ಸಾರಾಂಶ
ಸರ್ಕಾರ, ಉದ್ಯಮ, ಮಾಧ್ಯಮ ಮತ್ತು ಎನ್‌ಜಿಒಗಳ ಮೇಲಿನ ಜನರ ವಿಶ್ವಾಸದ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದ ಭಾರತವು ಈ ಬಾರಿ ಮೂರಕ್ಕೆ ಕುಸಿದಿದೆ. ಶ್ರೀಮಂತರಿಗೆ ಹೋಲಿಸಿದರೆ ಕಡಿಮೆ ಆದಾಯ ಹೊಂದಿರುವ ಜನರಲ್ಲಿ ಸರ್ಕಾರದ ಮೇಲೆ ವಿಶ್ವಾಸ ಕಡಿಮೆ ಇದೆ ಎಂದು ವರದಿಯೊಂದು ಹೇಳಿದೆ.
ದಾವೋಸ್ : ಸರ್ಕಾರ, ಉದ್ಯಮ, ಮಾಧ್ಯಮ ಮತ್ತು ಎನ್‌ಜಿಒಗಳ ಮೇಲಿನ ಜನರ ವಿಶ್ವಾಸದಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದ ಭಾರತವು ಈ ಬಾರಿ ಮೂರಕ್ಕೆ ಕುಸಿದಿದೆ. ಶ್ರೀಮಂತರಿಗೆ ಹೋಲಿಸಿದರೆ ಕಡಿಮೆ ಆದಾಯ ಹೊಂದಿರುವ ಜನರಲ್ಲಿ ಸರ್ಕಾರದ ಮೇಲೆ ವಿಶ್ವಾಸ ಕಡಿಮೆ ಇದೆ ಎಂದು ವರದಿಯೊಂದು ಹೇಳಿದೆ.
ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಫೋರಂನ ವಾರ್ಷಿಕ ಸಭೆಗೂ ಮೊದಲು ಸಂವಹನ ಸಂಸ್ಥೆ ‘ಎಡಲ್‌ಮನ್ ಟ್ರಸ್ಟ್ ಬ್ಯಾರೋಮೀಟರ್’, ತನ್ನ 25ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿ ವರದಿಯೊಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಈ ವಿಚಾರ ಬಹಿರಂಗವಾಗಿದೆ.
ವಿಶ್ವದಲ್ಲಿ 33 ಸಾವಿರ ಜನರನ್ನು ಸಂದರ್ಶಿಸಿ ಈ ಸೂಚ್ಯಂಕ ಸಿದ್ಧಪಡಿಸಲಾಗಿದೆ.
ಟ್ರಸ್ಟ್ ಇಂಡೆಕ್ಸಲ್ಲಿ ಚೀನಾ ನಂ.1:
ವಿಶೇಷವೆಂದರೆ ಸರ್ಕಾರ, ಉದ್ಯಮ, ಮಾಧ್ಯಮ ಮತ್ತು ಎನ್‌ಜಿಒಗಳ ಮೇಲಿನ ಎಲ್ಲಾ ವರ್ಗದ ಜನರ ಒಟ್ಟಾರೆ ವಿಶ್ವಾಸದ ಪಟ್ಟಿಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಭಾರತದ ಹಿಂದಿನ ಅಂಕಗಳಲ್ಲಿ ಯಾವುದೇ ಬದಲಾವಣೆ ಆಗದಿದ್ದರೂ ಇಂಡೋನೇಷ್ಯಾ ಹೆಚ್ಚಿನ ಅಂಕಗಳೊಂದಿಗೆ 2ನೇ ಸ್ಥಾನಕ್ಕೆ ಜಿಗಿದಿದೆ. ಈ ಸರ್ವೆಯು 28 ದೇಶಗಳಲ್ಲಿ ನಡೆದಿದ್ದು, ಈ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಜಪಾನ್ ಇದೆ.
ಚೀನಾ (ಶೇ.77), ಇಂಡೋನೇಷ್ಯಾ (ಶೇ.76), ಭಾರತ(ಶೇ.75) ಮತ್ತು ಯುಎಇ(ಶೇ.72) ಟ್ರಸ್ಟ್ ಇಂಡೆಕ್ಸ್ ಪಟ್ಟಿಯಲ್ಲಿ ಮೊದಲ 3 ಉನ್ನತ ಸ್ಥಾನದಲ್ಲಿವೆ.
ಶ್ರೀಮಂತ ದೇಶಗಳು ಹಿಂದಕ್ಕೆ:
ಟ್ರಸ್ಟ್ ಇಂಡೆಕ್ಸ್(ಸೂಚ್ಯಂಕ)ನಲ್ಲಿ ವಿಶ್ವದ ಪ್ರಮುಖ 10 ಆರ್ಥಿಕತೆಳಾಗಿರುವ ದೇಶಗಳಲ್ಲಿ ಸರ್ಕಾರಗಳ ಮೇಲೆ ಜನರ ವಿಶ್ವಾಸ ಕಡಿಮೆ ಇದೆ. ಜಪಾನ್ (ಶೇ.37ಕ್ಕಿಂತ ಕಡಿಮೆ), ಜರ್ಮನಿ (ಶೇ.41), ಬ್ರಿಟನ್(ಶೇ.43), ಯುಎಸ್(ಶೇ.47) ಮತ್ತು ಫ್ರಾನ್ಸ್ (ಶೇ.48) ನಲ್ಲಿ ಸರ್ಕಾರದ ಮೇಲಿನ ನಂಬಿಕೆ ತೀವ್ರ ಕಡಿಮೆ ಇದೆ.
ಬಡವರಿಗೆ ನಂಬಿಕೆ ಕಡಿಮೆ:
ಭಾರತ ಸೇರಿ ವಿಶ್ವಾದ್ಯಂತ ಬಹುತೇಕ ದೇಶಗಳಲ್ಲಿ ಸರ್ಕಾರ, ಉದ್ಯಮ, ಮಾಧ್ಯಮ ಮತ್ತು ಎನ್‌ಜಿಒಗಳ ಮೇಲಿನ ವಿಶ್ವಾಸವು ಶ್ರೀಮಂತರಿಗಿಂತ ಬಡವರಲ್ಲಿ ಕಡಿಮೆಯೇ ಇದೆ. ಸರ್ಕಾರದ ಮೇಲೆ ವಿಶ್ವಾಸ ಹೊಂದಿರುವ ಹೆಚ್ಚಿನ ಆದಾಯಹೊಂದಿರುವವರ ಪಟ್ಟಿಯಲ್ಲಿ ಭಾರತ 4ನೇ ಸ್ಥಾನದಲ್ಲಿದೆ. ಇಲ್ಲೂ ಇಂಡೋನೇಷ್ಯಾ, ಸೌದಿ, ಚೀನಾ ಭಾರತಕ್ಕಿಂತ ಮುಂದಿದೆ.
ಭಾರತೀಯ ಸಂಸ್ಥೆಗಳ ಮೇಲೆ ಕಡಿಮೆ ಆದಾಯ ಹೊಂದಿರುವವರ ವಿಶ್ವಾಸವು ಶೇ.65ಕ್ಕಿಂತ ಕಡಿಮೆ ಇದ್ದರೆ, ಶೇ.80ರಷ್ಟು ಶ್ರೀಮಂತರು ಭಾರತದ ಸಂಸ್ಥೆಗಳ ಮೇಲೆ ವಿಶ್ವಾಸ ಹೊಂದಿದ್ದಾರೆ.ವಿಶ್ವಾದ್ಯಂತ ನೋಡಿದರೆ ಸಾಂಸ್ಥಿಕ ನಾಯಕರ ಮೇಲೆ ನಂಬಿಕೆ ಕಡಿಮೆ ಇದೆ. ಸರ್ವೆಯಲ್ಲಿ ಭಾಗಿಯಾದ ಶೇ.69ರಷ್ಟು ಮಂದಿ ಸರ್ಕಾರಿ ಅಧಿಕಾರಿಗಳು, ಉದ್ಯಮಗಳು ಮತ್ತು ಪತ್ರಕರ್ತರು ಉದ್ದೇಶಪೂರ್ವಕವಾಗಿ ತಮ್ಮ ದಾರಿ ತಪ್ಪಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ
ಸರ್ಕಾರ ಮತ್ತು ಉದ್ಯಮಗಳು ತಮಗೆ ಹಾನಿ ಉಂಟುಮಾಡುತ್ತವೆ. ಶ್ರೀಮಂತರರೇ ಎಲ್ಲ ಲಾಭ ಪಡೆಯುತ್ತಾರೆ, ಜನಸಾಮಾನ್ಯರು ಮಾತ್ರ ಪರದಾಡುತ್ತಲೇ ಇರುತ್ತಾರೆ ಎಂಬ ಭಾವನೆ ವಿಶ್ವಾದ್ಯಂತ ಕಡಿಮೆ ಆದಾಯ ಹೊಂದಿರುವವರಲ್ಲಿ ಇದೆ ಎಂಬುದು ಸರ್ವೆಯಿಂದ ತಿಳಿದುಬಂದಿದೆ.