ಪ್ರಧಾನಿ ಮೋದಿ ಅವರ ಬ್ರೂನೈ ಪ್ರವಾಸ : ಇಂಡೋ-ಪೆಸಿಫಿಕ್‌ನಲ್ಲಿ ಚೀನಾ ನಡೆಗೆ ವಾಗ್ದಾಳಿ

| Published : Sep 05 2024, 12:34 AM IST / Updated: Sep 05 2024, 04:41 AM IST

ಸಾರಾಂಶ

ಪ್ರಧಾನಿ ಮೋದಿ ಅವರ ಬ್ರೂನೈ ಪ್ರವಾಸದಲ್ಲಿ ಇಂಡೋ-ಪೆಸಿಫಿಕ್‌ನಲ್ಲಿ ಚೀನಾದ ಆಕ್ರಮಣಕಾರಿ ನಡವಳಿಕೆಯನ್ನು ಟೀಕಿಸಿದ್ದಾರೆ. ಭಾರತವು 'ವಿಸ್ತರಣೆ'ಯನ್ನು ಬೆಂಬಲಿಸುವುದಿಲ್ಲ ಆದರೆ 'ಅಭಿವೃದ್ಧಿ'ಯನ್ನು ಬೆಂಬಲಿಸುತ್ತದೆ ಎಂದು ಹೇಳಿದರು.  

 ಬಂದರ್ ಸೆರಿ ಬೇಗವಾನ್ :  ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಬ್ರೂನೈ ಪ್ರವಾಸ ಯಶಸ್ವಿಯಾಗಿದ್ದು, ಈ ವೇಳೆ ಅವರು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಆಕ್ರಮಣಕಾರಿ ನಡವಳಿಕೆ ಬಗ್ಗೆ ಕಿಡಿಕಾರಿದ್ದಾರೆ. ‘ಭಾರತವು ‘ವಿಸ್ತರಣೆ’ಯನ್ನು ಬೆಂಬಲಿಸುವುದಿಲ್ಲ ಆದರೆ ‘ಅಭಿವೃದ್ಧಿ’ ಯನ್ನು ಬೆಂಬಲಿಸುತ್ತದೆ ಎಂದು ಒತ್ತಿ ಹೇಳಿದ್ದಾರೆ. ಅಲ್ಲದೆ, ಕಡಲ ಸ್ವಾತಂತ್ರ್ಯ ರಕ್ಷಣೆಗೆ ಮೋದಿ ಹಾಗೂ ಬ್ರೂನೈ ಅರಸ ಜಂಟಿ ಕರೆ ನೀಡಿದ್ದಾರೆ.

ಬ್ರೂನೈ ರಾಜಧಾನಿಯಲ್ಲಿ ಗುರುವಾರ ಅರಸ ಸುಲ್ತಾನ್ ಹಾಜಿ ಹಸನಲ್ ಬೊಲ್ಕಿಯಾ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಿದ ಮೋದಿ, ‘ಕಡಲ ಸ್ವಾತಂತ್ರ್ಯ’ವನ್ನು ಗೌರವಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದರು. ದಕ್ಷಿಣ ಚೀನಾ ಸಮುದ್ರದಲ್ಲಿ ಉದ್ವಿಗ್ನತೆಯ ನಡುವೆಯೇ ಉಭಯ ನಾಯಕರ ಈ ಭೇಟಿ ನಡೆದಿದೆ. ಏಕೆಂದರೆ ಬ್ರೂನೈ ಸಮೀಪದ ಸಮುದ್ರ ವಲಯದಲ್ಲಿ ಚೀನಾ ಪರೋಕ್ಷವಾಗಿ ಪಾರಮ್ಯ ಸಾಧಿಸಲು ಯತ್ನಿಸುತ್ತಿದೆ.

ದ್ವಿಪಕ್ಷೀಯ ಮಾತುಕತೆ ಬಳಿಕ ಜಂಟಿ ಹೇಳಿಕೆ ಬಿಡುಗಡೆ ಮಾಡಲಾಗಿದ್ದು, ‘ಶಾಂತಿ, ಸ್ಥಿರತೆ, ಕಡಲ ಸುರಕ್ಷತೆ ಮತ್ತು ಭದ್ರತೆ ಕಾಪಾಡಿಕೊಳ್ಳಲು ಉಭಯ ನಾಯಕರು ಬದ್ಧತೆ ವ್ಯಕ್ತಪಡಿಸಿದರು. ಜತೆಗೆ, ನೌಕಾಯಾನ, ಅಡೆತಡೆಯಿಲ್ಲದ ಕಾನೂನುಬದ್ಧ ವಾಣಿಜ್ಯ ವಹಿವಾಟನ್ನು ಅಂತಾರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ಗೌರವಿಸಬೇಕು. ಶಾಂತಿಯುತ ವಿಧಾನದ ಮೂಲಕ ವಿವಾದಗಳನ್ನು ಪರಿಹರಿಸಬೇಕು ಎಂದು ವಿಶ್ವ ನಾಯಕರಿಗೆ ಒತ್ತಾಯಿಸಿದರು’ ಎಂದು ತಿಳಿಸಲಾಗಿದೆ.