ಇಂಡಿಯಾ ಕೂಟದಲ್ಲಿ ಮತ್ತಷ್ಟು ಒಡಕು

| Published : Feb 05 2024, 01:49 AM IST / Updated: Feb 05 2024, 07:33 AM IST

ಸಾರಾಂಶ

ಭಾರತ್‌ ಜೋಡೋ ಯಾತ್ರೆಗೆ ನಮ್ಮನ್ನು ಕರೆದಿಲ್ಲ ಎಂದು ಅಖಿಲೇಶ್‌ ಆರೋಪಿಸಿದ್ದಾರೆ. ಅಲ್ಲದೆ ಅಸ್ಸಾಂನಲ್ಲಿ ಟಿಎಂಸಿ ಜತೆ ಮೈತ್ರಿ ಇಲ್ಲ ಎಂದು ರಾಜ್ಯ ಕಾಂಗ್ರೆಸ್‌ ಘೋಷಿಸಿದೆ.

ಲಖನೌ/ಗುವಾಹಟಿ: ಇಂಡಿಯಾ ಕೂಟದಿಂದ ನಿತೀಶ್‌ ಕುಮಾರ್‌ ದೂರ ಸರಿದ ನಂತರ ಹಾಗೂ ಕೂಟದ ಬಗ್ಗೆ ಮಮತಾ ಬ್ಯಾನರ್ಜಿ ಮತ್ತು ಅರವಿಂದ ಕೇಜ್ರಿವಾಲ್‌ ಅಪಸ್ವರ ಎತ್ತಿದ ನಂತರ ಈಗ ಸಮಾಜವಾದಿ ಪಾರ್ಟಿ ನೇತಾರ ಅಖಿಲೇಶ್‌ ಯಾದವ್‌ ಆಕ್ಷೇಪ ತೆಗೆದಿದ್ದಾರೆ. 

‘ಉತ್ತರ ಪ್ರದೇಶದಲ್ಲಿ ಹಾದು ಹೋಗಲಿರುವ ರಾಹುಲ್‌ ಗಾಂಧಿ ಅವರ ಭಾರತ್‌ ಜೋಡೋ ನ್ಯಾಯಯಾತ್ರೆಗೆ ನನಗೆ ಆಹ್ವಾನವನ್ನೇ ನೀಡಿಲ್ಲ’ ಎಂದು ಅವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

ಇನ್ನೊಂದು ಕಡೆ ಬಂಗಾಳದಲ್ಲಿ ಮಮತಾ ಅವರ ಟಿಎಂಸಿ ಪಕ್ಷವು ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಳ್ಳಲ್ಲ ಎಂದು ಘೋಷಿಸಿದ ಬೆನ್ನಲ್ಲೇ, ಅಸ್ಸಾಂ ಕಾಂಗ್ರೆಸ್‌ ಘಟಕವು ಟಿಎಂಸಿಗೆ ತಿರುಗೇಟು ನೀಡಿದೆ. 

‘ಅಸ್ಸಾಂನಲ್ಲೂ ಟಿಎಂಸಿಗೆ ಯಾವುದೇ ಸೀಟು ಬಿಟ್ಟುಕೊಡದೇ 14 ಸ್ಥಾನಗಳಲ್ಲಿ ಏಕಾಂಗಿ ಸ್ಪರ್ಧೆಗೆ ಚಿಂತಿಸುತ್ತಿದ್ದೇವೆ’ ಎಂದು ಅಸ್ಸಾಂ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಭೂಪೇನ್‌ ಬೋರಾ ಹೇಳಿದ್ದಾರೆ.

ಜೈರಾಂ ಸ್ಪಷ್ಟನೆ:ಈ ನಡುವೆ ಜೋಡೋ ಯಾತ್ರೆಗೆ ತಮ್ಮನ್ನು ಅಹ್ವಾನಿಸಿಲ್ಲ ಎಂಬ ಅಖಿಲೇಶ್‌ ಯಾದವ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ವಕ್ತಾರ ಜೈರಾಂ ರಮೇಶ್‌, ‘ಫೆ.16ರಂದು ಉತ್ತರ ಪ್ರದೇಶಕ್ಕೆ ರಾಹುಲ್‌ ಯಾತ್ರೆ ಪ್ರವೇಶಿಸಲಿದೆ. 

ಯಾತ್ರೆಯ ಉ.ಪ್ರ. ವೇಳಾಪಟ್ಟಿ ಇನ್ನೂ ಅಂತಿಮವಾಗಿಲ್ಲ. ಇನ್ನು 2 ದಿನದಲ್ಲಿ ವಿವರವಾದ ಮಾರ್ಗ ಹಾಗೂ ಕಾರ್ಯಕ್ರಮದ ಬಗ್ಗೆ ಅಖಿಲೇಶ್‌ಗೆ ಮಾಹಿತಿ ನೀಡಲಾಗುವುದು. 

ಯಾತ್ರೆಯಲ್ಲಿ ಅಖಿಲೇಶ್‌ ಪಾಲ್ಗೊಳ್ಳುವಿಕೆಯು ಇಂಡಿಯಾ ಮೈತ್ರಿಯನ್ನು ಮತ್ತಷ್ಟು ಬಲಪಡಿಸುತ್ತದೆ’ ಎಂದಿದ್ದಾರೆ.