ಸಾರಾಂಶ
ವಾಷಿಂಗ್ಟನ್: ‘ಭಾರತದಲ್ಲಿ ಮತಾಂತರ ವಿರೋಧಿ ಕಾನೂನುಗಳು, ಅಲ್ಪಸಂಖ್ಯಾತರ ವಿರುದ್ಧ ದ್ವೇಷಭರಿತ ಭಾಷಣ ಮತ್ತು ಅವರ ಮನೆ ಹಾಗೂ ಧಾರ್ಮಿಕ ಆಚರಣೆಗಳನ್ನು ನಡೆಸುವ ಸ್ದಳಗಳನ್ನು ಧ್ವಂಸಗೊಳಿಸುವ ಘಟನೆ ಹೆಚ್ಚಳವಾಗಿದೆ’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಕಳವಳ ವ್ಯಕ್ತಪಡಿಸಿದ್ದಾರೆ.
ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಕುರಿತಾದ ವರದಿ ಬಿಡುಗಡೆಯಲ್ಲಿ ಬ್ಲಿಂಕನ್ ಈ ರೀತಿ ಅಭಿಪ್ರಾಯ ಪಟ್ಟಿದ್ದಾರೆ. ‘ಈ ವರ್ಷದ ಅವಧಿಯಲ್ಲಿ ಮತಾಂತರ ನಿಷೇಧದ ಕಾನೂನಿನಲ್ಲಿ ಕ್ರಿಶ್ಚಿಯನ್ನರು ಮತ್ತು ಅಲ್ಪಸಂಖ್ಯಾತರನ್ನು ಬಂಧಿಸಲಾಗಿದೆ. ಅವರಿಗೆ ಕಿರುಕುಳ ನೀಡಿ, ಸುಳ್ಳು ಆರೋಪಗಳನ್ನು ಮಾಡಲಾಗಿದೆ. 28ರ ಪೈಕಿ 10 ರಾಜ್ಯಗಳಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಾಗಿದೆ. ಕೆಲವೆಡೆ ಇದಕ್ಕೆ ದಂಡ ಕೂಡಾ ವಿಧಿಸಲಾಗುತ್ತಿದೆ. ವಿರೋಧದ ನಡುವೆಯೂ ಏಕರೂಪ ನಾಗರಿಕ ಸಂಹಿತೆಗೆ ಮೋದಿ ಆದ್ಯತೆ ನೀಡಿದ್ದಾರೆ. ಇದು ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ಭಾಗ’ ಎಂದು ಬ್ಲಿಂಕನ್ ವರದಿ ಬಿಡುಗಡೆ ವೇಳೆ ಹೇಳಿದ್ದಾರೆ.
ಅಲ್ಲದೇ ಇದೇ ಸಂದರ್ಭದಲ್ಲಿ ‘ಪ್ರಪಂಚದಾದ್ಯಂತ ಜನರು ಧಾರ್ಮಿಕ ಸ್ವಾತಂತ್ರ್ಯವನ್ನು ರಕ್ಷಿಸಲು ಶ್ರಮಿಸುತ್ತಿದ್ದಾರೆ’ ಎಂದು ಹೇಳಿದರು.