ಸಾರಾಂಶ
ಬೆಂಗಳೂರಿನ ಮರೈನ್ ರೊಬೋಟಿಕ್ಸ್ ಕಂಪನಿ ‘ರೆಕಿಸಿ’ ಭಾರತದ ಮೊದಲ ಸಂಪೂರ್ಣ ಸ್ವಾಯುತ್ತ ಮಾನವರಹಿತ ಜಲಾಂತರ್ಗಾಮಿ ವಾಹನ ‘ಜಲ್‌ಕಪಿ- ಎಕ್ಸ್‌ಎಲ್‌ಯುಯುವಿ’ ರೂಪಿಸುತ್ತಿದ್ದು ಒಂದೂವರೆ ವರ್ಷದಲ್ಲಿ ನೌಕಾದಳಕ್ಕೆ ಹಸ್ತಾಂತರ ಮಾಡಲಿದೆ.
ಮಯೂರ್ ಹೆಗಡೆ
ಬೆಂಗಳೂರು : ಬೆಂಗಳೂರಿನ ಮರೈನ್ ರೊಬೋಟಿಕ್ಸ್ ಕಂಪನಿ ‘ರೆಕಿಸಿ’ ಭಾರತದ ಮೊದಲ ಸಂಪೂರ್ಣ ಸ್ವಾಯುತ್ತ ಮಾನವರಹಿತ ಜಲಾಂತರ್ಗಾಮಿ ವಾಹನ ‘ಜಲ್‌ಕಪಿ- ಎಕ್ಸ್‌ಎಲ್‌ಯುಯುವಿ’ ರೂಪಿಸುತ್ತಿದ್ದು ಒಂದೂವರೆ ವರ್ಷದಲ್ಲಿ ನೌಕಾದಳಕ್ಕೆ ಹಸ್ತಾಂತರ ಮಾಡಲಿದೆ.
ಭಾರತೀಯ ನೌಕಾದಳದ ನೌಕಾ ವಿನ್ಯಾಸ ನಿರ್ದೇಶನಾಲಯ ನೀಡಿರುವ ವಿನ್ಯಾಸ ಆಧರಿಸಿ, ಸಾಗರದಾಳದ ಸೇನಾ ಕಾರ್ಯಾಚರಣೆಗೆ ಅನುವಾಗುವಂತೆ ಇದನ್ನು ನಿರ್ಮಿಸಲಾಗುತ್ತಿದೆ. 30-45 ದಿನಗಳವರೆಗೆ ಸಮುದ್ರದೊಳಗೆ ಇರುವ ಸಾಮರ್ಥ್ಯ ಹೊಂದಿರುವ ‘ಜಲ್‌ಕಪಿ’ 11 ಮೀಟರ್ ಉದ್ದ 2 ಡಯಾಮೀಟರ್ ಅಗಲವಿರಲಿದೆ. 20 ಟನ್ ತೂಕ ಹೊಂದಿರಲಿದ್ದು, ಸಮುದ್ರದ 300 ಮೀಟರ್ ಆಳದಲ್ಲಿ ನಿಯೋಜನೆ ಮಾಡಬಹುದು ಎಂದು ರೆಕಿಸಿ ಕಂಪನಿ ತಿಳಿಸಿದೆ.
ರೆಡಾರ್/ಸೋನಾರ್:
ಡೀಸೆಲ್, ಲಿಥೀಯಂ ಬ್ಯಾಟರಿ ಚಾಲಿತವಾಗುವ ಈ ಜಲಾಂತರ್ಗಾಮಿ ವಾಹನದ ಇಂಧನವಾಗಿದೆ. ಪ್ರತಿಕೂಲ ಸಂದರ್ಭದಲ್ಲಿ ಶೀಘ್ರವಾಗಿ ಸ್ಪಂದಿಸಲಿದ್ದು, ಕಮಾಂಡ್ ಸೆಂಟರ್‌ಗೆ ಮಾಹಿತಿ ವರ್ಗಾಯಿಸಲಿದೆ. ತನ್ನಲ್ಲಿ ಗಂಭೀರ ಸಮಸ್ಯೆ ಉಂಟಾದರೆ ಅದರ ಮಾಹಿತಿಯನ್ನೂ ವರ್ಗಾಯಿಸಲಿದೆ. ವಿಶೇಷವಾಗಿ ಸ್ವಾಯುತ್ತ ದಿಕ್ಸೂಚಿ ವ್ಯವಸ್ಥೆಯನ್ನು ಹೊಂದಿದ್ದು, ಬಂದರಿಗೆ ಬಂದುಹೋಗುವ ಕಾರ್ಯವನ್ನು ಸಂಪೂರ್ಣ ಸ್ವಯಂಚಾಲಿತವಾಗಿ ಮಾಡಿಕೊಳ್ಳಲಿದೆ. ಗಸ್ತು ಕಾರ್ಯಾಚರಣೆಗಾಗಿ ರಾತ್ರಿ ಹಗಲು ವೇಳೆಯ ಕ್ಯಾಮೆರಾ, ರೆಡಾರ್, ಸೋನಾರ್, ಮಲ್ಟಿಬೀಮ್ ಇಕೋಸೌಂಡರ್ ನಂಥಹ ಪೇಲೋಡ್‌ಗಳನ್ನು ತನ್ನಲ್ಲಿ ಹೊಂದಿರಲಿದೆ.
ನೌಕಾದಳಕ್ಕೆ ಪೂರೈಕೆ:
ಭಾರತದ ರಕ್ಷಣಾ ಕ್ಷೇತ್ರದ ಸ್ವಾವಲಂಬನೆಗೆ ನಡೆಯುವ ಐಡೆಕ್ಸ್ 1.0 ಉಪಕ್ರಮದ ಸ್ಪರ್ಧೆಯಲ್ಲಿ ರೆಕಿಸಿ ‘ಜಲ್‌ಕಪಿ’ ಪ್ರದರ್ಶಿಸಿತ್ತು. ಈ ವೇಳೆ ನೌಕಾದಳ ಕಂಪನಿಯ ಜೊತೆಗೆ ಈ ಮಾನವ ರಹಿತ ಜಲಾಂತರ್ಗಾಮಿ ವಾಹನ ನೀಡುವಂತೆ ಒಪ್ಪಂದ ಮಾಡಿಕೊಂಡಿದೆ. ಅದರಂತೆ ಮುಂದಿನ ಒಂದೂವರೆ ವರ್ಷದಲ್ಲಿ ಇದನ್ನು ನೌಕಾದಳಕ್ಕೆ ಪೂರೈಸಲಿದ್ದೇವೆ ಎಂದು ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಹಿರಿಯ ವ್ಯವಸ್ಥಾಪಕ ಕಾರ್ತಿಕ್ ಮಂಗಲಪುಡಿ ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಎಕ್ಸ್‌ಎಲ್‌ಯುಯುವಿ:
‘ರೆಕಿಸಿ’ ರೊಬೋಟಿಕ್ಸ್ ಎಂಜಿನಿಯರ್ ಆಯಷ್ಕಾಂತ ಮಿಶ್ರಾ ಮಾತನಾಡಿ, ಮಾನವಹಿತವಾದ ಇದು ಸಾಮಾನ್ಯ ಯುಯುವಿ ( ಅನ್‌ಮ್ಯಾನ್ಡ್ ಅಂಡರ್‌ವಾಟರ್ ವೆಹಿಕಲ್) ಗಿಂತ ಹೆಚ್ಚಿನ ಉದ್ದವಿದ್ದು, ಎಕ್ಸ್‌ಎಲ್‌ಯುಯುವಿ (ಎಕ್ಸ್‌ಟ್ರಾ ಲಾರ್ಜ್ ಅಂಡರ್ ಸೀ ಅನ್‌ಕ್ರ್ಯೂವ್ಡ್ ವೆಹಿಕಲ್) ವಿಭಾಗದಲ್ಲಿ ಬರಲಿದೆ. ‘ ಬೋಯಿಂಗ್ ಸಿದ್ಧಪಡಿಸುತ್ತಿರುವ ಎಕ್ಸ್‌ಎಲ್‌ಯುಯುವಿ ಒರ್ಕಾ ಮಾತ್ರ ನಮಗೆ ಸದ್ಯದ ಸ್ಪರ್ಧಿ ಆದರೆ, ತಾಂತ್ರಿಕ ಸಾಮರ್ಥ್ಯದ ಕೆಲ ವಿಭಾಗದಲ್ಲಿ ಅದಕ್ಕಿಂತ ನಮ್ಮದು ಮುಂದಿದೆ ಎಂದು ಹೇಳಿದರು.
ಈಗಾಗಲೇ ಕಂಪನಿ ಮಾನವ ರಹಿತವಾದ ಸ್ವಾದಿನ, ಜಲದೂತ್ ಗಸ್ತು ನೌಕೆಗಳನ್ನು ನೌಕಾದಳಕ್ಕೆ ನೀಡಿದೆ ಎಂದರು.
ಐಐಟಿ ವಿದ್ಯಾರ್ಥಿಯ ಕಂಪನಿ:
ಇನ್ನು, ಐಐಟಿ ಖರಗ್‌ಪುರ ವಿದ್ಯಾರ್ಥಿಯಾಗಿರುವ ಮೈತ್ರೇಯಿ ಮಾಕಾ ರೆಕಿಸಿ ಕಂಪನಿ ಸಂಸ್ಥಾಪಕರಾಗಿದ್ದು, ಬೆಂಗಳೂರಿನಲ್ಲಿ ಸಂಸ್ಥೆಯ ಕಚೇರಿಯಿದೆ. ಒಸೆನ್ ಎಂಜಿನಿಯರಿಂಗ್ ಮತ್ತು ನೌಕಾ ವಾಸ್ತುಶಿಲ್ಪ ವಿಭಾಗದ ಬಿಟೆಕ್ ಮಾಡಿದ್ದಾರೆ. 2017ರಲ್ಲಿ ಈ ಸಂಸ್ಥೆ ಸ್ಥಾಪನೆಯಾಗಿದೆ.
ಜಲ್‌ಕಪಿಯ ಕೆಲಸವೇನು?
ಸಾಗರದ ಆಳದಲ್ಲಿ ಸಂಚರಿಸುವ ‘ಜಲ್‌ಕಪಿ’ ಶತ್ರುಗಳ ಸಬ್‌ಮರೀನ್, ನೌಕೆಗಳ ಮೇಲೆ ಕಣ್ಣಿಡುತ್ತದೆ. ಸಾಗರದ ಆಳದಲ್ಲಿನ ಸ್ಫೋಟಕ ಪತ್ತೆ, ನಾಶಪಡಿಸುವ ಕಾರ್ಯ ಮಾಡಲಿದೆ. ಆಳ ಸಮುದ್ರದ ಪರಿಶೋಧನೆ, ವೈಜ್ಞಾನಿಕ ಅಥವಾ ವಾಣಿಜ್ಯ ಉದ್ದೇಶಗಳಿಗೆ ಸಮುದ್ರದ ತಳದಲ್ಲಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಪರಿಸ್ಥಿತಿ ಅಧ್ಯಯನ ಮಾಡಲಿದೆ. ಜೊತೆಗೆ ಬ್ಯಾಥಮೆಟ್ರಿಕ್ ಸರ್ವೆ (ಸಾಗರದ ಸಮೀಕ್ಷೆ) ನಡೆಸುವ ಕಾರ್ಯವನ್ನು ಮಾಡಲಿದೆ. ಭವಿಷ್ಯದಲ್ಲಿ ಆಯುಧಗಳನ್ನು ಇದಕ್ಕೆ ಅಳವಡಿಕೆ ಮಾಡಬಹುದು.
ನೌಕಾದಳದ ಸೂಚನೆಯಂತೆ ಜಲಾಂತರ್ಗಾಮಿ ವಾಹನ ‘ಜಲ್‌ಕಪಿ- ಎಕ್ಸ್‌ಎಲ್‌ಯುಯುವಿ’ ನಿರ್ಮಿಸುತ್ತಿದ್ದು, ಒಂದೂವರೆ ವರ್ಷದಲ್ಲಿ ಸೇನೆಗೆ ಹಸ್ತಾಂತರ ಮಾಡಲಿದ್ದೇವೆ.
- ಮೈತ್ರೇಯಿ ಮಾಕಾ, ರೆಕಿಸಿ ಸಂಸ್ಥಾಪಕ