆ.
ರತನ್ ಟಾಟಾ ಹೆಸರಿನಲ್ಲಿ ಅಲಿಬಾಗ್‌ನಲ್ಲಿ 2000 ಚದರಡಿಯ ಬೀಚ್ ಬಂಗಲೆ, ಜುಹುನಲ್ಲಿ ಎರಡಂತಸ್ತಿನ ಮನೆ, 350 ಕೋಟಿ ರು. ನಿಶ್ಚಿತ ಠೇವಣಿ, ಟಾಟಾ ಸನ್ಸ್‌ನಲ್ಲಿ ಶೇ.0.83ರಷ್ಟು ಷೇರುಗಳು ಇದ್ದವು. ಈ ಪೈಕಿ ಷೇರುಗಳು ರತನ್ ಟಾಟಾ ಪ್ರತಿಷ್ಠಾನಕ್ಕೆ ವರ್ಗಾವಣೆಯಾಗಲಿವೆ. ರತನ್ ಟಾಟಾ ಸ್ವೀಕರಿಸಿದ ಪ್ರಶಸ್ತಿಗಳು ಟಾಟಾ ಸೆಂಟ್ರಲ್ ಆರ್ಕೈವ್ಸ್‌ಗೆ ಸೇರಲಿವೆ. ಬಾಂಬೆ ಹೈಕೋರ್ಟ್ ಈ ವಿಲ್ ಜಾರಿಗೊಳಿಸಲಿದೆ.
ಮನೆಗೆಲಸದ ಸುಬ್ಬಯ್ಯ ಮತ್ತು ರಾಜನ್‌ರನ್ನು ರತನ್ ಟಾಟಾ ತುಂಬಾ ಪ್ರೀತಿಸುತ್ತಿದ್ದರು. ತಾವು ವಿದೇಶಕ್ಕೆ ಹೋದಾಗಲೆಲ್ಲ ಇವರಿಬ್ಬರಿಗೂ ದುಬಾರಿ ಬಟ್ಟೆಗಳನ್ನು ತರುತ್ತಿದ್ದರು ಎಂದು ಹೇಳಲಾಗಿದೆ.
ಇನ್ನು, ‘ಟೀಟೂ’ ಮೇಲೆ ಅವರು ಪ್ರಾಣವನ್ನೇ ಇಟ್ಟಿದ್ದರು. ಒಮ್ಮೆ ಬ್ರಿಟನ್ ರಾಜ ಚಾರ್ಲ್ಸ್‌ರಿಂದ ಅರಮನೆಯಲ್ಲಿ ಪ್ರಶಸ್ತಿ ಸ್ವೀಕರಿಸಬೇಕಾಗಿದ್ದ ಕಾರ್ಯಕ್ರಮಕ್ಕೆ ನಾಯಿಗೆ ಹುಷಾರಿಲ್ಲ ಎಂದು ಟಾಟಾ ಗೈರಾಗಿದ್ದರು. ಪ್ರಶಸ್ತಿ ಸ್ವೀಕರಿಸಲು ಟಾಟಾ ಏಕೆ ಬರಲಿಲ್ಲ ಎಂಬುದನ್ನು ತಿಳಿದುಕೊಂಡ ಕಿಂಗ್ ಚಾರ್ಲ್ಸ್, ‘ನಿಜವಾದ ಮನುಷ್ಯ ಅಂದರೆ ರತನ್ ಟಾಟಾ. ಈ ಕಾರಣಕ್ಕೇ ಟಾಟಾ ಉದ್ಯಮ ಸಾಮ್ರಾಜ್ಯ ಹೀಗಿದೆ’ ಎಂದು ಹೊಗಳಿದ್ದರು ಎನ್ನಲಾಗಿದೆ.