ತಾನು ಮುಕ್ತ ವ್ಯಾಪಾರ ಹೊಂದಿಲ್ಲದ ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ತೆರಿಗೆಯನ್ನು ಶೇ.50ರವರೆಗೂ ಹೆಚ್ಚಿಸಲು ಉತ್ತರ ಅಮೆರಿಕ ಖಂಡದ ದೇಶ ಮೆಕ್ಸಿಕೋ ನಿರ್ಧರಿಸಿದೆ. ಭಾರತದ ಮೇಲೆ ಅಮೆರಿಕದ ತೆರಿಗೆ ದಾಳಿಯ ಬೆನ್ನಲ್ಲೇ  ಈ ದಾಳಿ ಆರಂಭಿಸಿದೆ. 2026ರ ಜ.1ರಿಂದ ಹೊಸ ತೆರಿಗೆ ಜಾರಿಯಾಗಲಿದೆ.

ನವದೆಹಲಿ: ತಾನು ಮುಕ್ತ ವ್ಯಾಪಾರ ಹೊಂದಿಲ್ಲದ ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ತೆರಿಗೆಯನ್ನು ಶೇ.50ರವರೆಗೂ ಹೆಚ್ಚಿಸಲು ಉತ್ತರ ಅಮೆರಿಕ ಖಂಡದ ದೇಶ ಮೆಕ್ಸಿಕೋ ನಿರ್ಧರಿಸಿದೆ. ಭಾರತದ ಮೇಲೆ ಅಮೆರಿಕದ ತೆರಿಗೆ ದಾಳಿಯ ಬೆನ್ನಲ್ಲೇ ಅದರ ನೆರೆ ದೇಶ ಕೂಡ ಭಾರತದ ಮೇಲೆ ಈ ದಾಳಿ ಆರಂಭಿಸಿದೆ. 2026ರ ಜ.1ರಿಂದ ಹೊಸ ತೆರಿಗೆ ಜಾರಿಯಾಗಲಿದೆ.

ದೇಶೀಯ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಶೇ.5ರಿಂದ ಶೇ.50ರವರೆಗೆ ಹೆಚ್ಚಿಸಲಾಗುತ್ತಿದೆ ಎಂದು ಮೆಕ್ಸಿಕೋ ಅಧ್ಯಕ್ಷೆ ಕ್ಲೌಡಿಯಾ ಶೀನಾಭಾಮ್‌ ಹೇಳಿರುವರಾದರೂ, ಇದು ಅಮೆರಿಕವನ್ನು ಮೆಚ್ಚಿಸುವ ಕ್ರಮ ಇರಬಹುದು ಎಂದು ವಿಶ್ಲೇಷಿಸಲಾಗಿದೆ.

ಯಾವ ದೇಶಗಳಿಗೆ ಹೊರೆ?:

ಮೆಕ್ಸಿಕೋದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಇಲ್ಲದ ಭಾರತ, ಚೀನಾ, ಭಾರತ, ಚೀನಾ, ದಕ್ಷಿಣ ಕೊರಿಯಾ, ಥಾಯ್ಲೆಂಡ್‌, ಇಂಡೋನೇಷ್ಯಾ ಮತ್ತಿತರ ದೇಶಗಳಿಂದ ಆಮದಾಗುವ ವಸ್ತುಗಳ ಮೇಲೆ ಶೇ.50ರವರೆಗೆ ತೆರಿಗೆ ಹೇರಲು ನಿರ್ಧರಿಸಲಾಗಿದೆ.

ಭಾರತಕ್ಕೆ ಏನು ಹೊರೆ?:

ಮೆಕ್ಸಿಕೋದ ಈ ನಡೆಯಿಂದ ಭಾರತದ ಆಟೋ, ಜವಳಿ, ಪ್ಲಾಸ್ಟಿಕ್‌, ಸ್ಟೀಲ್‌, ಜವಳಿ ಉದ್ಯಮಕ್ಕೆ ಭಾರೀ ಹೊಡೆತ ಬೀಳುವ ನಿರೀಕ್ಷೆ ಇದೆ. ಅದರಲ್ಲೂ ಕಾರು ಉತ್ಪಾದಕರಿಗೆ ಬಹುದೊಡ್ಡ ಹಾನಿಯಾಗುವ ಆತಂಕ ಮನೆಮಾಡಿದೆ. ಕಾರಣ ದಕ್ಷಿಣ ಆಫ್ರಿಕಾ, ಸೌದಿ ಅರೇಬಿಯಾ ಬಳಿಕ ಭಾರತದಿಂದ ಅತಿ ಹೆಚ್ಚು ಕಾರು ರಫ್ತಾಗುತ್ತಿರುವ ಮೂರನೇ ಅತಿದೊಡ್ಡ ರಾಷ್ಟ್ರ ಮೆಕ್ಸಿಕೋ ಆಗಿದೆ. 2023-24ರಲ್ಲಿ ಭಾರತವು ಮೆಕ್ಸಿಕೋಕ್ಕೆ ಅಂದಾಜು 71000 ಕೋಟಿ ರು. ಮೌಲ್ಯದ ವಸ್ತುಗಳನ್ನು ರಫ್ತು ಮಾಡಿತ್ತು. ಅದೇ ರೀತಿ ಮೆಕ್ಸಿಕೋ 22000 ಕೋಟಿ ರು.ಗಳಷ್ಟು ವಸ್ತುಗಳನ್ನು ಭಾರತಕ್ಕೆ ರಫ್ತು ಮಾಡಿತ್ತು.

ಯಾಕೆ ದಿಢೀರ್‌ ತೆರಿಗೆ?:

ಅಮೆರಿಕ-ಮೆಕ್ಸಿಕೋ-ಕೆನಡಾ ವ್ಯಾಪಾರ ಒಪ್ಪಂದದ ಕುರಿತು ಟ್ರಂಪ್‌ ಅವರು ಸದ್ಯದಲ್ಲೇ ಪುನರ್‌ ಪರಿಶೀಲನೆ ನಡೆಸಲಿದ್ದಾರೆ. ಅದಕ್ಕೂ ಮುನ್ನ ಅವರನ್ನು ಓಲೈಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

ಅಮೆರಿಕವು ಮೆಕ್ಸಿಕೋದ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ. ಅಲ್ಲದೆ, ಈ ತೆರಿಗೆಯಿಂದಾಗಿ ಮೆಕ್ಸಿಕೋಗೆ ಮುಂದಿನ ಹಣಕಾಸು ವರ್ಷದಲ್ಲಿ 33,910 ಕೋಟಿ ರು. ಹೆಚ್ಚುವರಿ ಆದಾಯ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎಂದು ಹೇಳಲಾಗಿದೆ.