ಆಗಸದಿಂದ ಭಾರತ ಅದ್ಭುತ, ತಂದೆಯ ತಾಯ್ನಾಡಿಗೆ ಖಂಡಿತ ಹೋಗುವೆ : ಸುನಿತಾ ವಿಲಿಯಮ್ಸ್‌

| N/A | Published : Apr 02 2025, 01:02 AM IST / Updated: Apr 02 2025, 04:49 AM IST

ಸಾರಾಂಶ

9 ತಿಂಗಳ ಬಾಹ್ಯಾಕಾಶವಾಸದ ಬಳಿಕ ಭೂಮಿಗೆ ಮರಳಿರುವ ಗಗನಯಾತ್ರಿ ಸುನಿತಾ ವಿಲಿಯಮ್ಸ್‌, ತಮ್ಮ ತಂದೆಯ ತವರಾದ ಭಾರತಕ್ಕೆ ಬರುವ ಭರವಸೆ ನೀಡಿದ್ದಾರೆ.  

ನ್ಯೂಯಾರ್ಕ್‌ : 9 ತಿಂಗಳ ಬಾಹ್ಯಾಕಾಶವಾಸದ ಬಳಿಕ ಭೂಮಿಗೆ ಮರಳಿರುವ ಗಗನಯಾತ್ರಿ ಸುನಿತಾ ವಿಲಿಯಮ್ಸ್‌, ತಮ್ಮ ತಂದೆಯ ತವರಾದ ಭಾರತಕ್ಕೆ ಬರುವ ಭರವಸೆ ನೀಡಿದ್ದಾರೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ‘ಭಾರತ ಅದ್ಭುತವಾಗಿದೆ. ನಾವು ಹಿಮಾಲಯದ ಮೇಲೆ ಹಾದು ಹೋದಾಗಲೆಲ್ಲಾ ಬುಚ್‌ ಅದರ ಅದ್ಭುತ ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದರು. ನಾನೂ ಭಾರತಕ್ಕೆ ಭೇಟಿ ನೀಡುತ್ತೇನೆ ಹಾಗೂ ಅಲ್ಲಿನ ಜನರೊಂದಿಗೆ ನನ್ನ ಅನುಭವಗಳನ್ನು ಹಂಚಿಕೊಳ್ಳುತ್ತೇನೆ. ಆಕ್ಸಿಯಂ ಮಿಷನ್‌ ಭಾಗವಾಗಿ ಐಎಸ್‌ಎಸ್‌ಗೆ ಹೋಗಲಿರುವ ಭಾರತೀಯನ (ಸುಧಾಂಶು ಶುಕ್ಲಾ) ಬಗ್ಗೆ ಉತ್ಸುಕಳಾಗಿದ್ದೇನೆ. ಬಾಹ್ಯಾಕಾಶ ಮಿಷನ್‌ನಲ್ಲಿ ಭಾರತಕ್ಕೆ ಸಹಾಯ ಮಾಡಲು ಇಷ್ಟಪಡುತ್ತೇನೆ’ ಎಂದು ಹೇಳಿದ್ದಾರೆ.

ಅಂತೆಯೇ, ‘ಗುಜರಾತ್‌ ಮತ್ತು ಮುಂಬೈ ಪ್ರವೇಶಿಸುತ್ತಿದ್ದಂತೆ ಮೀನುಗಾರಿಕಾ ದೋಣಿಗಳು ನೀವೆಲ್ಲಿದ್ದೀರೆಂಬುದನ್ನು ತೋರಿಸುತ್ತವೆ. ಭಾರತದಲ್ಲಿ ರಾತ್ರಿ ಮತ್ತು ಹಗಲುಗಳನ್ನು ನೋಡುವುದೇ ಅದ್ಭುತ’ ಎಂದು ಬಣ್ಣಿಸಿದರು. ಜೊತೆಗೆ, ತಮ್ಮ ಜೊತೆಗಾರರನ್ನೂ ಭಾರತಕ್ಕೆ ಕರೆತರುವುದಾಗಿ ಹೇಳಿದರು.

ಮತ್ತೆ ಸ್ಟಾರ್‌ಲೈನರ್‌ನಲ್ಲಿ ಹೋಗುವೆವು:

ಇದೇ ವೇಳೆ, ತಮ್ಮ ಅನಿರೀಕ್ಷಿತ ಸುದೀರ್ಘ ಬಾಹ್ಯಾಕಾಶ ವಾಸಕ್ಕೆ ಕಾರಣವಾದ ಬೋಯಿಂಗ್‌ನ ಸ್ಟಾರ್‌ಲೈನರ್‌ನಲ್ಲಿ ಮತ್ತೆ ಪ್ರಯಾಣಿಸುವುದಾಗಿ ಸುನಿತಾ ಹಾಗೂ ಬುಚ್‌ ಹೇಳಿದ್ದಾರೆ. ‘ನಾವು ಹಿಂದೆ ಎದುರಿಸಿದ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳುತ್ತೇವೆ. ಸ್ಟಾರ್‌ಲೈನರ್‌ಗೆ ಅಪಾರ ಸಾಮರ್ಥ್ಯವಿದೆ’ ಎಂದು ಅವರು ಹೇಳಿದರು.