ಸಾರಾಂಶ
ಹೋಟೆಲ್‌ಗಳಲ್ಲಿ ಸ್ವಚ್ಛತೆಗೆ ಕಾಪಾಡಲು ಮಾಲೀಕರು/ ನೌಕರರ ಹೆಸರು ಪ್ರದರ್ಶನಕ್ಕೆ ಉತ್ತರ ಪ್ರದೇಶ ಹಾಗೂ ಹಿಮಾಚಲ ಪ್ರದೇಶ ಸರ್ಕಾರಗಳು ಆದೇಶಿಸಿವೆ.
ಲಖನೌ/ಶಿಮ್ಲಾ: ತಿರುಮಲ ಲಡ್ಡು ಕಲಬೆರಕೆ ವಿವಾದ ಹಾಗೂ ಉತ್ತರ ಪ್ರದೇಶದ ವಿವಿಧೆಡೆ ತಿಂಡಿ/ಪಾನೀಯಗಳಲ್ಲಿ ಮೂತ್ರ ಬೆರೆಸಿದ ವಿವಾದ ಉಂಟಾದ ಕಾರಣ ಹೊಣೆಗಾರಿಕೆ ಹೆಚ್ಚಿಸಲು ಹಾಗೂ ಹೋಟೆಲ್‌ಗಳಲ್ಲಿ ಸ್ವಚ್ಛತೆಗೆ ಕಾಪಾಡಲು ಮಾಲೀಕರು/ ನೌಕರರ ಹೆಸರು ಪ್ರದರ್ಶನಕ್ಕೆ ಉತ್ತರ ಪ್ರದೇಶ ಹಾಗೂ ಹಿಮಾಚಲ ಪ್ರದೇಶ ಸರ್ಕಾರಗಳು ಆದೇಶಿಸಿವೆ.
‘ಉತ್ತರ ಪ್ರದೇಶದಲ್ಲಿನ ಎಲ್ಲ ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಬಾಣಸಿಗರು ಮತ್ತು ಸಪ್ಲೈಯರ್‌ಗಳು ಕೆಲಸದ ಅವಧಿಯಲ್ಲಿ ಮಾಸ್ಕ್ ಮತ್ತು ಕೈಗೆ ಗ್ಲೌಸ್ ಧರಿಸಬೇಕು. ಹೋಟೆಲ್‌ನಲ್ಲಿ ಸಿಸಿಟೀವಿಗಳನ್ನು ಅಳವಡಿಸಬೇಕು. ಬಾಣಸಿಗರು ಮತ್ತು ಸಪ್ಲೈಯರ್‌ಗಳ ಜೊತೆಗೆ ನಿರ್ವಾಹಕರು, ಮಾಲೀಕರು ಮತ್ತು ವ್ಯವಸ್ಥಾಪಕರು ತಮ್ಮ ಹೆಸರುಗಳನ್ನು ಮತ್ತು ವಿಳಾಸಗಳನ್ನು ಹೋಟೆಲ್‌ನಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು’ ಎಂದು ಯೋಗಿ ಸರ್ಕಾರ ಸೂಚಿಸಿದೆ.
ಹಿಮಾಚಲದಲ್ಲೂ: ಬುಧವಾರ ಇದೇ ಮಾದರಿಯಲ್ಲಿ ಹಿಮಾಚಲ ಪ್ರದೇಶ ಸರ್ಕಾರ ಕೂಡ ಆದೇಶ ಹೊರಡಿಸಿದ್ದು, ಹೋಟೆಲ್‌ಗಳಲ್ಲಿ ಸ್ವಚ್ಛತೆ ಕಾಪಾಡಬೇಕು ಹಾಗೂ ಹೋಟೆಲ್/ಅಂಗಡಿ ಮಾಲೀಕರ ಹೆಸರನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಎಲ್ಲ ಬೀದಿ ಬದಿ ವ್ಯಾಪಾರಿಗಳು ತಮ್ಮ ಐಡೆಂಟಿಟಿ ಕಾರ್ಡ್ ಪ್ರದರ್ಶಿಸಬೇಕು ಎಂದು ಆದೇಶಿಸಿದೆ.
==
ಕಲಬೆರಕೆ ತುಪ್ಪ ಪೂರೈಕೆ ಆರೋಪ: ಎಆರ್ ಡೈರಿ ವಿರುದ್ಧ ಟಿಟಿಡಿ ಎಫ್‌ಐಆರ್
ತಿರುಪತಿ: ದೇಗುಲದ ಪ್ರಸಾದ ತಯಾರಿಕೆಗೆ ಬಳಸಲು ಪೂರೈಸಿದ್ದ ತುಪ್ಪ ಕಲಬೆರಕೆಯಾಗಿತ್ತು ಎಂಬ ಕಾರಣಕ್ಕೆ ತಮಿಳುನಾಡಿನ ದಿಂಡಿಗುಲ್ ಮೂಲದ ಎಆರ್ ಡೈರಿ ಫುಡ್ಸ್ ವಿರುದ್ಧ ತಿರುಪತಿ ತಿರುಮಲ ದೇಗುಲ ಮಂಡಳಿ (ಟಿಟಿಡಿ) ದೂರು ದಾಖಲಿಸಿದೆ.
ದೇಗುಲಕ್ಕೆ ಪೂರೈಕೆ ಮಾಡುತ್ತಿರುವ ತುಪ್ಪ ಕಲಬೆರಕೆಯಾಗಿದೆ ಎಂಬ ಅನುಮಾನಗಳ ಹಿನ್ನೆಲೆಯಲ್ಲಿ ಟಿಟಿಡಿ, ತುಪ್ಪ ಪೂರೈಸುವ ನಾಲ್ಕು ಸಂಸ್ಥೆಗಳ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿತ್ತು. ಈ ಸಂಬಂಧ ವರದಿ ನೀಡಿದ್ದ ಗುಜರಾತ್ ಮೂಲದ ಪ್ರಯೋಗಾಲಯವು, ತಮಿಳುನಾಡು ಮೂಲದ ಸಂಸ್ಥೆ ಪೂರೈಸಿದ್ದ ತುಪ್ಪದಲ್ಲಿ ದನ, ಹಂದಿಯ ಕೊಬ್ಬಿನ ಅಂಶ ಮತ್ತು ಮೀನಿನ ಎಣ್ಣೆ ಪತ್ತೆಯಾಗಿದೆ ಎಂದು ವರದಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಟಿಟಿಡಿ ದೂರು ದಾಖಲಿಸಿದೆ.
ಆದರೆ ತಾನು ಶುದ್ಧತೆಯ ಪರೀಕ್ಷೆಗೆ ಒಳಪಡಿಸಿದ ಮತ್ತು ಶುದ್ಧತೆಯ ಪ್ರಮಾಣಪತ್ರ ಹೊಂದಿದ ತುಪ್ಪವನ್ನು ಮಾತ್ರವೇ ತಿರುಪತಿಗೆ ಸರಬರಾಜು ಮಾಡಿದ್ದಾಗಿ ಎಆರ್ ಡೈರಿ ಫುಡ್ಸ್ ಇತ್ತೀಚೆಗೆ ಸ್ಪಷ್ಟನೆ ನೀಡಿತ್ತು.
==
ತಿರುಪತಿ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು ಬೆರಕೆ ತಪ್ಪು: ಒವೈಸಿ
ಮುಂಬೈ: ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ದನ ಹಾಗೂ ಹಂದಿ ಕೊಬ್ಬು ಮತ್ತು ಮೀನಿನ ಎಣ್ಣೆಯನ್ನು ಬಳಸಿದ್ದನ್ನು ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಖಂಡಿಸಿದ್ದಾರೆ. ಮುಂಬೈನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಸಾದುದ್ದೀನ್ ಓವೈಸಿ ಅವರು, ‘ತಿರುಪತಿ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಿರುವ ಬಗ್ಗೆ ಮಾಹಿತಿ ಬೆಳಕಿಗೆ ಬಂದಿದೆ. ಈ ರೀತಿ ನಡೆದಿದ್ದರೆ ಅದು ತಪ್ಪು. ನಾವೂ ಇದನ್ನು ತಪ್ಪಾಗಿ ಪರಿಗಣಿಸುತ್ತೇವೆ, ಹೀಗಾಗಬಾರದಿತ್ತು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಬಾರದು’ ಎಂದು ಹೇಳಿದರು.
==
28ಕ್ಕೆ ತಿರುಮಲಕ್ಕೆ ಜಗನ್: ನಾಯ್ಡು ವಿರುದ್ಧ ಕ್ಷಮಾ ಪೂಜೆ
ಅಮರಾವತಿ: ತಮ್ಮ ಅವಧಿಯಲ್ಲಿ ತಿರುಪತಿ ಲಡ್ಡುಗೆ ದನ, ಹಂದಿ ಮಾಂಸದ ಕೊಬ್ಬಿನ ಅಂಶವಿದ್ದ ತುಪ್ಪ ಬಳಸಲಾಗಿತ್ತು ಎಂದು ಆರೋಪಿಸಿದ್ದ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿರುದ್ಧ ಇದೀಗ ಹಿಂದಿನ ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿ ಸಿಡಿದೆದ್ದಿದ್ದಾರೆ.
ತಿರುಪತಿ ಲಡ್ಡು ವಿರುದ್ಧ ಇಂಥದ್ದೊಂದು ಸುಳ್ಳು ಆರೋಪ ಮಾಡಿರುವ ಚಂದ್ರಬಾಬು ನಾಯ್ಡು ಅವರ ಪಾಪದ ಪ್ರಾಯಶ್ಚಿತ್ತಕ್ಕಾಗಿ ಸೆ.28ರಂದು ರಾಜ್ಯವ್ಯಾಪಿ ದೇಗುಲಗಳಲ್ಲಿ ಪೂಜೆಗೆ ಅವರು ಕರೆ ನೀಡಿದ್ದಾರೆ. ಅಲ್ಲದೆ, ಅಂದು ಖುದ್ದು ತಿರುಪತಿಗೆ ಭೇಟಿ ನೀಡಿ ಪೂಜೆ ನೆರವೇರಿಸಲಿದ್ದಾರೆ.
ಚಂದ್ರಬಾಬು ನಾಯ್ಡು ಮಾಡಿರುವ ಪಾಪದ ಪ್ರಾಯಶ್ಚಿತ್ತಕ್ಕಾಗಿ ಸೆ.28ರ ಶನಿವಾರ ರಾಜ್ಯವ್ಯಾಪಿ ದೇಗುಲಗಳಲ್ಲಿ ಪೂಜೆ ಮಾಡಲು ವೈಎಸ್‌ಆರ್‌ಸಿಪಿ ಕರೆ ನೀಡುತ್ತದೆ ಎಂದು ಜಗನ್ ಟ್ವೀಟರ್‌ನಲ್ಲಿ ಹೇಳಿದ್ದಾರೆ.