ಸಾರಾಂಶ
ಜಾಗತಿಕ ಹವಾಮಾನ ಬದಲಾವಣೆ ತಡೆಗೆ ಯತ್ನಿಸಿದ ಸಾಧಕ ದೇಶಗಳ ಪಟ್ಟಿಯೊಂದನ್ನು ಬಿಡುಗಡೆ ಮಾಡಲಾಗಿದ್ದು, ವಿಶ್ವದ 63 ದೇಶಗಳ ಪೈಕಿ ಭಾರತ ಟಾಪ್ 10ರೊಳಗೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ.
ಬಾಕು: ಜಾಗತಿಕ ಹವಾಮಾನ ಬದಲಾವಣೆ ತಡೆಗೆ ಯತ್ನಿಸಿದ ಸಾಧಕ ದೇಶಗಳ ಪಟ್ಟಿಯೊಂದನ್ನು ಬಿಡುಗಡೆ ಮಾಡಲಾಗಿದ್ದು, ವಿಶ್ವದ 63 ದೇಶಗಳ ಪೈಕಿ ಭಾರತ ಟಾಪ್ 10ರೊಳಗೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. 2023ಕ್ಕೆ ಹೋಲಿಸಿದರೆ ಭಾರತದ ಸ್ಥಾನ ಸೂಚ್ಯಂಕದಲ್ಲಿ 2 ಸ್ಥಾನ ಇಳಿದಿದ್ದರೂ 10ನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ.
ವಿಶೇಷವೆಂದರೆ ಪಟ್ಟಿಯಲ್ಲಿ ಮೊದಲ ಮೂರೂ ಸ್ಥಾನವನ್ನು ಖಾಲಿ ಬಿಡಲಾಗಿದೆ. ಯಾವುದೇ ದೇಶಗಳು ಕೂಡಾ ವಿವಿಧ ವಿಭಾಗಗಳಲ್ಲಿ ಒಟ್ಟಾರೆಯಾಗಿ ಅತ್ಯುತ್ತಮ ಸಾಧನೆ ಮಾಡದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಉಳಿದಂತೆ ಡೆನ್ಮಾರ್ಕ್ (ನಂ.4), ನೆದರ್ಲೆಂಡ್ (ನಂ.5), ಬ್ರಿಟನ್ (ನಂ.6) ಫಿಲಿಪ್ಪೀನ್ಸ್ (ನಂ.7), ಮೊರಾಕ್ಕೋ (ನಂ.8), ನಾರ್ವೆ (ನಂ.9) ಮತ್ತು ಭಾರತ (ನಂ.10) ಸ್ಥಾನ ಪಡೆದಿವೆ.
ಜರ್ಮನ್ ವಾಚ್ ಎಂಬ ಚಿಂತಕರ ಚಾವಡಿ, ನ್ಯೂ ಕ್ಲೈಮ್ಯಾಟ್ ಇನ್‌ಸ್ಟಿಟ್ಯೂಟ್ ಮತ್ತು ಕ್ಲೈಮ್ಯಾಟ್ ಆ್ಯಕ್ಷನ್ ನೆಟ್‌ವರ್ಕ್ ಇಂಟರ್‌ನ್ಯಾಷನಲ್ ಸಂಸ್ಥೆಗಳು ಜಂಟಿಯಾಗಿ ‘ದ ಕ್ಲೈಮ್ಯಾಟ್ ಚೇಂಜ್ ಫರ್‌ಫಾರ್ಮೆನ್ಸ್ ಇಂಡೆಕ್ಸ್’ ಬಿಡುಗಡೆ ಮಾಡಿವೆ. ಅತಿ ಹೆಚ್ಚು ಮಾಲಿನ್ಯ ಹೊರಸೂಸುವಿಕೆ, ನವೀಕರೀಸಬಹುದಾದ ಇಂಧನಗಳ ಬಳಕೆ ಮತ್ತು ಹವಾಮಾನ ನೀತಿಗಳ ಜಾರಿಯಲ್ಲಿ ಕೈಗೊಂಡ ಸಾಧನೆ ಆಧರಿಸಿ ಈ ಪಟ್ಟಿ ತಯಾರಿಸಲಾಗಿದೆ.
ಯುರೋಪಿಯನ್ ಒಕ್ಕೂಟ ಸೇರಿದಂತೆ ಪಟ್ಟಿಯಲ್ಲಿ ಸ್ಥಾನ ಪಡೆದ 63 ದೇಶಗಳು, ಜಾಗತಿಕ ಹೊರಸೂಸುವಿಕೆಯಲ್ಲಿ ಶೇ.90ರಷ್ಟು ಪಾಲು ಹೊಂದಿರುವ ಕಾರಣ, ಈ ಸೂಚ್ಯಂಕ ಸಾಕಷ್ಟು ಮಹತ್ವ ಪಡೆದುಕೊಂಡಿದೆ.
ಇತರೆ ದೇಶಗಳಿಗೆ ಹೋಲಿಸಿದರೆ ಹೆಚ್ಚಿನ ಜನಸಂಖ್ಯೆ ಹೊಂದಿರುವ ಭಾರತ, ತಲಾ ಹೊರಸೂಸುವಿಕೆಯಲ್ಲಿ ಕಡಿಮೆ ಪ್ರಮಾಣ ಹೊಂದಿರುವುದು, ನವೀಕರಿಸಬಹುದಾದ ಇಂಧನಗಳ ಬಳಕೆ ಹೆಚ್ಚಲ ಮಾಡಿದ್ದು ಭಾರತ ಟಾಪ್ 10ರೊಳಗೆ ಸ್ಥಾನ ಪಡೆಯಲು ಕಾರಣವಾಗಿದೆ.