ಸಾರಾಂಶ
ಚೀನಾ ತನ್ನ ನೌಕಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವ ನಡುವೆಯೇ, ಭಾರತವೂ ಸಾಗರದೊಳಗೆ ಯುದ್ಧ ಸಾಮರ್ಥ್ಯ ವೃದ್ಧಿಗೆ ಮುಂದಾಗಿದ್ದು ಮುಂದಿನ ವರ್ಷ ಅಂದಾಜು 1 ಲಕ್ಷ ಕೋಟಿ ರು. ವೆಚ್ಚದಲ್ಲಿ ಎರಡು ಜಲಾಂತರ್ಗಾಮಿ ಖರೀದಿ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ.
ನವದೆಹಲಿ: ಚೀನಾ ತನ್ನ ನೌಕಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವ ನಡುವೆಯೇ, ಭಾರತವೂ ಸಾಗರದೊಳಗೆ ಯುದ್ಧ ಸಾಮರ್ಥ್ಯ ವೃದ್ಧಿಗೆ ಮುಂದಾಗಿದ್ದು ಮುಂದಿನ ವರ್ಷ ಅಂದಾಜು 1 ಲಕ್ಷ ಕೋಟಿ ರು. ವೆಚ್ಚದಲ್ಲಿ ಎರಡು ಜಲಾಂತರ್ಗಾಮಿ ಖರೀದಿ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ. ಈ ಯೋಜನೆಯಡಿ ಒಟ್ಟು 9 ಸಬ್‌ಮರೀನ್ ಖರೀದಿ ಪ್ರಸ್ತಾಪವಿದೆ.
ಮೊದಲ ಯೋಜನೆಯ ಭಾಗವಾಗಿ ಮೂರು ಸ್ಕಾರ್ಪೀನ್ ಜಲಾಂತರ್ಗಾಮಿ ನೌಕೆಗಳ ಖರೀದಿ ನಡೆಯಲಿದೆ. ಇದನ್ನು ಸರ್ಕಾರಿ ಸ್ವಾಮ್ಯದ ಮಜಗಾಂವ್ ಡಾಕ್ ಲಿಮಿಟೆಡ್( ಎಂಡಿಎಲ್) ಮತ್ತು ಫ್ರೆಂಚ್‌ನ ನೇವಲ್ ಗ್ರೂಪ್ ಜಂಟಿಯಾಗಿ ಭಾರತದಲ್ಲೇ ನಿರ್ಮಿಸಲಿವೆ. ಎರಡು ವರ್ಷಗಳ ಹಿಂದೆಯೇ ಸುಮಾರು 36,000 ಕೋಟಿ ರು.ಗಳ ಒಪ್ಪಂದಕ್ಕೆ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದ್ದರೂ ವಿವಿಧ ಕಾರಣಗಳಿಂದ ಮಾತುಕತೆ ವಿಳಂಭವಾಗಿತ್ತು.
ಮತ್ತೊಂದೆಡೆ ಸಚಿವಾಲಯ 65000 ಕೋಟಿ ರು. ವೆಚ್ಚದಲ್ಲಿ ಆರು ಡಿಸೇಲ್ ಎಲೆಕ್ಟ್ರಿಕಲ್ ಸ್ಟೆಲ್ತ್ ಜಲಾಂತರ್ಗಾಮಿ ನೌಕೆ ಖರೀದಿಗೆ ಮುಂದಾಗಿದೆ. 2021ರಲ್ಲಿಯೇ ಮಾತುಕತೆ ನಡೆದಿತ್ತು. ಈ ಯೋಜನೆಯಯನ್ನು ಜರ್ಮನ್ ಹಡಗು ನಿರ್ಮಾಣ ಕಂಪನಿ ಥೈಸೆನ್‌ಕೃಪ್ ಮೆರೈನ್ ಸಿಸ್ಟಮ್ಸ್ ( ಟಿಕೆಂಎಂಎಸ್)ಮಜಗಾಂವ್ ಡಾಕ್ ಶಿಪ್‌ಬಿಲ್ಡರ್ಸ್ ಲಿ. ಪಾಲುದಾರಿಕೆಯೊಂದಿಗೆ ನಡೆಯಲಿದೆ.
ಮೂಲಗಳ ಪ್ರಕಾರ ಹಣಕಾಸಿನ ಒಪ್ಪಂದಗಳ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಮುಂದಿನ 6- 9 ತಿಂಗಳೊಳಗೆ ಒಪ್ಪಂದ ಅಂತ್ಯವಾಗುವ ಸಾಧ್ಯತೆಯಿದೆ.