ಸರಣಿ ಜಯದ ಹೊಸ್ತಿಲಲ್ಲಿ ಭಾರತ

| N/A | Published : Oct 14 2025, 01:00 AM IST

ಸಾರಾಂಶ

ಭಾರತ ಹಾಗೂ ವೆಸ್ಟ್‌ಇಂಡೀಸ್‌ ನಡುವಿನ 2ನೇ ಟೆಸ್ಟ್‌ ‘ಅನಿರೀಕ್ಷಿತ’ವಾಗಿ 5ನೇ ದಿನಕ್ಕೆ ಕಾಲಿಟ್ಟಿದೆ. ಮೊದಲ ಇನ್ನಿಂಗ್ಸಲ್ಲಿ ಬೇಗ ಆಲೌಟ್‌ ಆಗಿ ಫಾಲೋ ಆನ್‌ಗೆ ಒಳಪಟ್ಟಿದ್ದ ವಿಂಡೀಸ್‌, 2ನೇ ಇನ್ನಿಂಗ್ಸಲ್ಲಿ ದಿಟ್ಟ ಹೋರಾಟ ಪ್ರದರ್ಶಿಸಿ ಭಾರತೀಯರ ಬೆವರಿಳಿಸಿತು.

 ನವದೆಹಲಿ: ಭಾರತ ಹಾಗೂ ವೆಸ್ಟ್‌ಇಂಡೀಸ್‌ ನಡುವಿನ 2ನೇ ಟೆಸ್ಟ್‌ ‘ಅನಿರೀಕ್ಷಿತ’ವಾಗಿ 5ನೇ ದಿನಕ್ಕೆ ಕಾಲಿಟ್ಟಿದೆ. ಮೊದಲ ಇನ್ನಿಂಗ್ಸಲ್ಲಿ ಬೇಗ ಆಲೌಟ್‌ ಆಗಿ ಫಾಲೋ ಆನ್‌ಗೆ ಒಳಪಟ್ಟಿದ್ದ ವಿಂಡೀಸ್‌, 2ನೇ ಇನ್ನಿಂಗ್ಸಲ್ಲಿ ದಿಟ್ಟ ಹೋರಾಟ ಪ್ರದರ್ಶಿಸಿ ಭಾರತೀಯರ ಬೆವರಿಳಿಸಿತು.

ಮೊದಲ ಇನ್ನಿಂಗ್ಸಲ್ಲಿ 81.5 ಓವರ್‌ ಬೌಲ್‌ ಮಾಡಿದ್ದ ಭಾರತ, 2ನೇ ಇನ್ನಿಂಗ್ಸಲ್ಲಿ 118.5 ಓವರ್‌ ದಾಳಿ ನಡೆಸಿತು. ದಿಲ್ಲಿಯ ಸುಡು ಬಿಸಿಲಿನಲ್ಲಿ ಸತತ 200 ಓವರ್‌ ಬೌಲ್‌ ಮಾಡಿದ ಭಾರತೀಯ ಬೌಲರ್‌ಗಳು ಹೈರಾಣಾದರು. ಜಾನ್‌ ಕ್ಯಾಂಬೆಲ್‌ರ ಚೊಚ್ಚಲ ಶತಕ ಹಾಗೂ 8 ವರ್ಷದಲ್ಲಿ ಮೊದಲ ಟೆಸ್ಟ್‌ ಶತಕ ಗಳಿಸಿದ ಶಾಯ್‌ ಹೋಪ್‌, ವಿಂಡೀಸ್‌ಗೆ ಆಸರೆಯಾದರು.

3ನೇ ದಿನದಂತ್ಯಕ್ಕೆ ಇನ್ನಿಂಗ್ಸ್‌ ಸೋಲಿನಿಂದ ಪಾರಾಗಲು ಇನ್ನೂ 97 ರನ್‌ ಹಿಂದಿದ್ದ ವಿಂಡೀಸ್‌, 4ನೇ ದಿನವಾದ ಸೋಮವಾರ ಉತ್ತಮ ಹೋರಾಟ ಪ್ರದರ್ಶಿಸಿತು.

ದಿನದಾಟದಲ್ಲಿ ಜಡೇಜಾ ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. 115 ರನ್‌ ಗಳಿಸಿದ್ದ ಕ್ಯಾಂಬೆಲ್‌ರನ್ನು ಎಲ್‌ಬಿ ಬಲೆಗೆ ಕೆಡವಿದರು. ಹೋಪ್‌ರ ಇನ್ನಿಂಗ್ಸ್‌ 103 ರನ್‌ಗೆ ಕೊನೆಗೊಂಡಿತು. ಆ ನಂತರ ಚೇಸ್‌ 40, ಗ್ರೀವ್ಸ್‌ ಔಟಾಗದೆ 50, ಸೀಲ್ಸ್‌ 32 ರನ್‌ ಗಳಿಸಿ ತಂಡ 390 ರನ್‌ಗಳ ದೊಡ್ಡ ಮೊತ್ತ ದಾಖಲಿಸಲು ನೆರವಾದರು. ಕೊನೆ ವಿಕೆಟ್‌ಗೆ ವಿಂಡೀಸ್‌ 89 ರನ್‌ ಸೇರಿಸಿತು.

121 ರನ್‌ ಗುರಿ ಪಡೆದ ಭಾರತ, 2ನೇ ಓವರಲ್ಲೇ ಜೈಸ್ವಾಲ್‌ (8) ವಿಕೆಟ್‌ ಕಳೆದುಕೊಂಡಿತು. ಬಳಿಕ ರಾಹುಲ್‌ (25*) ಹಾಗೂ ಸಾಯಿ ಸುದರ್ಶನ್‌ (30*) ದಿನದಾಟದಲ್ಲಿ ಮತ್ತೊಂದು ವಿಕೆಟ್‌ ಬೀಳದಂತೆ ಎಚ್ಚರ ವಹಿಸಿದರು. ಮಂಗಳವಾರ ಮೊದಲ ಅವಧಿಯಲ್ಲೇ ಬಾಕಿ ಇರುವ 58 ರನ್‌ ಗಳಿಸಿ, ಸರಣಿಯನ್ನು 2-0ಯಲ್ಲಿ ವಶಪಡಿಸಿಕೊಳ್ಳಲು ಭಾರತ ಎದುರು ನೋಡುತ್ತಿದೆ. ಸ್ಕೋರ್‌: ಭಾರತ 518/5 ಡಿ. ಹಾಗೂ 63/1 (ಸುದರ್ಶನ್‌ 30*, ರಾಹುಲ್‌ 25*, ವಾರಿಕನ್ 1-15), ವಿಂಡೀಸ್‌ 248 ಹಾಗೂ 390 (ಕ್ಯಾಂಬೆಲ್‌ 115, ಹೋಪ್‌ 103, ಗ್ರೀವ್ಸ್‌ 50*, ಬೂಮ್ರಾ 3-44, ಕುಲ್ದೀಪ್‌ 3-104, ಸಿರಾಜ್‌ 2-43)

 2025ರಲ್ಲಿ ಟೆಸ್ಟ್‌ನಲ್ಲಿ

ಗರಿಷ್ಠ ವಿಕೆಟ್‌: ನಂ.1

ಸ್ಥಾನಕ್ಕೇರಿದ ಸಿರಾಜ್‌

ಈ ವರ್ಷ ಟೆಸ್ಟ್‌ನಲ್ಲಿ ಮೊಹಮದ್‌ ಸಿರಾಜ್‌ ಅತಿಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. 8 ಪಂದ್ಯಗಳಲ್ಲಿ 37 ವಿಕೆಟ್‌ ಕಬಳಿಸಿರುವ ಸಿರಾಜ್‌, ಜಿಂಬಾಬ್ವೆಯ ಬ್ಲೆಸಿಂಗ್‌ ಮಜುರ್‌ಬಾನಿಯನ್ನು ಹಿಂದಿಕ್ಕಿದ್ದಾರೆ. ಬ್ಲೆಸಿಂಗ್‌ 9 ಪಂದ್ಯದಲ್ಲಿ 36 ವಿಕೆಟ್‌ ಪಡೆದು 2ನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾದ ಮಿಚೆಲ್‌ ಸ್ಟಾರ್ಕ್‌ 7 ಪಂದ್ಯದಲ್ಲಿ 29 ವಿಕೆಟ್‌ಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ.

Read more Articles on