ಸಾರಾಂಶ
ವೆಸ್ಟ್‌ಇಂಡೀಸ್ ತಂಡ ಮೊದಲ ಟೆಸ್ಟ್‌ಗಿಂತಲೂ ಸುಧಾರಿತ ಬ್ಯಾಟಿಂಗ್ ಪ್ರದರ್ಶನ ತೋರುತ್ತಿದೆಯಾದರೂ, 2ನೇ ಟೆಸ್ಟ್ ಮೇಲೆ ಭಾರತ ಬಿಗಿ ಹಿಡಿತ ಹೊಂದಿದೆ. ನಾಯಕ ಶುಭ್‌ಮನ್ ಗಿಲ್ ಟೆಸ್ಟ್‌ನಲ್ಲಿ 10ನೇ ಶತಕ ದಾಖಲಿಸಿ, ತಂಡದ ಮೊತ್ತಕ್ಕೆ 500 ರನ್‌ಗೆ ಹಿಗ್ಗಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು.
ನವದೆಹಲಿ: ವೆಸ್ಟ್‌ಇಂಡೀಸ್ ತಂಡ ಮೊದಲ ಟೆಸ್ಟ್‌ಗಿಂತಲೂ ಸುಧಾರಿತ ಬ್ಯಾಟಿಂಗ್ ಪ್ರದರ್ಶನ ತೋರುತ್ತಿದೆಯಾದರೂ, 2ನೇ ಟೆಸ್ಟ್ ಮೇಲೆ ಭಾರತ ಬಿಗಿ ಹಿಡಿತ ಹೊಂದಿದೆ. ನಾಯಕ ಶುಭ್‌ಮನ್ ಗಿಲ್ ಟೆಸ್ಟ್‌ನಲ್ಲಿ 10ನೇ ಶತಕ ದಾಖಲಿಸಿ, ತಂಡದ ಮೊತ್ತಕ್ಕೆ 500 ರನ್‌ಗೆ ಹಿಗ್ಗಿಸಿ, 5 ವಿಕೆಟ್‌ಗೆ 518 ರನ್ ಆಗಿದ್ದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು.
ಮೊದಲ ಇನ್ನಿಂಗ್ಸ್ ಆರಂಭಿಸಿರುವ ವಿಂಡೀಸ್ 2ನೇ ದಿನದಂತ್ಯಕ್ಕೆ 4 ವಿಕೆಟ್‌ಗೆ 140 ರನ್ ಗಳಿಸಿದೆ. ಮೊದಲ ಟೆಸ್ಟ್‌ನ ಎರಡೂ ಇನ್ನಿಂಗ್ಸಲ್ಲಿ 50 ಓವರ್ ಸಹ ಬ್ಯಾಟ್ ಮಾಡದ್ದನ್ನು ಹೋಲಿಸಿದರೆ ಇದು ಸುಧಾರಿತ ಬ್ಯಾಟಿಂಗ್ ಪ್ರದರ್ಶನ ಎನಿಸಲಿದೆ. ಆದರೂ 378 ರನ್ ಹಿನ್ನಡೆಯಲ್ಲಿರುವ ವಿಂಡೀಸ್, ಫಾಲೋ ಆನ್ ತಪ್ಪಿಸಿಕೊಳ್ಳುವುದಕ್ಕೇ ಇನ್ನೂ 179 ರನ್ ಗಳಿಸಬೇಕಿದೆ.
2ನೇ ದಿನದಾಟವನ್ನು ಭಾರತ ಬೇಸರದಿಂದಲೇ ಆರಂಭಿಸಲಾಯಿತು. ಮೊದಲ ದಿನವೇ 173 ರನ್ ಗಳಿಸಿ ದ್ವಿಶತಕದ ನಿರೀಕ್ಷೆಯಲ್ಲಿದ್ದ ಯಶಸ್ವಿ ಜೈಸ್ವಾಲ್, 175 ರನ್ ಗಳಿಸಿದ್ದಾಗ ರನೌಟಾಗಿ ನಿರಾಸೆ ಅನುಭವಿಸಿದರು. ನಾಯಕ ಗಿಲ್ ಜೊತೆ ಸಂವಹನ ಕೊರತೆಯಿಂದಾಗಿ ಜೈಸ್ವಾಲ್ ವಿಕೆಟ್ ಪತನವಾಯಿತು.
ಆ ಬಳಿಕ ಹೆಚ್ಚು ಜವಾಬ್ದಾರಿಯಿಂದ ಆಡಿದ ಗಿಲ್, ನಾಯಕನಾಗಿ ಕೇವಲ 7ನೇ ಟೆಸ್ಟ್‌ನಲ್ಲಿ 5ನೇ ಶತಕ ದಾಖಲಿಸಿದರು. ಗಿಲ್‌ಗೆ ಮೊದಲು ನಿತೀಶ್ ರೆಡ್ಡಿ (43), ಬಳಿಕ ಧೃವ್ ಜುರೆಲ್ (44) ಜೊತೆಯಾಗಿ, ತಂಡದ ಮೊತ್ತವನ್ನು 500 ರನ್ ದಾಟಿಸಿದರು. ಜುರೆಲ್ ಔಟಾಗುತ್ತಿದ್ದಂತೆ ಭಾರತ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಗಿಲ್ 196 ಎಸೆತದಲ್ಲಿ 16 ಬೌಂಡರಿ, 2 ಸಿಕ್ಸರ್‌ನೊಂದಿಗೆ ಔಟಾಗದೆ 129 ರನ್ ಗಳಿಸಿದರು.
ವಿಂಡೀಸ್ ಆರಂಭಿಕ ಆಘಾತ ಎದುರಿಸಿದರೂ, ತೇಜನಾರಾಯಣ್ ಚಂದ್ರಪಾಲ್ (34), ಅಲಿಕ್ ಅಥನೇಜ್ (41) ಸರಣಿಯಲ್ಲಿ ವಿಂಡೀಸ್ ಪರ ಮೊದಲ ಅರ್ಧಶತಕದ ಜೊತೆಯಾಟವಾಡಿದರು. 2ನೇ ವಿಕೆಟ್‌ಗೆ ಇವರಿಬ್ಬರು 66 ರನ್ ಸೇರಿಸಿದರು. ನಾಯಕ ಚೇಸ್ ಸೊನ್ನೆಗೆ ಔಟಾದರೂ ಶಾಯ್ ಹೋಪ್ (31) ಹಾಗೂ ಟೆವಿನ್ ಇಮ್ಲಾಚ್ (14) 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತ ಪರ ಜಡೇಜಾ 3 ವಿಕೆಟ್ ಕಬಳಿಸಿದ್ದಾರೆ.ಸ್ಕೋರ್: ಭಾರತ 134.2 ಓವರಲ್ಲಿ 518/5 ಡಿ., (ಜೈಸ್ವಾಲ್ 175, ಗಿಲ್ 129*, ವಾರಿಕನ್ 3-98), ವಿಂಡೀಸ್ 43 ಓವರಲ್ಲಿ 140/4 (ಅಥನೇಜ್ 41, ಜಡೇಜಾ 3-37)