ಸಾರಾಂಶ
ನವದೆಹಲಿ: ಪ್ರತಿ ಕುಟುಂಬ ಕನಿಷ್ಠ ಮೂರು ಮಕ್ಕಳನ್ನು ಹೊಂದಬೇಕು ಎಂಬ ಕರೆಯ ನಡುವೆಯೇ ದೇಶದಲ್ಲಿ ಫಲವತ್ತತೆ ದರ ಇದೇ ಮೊದಲ ಬಾರಿಗೆ 1.9ಕ್ಕೆ ಕುಸಿದಿದೆ ಎಂದು ಸರ್ಕಾರ ಬಿಡುಗಡೆ ಮಾಡಿರುವ ವರದಿಯಿಂದ ತಿಳಿದುಬಂದಿದೆ. ಈ ನಡುವೆ ಇದೇ ಮೊದಲ ಸಲ ಗ್ರಾಮೀಣ ಪ್ರದೇಶದಲ್ಲಿ ಫಲವತ್ತತೆ ದರ 2.1ಕ್ಕೆ ಬಂದು ನಿಂತಿದೆ.
ಪ್ರತಿ ಮಹಿಳೆ 2 ಮಕ್ಕಳನ್ನು ಹೊಂದುವುದು, ಜನಸಂಖ್ಯೆ ಸಮಸ್ಥಿತಿಯಲ್ಲಿರಲು ಅವಶ್ಯಕ. ಅಂದರೆ ಫಲವತ್ತತೆ ದರ ದೇಶದಲ್ಲಿ ಮೊದಲ ಬಾರಿಗೆ 2ಕ್ಕಿಂತ ಕಡಿಮೆಯಾಗಿ 1.9ಕ್ಕೆ ಕುಸಿದಿರುವುದು ಕಳವಳಕಾರಿ ಎಂದು ವಿಶ್ಲೇಷಿಸಲಾಗಿದೆ. ಗ್ರಾಮೀಣ ಭಾಗಗಳಲ್ಲಿ ಈ ಪ್ರಮಾಣ 2.1 ಇದೆಯಾದರೂ, ಈ ಮೊದಲು ಇದ್ದುದಕ್ಕಿಂತ ಕಡಿಮೆ. ಗ್ರಾಮಗಳಲ್ಲಿ ಇದೇ ದರ ಮುಂದುವರೆದರೆ ಅಲ್ಲಿ ಇನ್ನು ಜನಸಂಖ್ಯೆ ಹೆಚ್ಚಳದ ಬದಲು, ಇರುವ ಪ್ರಮಾಣವೇ ಮುಂದುವರೆಯಲಿದೆ.
ಮತ್ತೊಂದೆಡೆ ನಗರಗಳಲ್ಲಿ ಈಗಾಗಲೇ ಫಲವತ್ತತೆ ಭಾರೀ ಕುಸಿತ ಕಂಡಿದ್ದು 1.5ಕ್ಕೆ ತಲುಪಿದೆ. ಒಂದು ವೇಳೆ ಮುಂಬರುವ ದಿನಗಳಲ್ಲಿ ಗ್ರಾಮಗಳಲ್ಲೂ ಈ ಪ್ರಮಾಣ 2.1ಕ್ಕೆ ಕಡಿಮೆ ಆಗುತ್ತಾ ಹೋದಲ್ಲಿ ಆಗ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಲಿದೆ.
ಹೀಗೆ ಜನಸಂಖ್ಯೆ ಪ್ರಮಾಣ ಕುಸಿತದ ನಡುವೆಯೇ ಮರಣ ದರ ಕೂಡಾ ನಿರಂತರ ಏರಿಕೆ ಆಗುತ್ತಿರುವುದು ಕಳವಳವನ್ನು ಇನ್ನಷ್ಟು ಹೆಚ್ಚಿಸಿದೆ. 2022ರಲ್ಲಿ ಪ್ರತಿ 1000 ಜನರಿಗೆ 6.8 ಜನರು ಸಾವನ್ನಪ್ಪುತ್ತಿದ್ದರೆ, 2023ರಲ್ಲಿ ಅದು 6.4ಕ್ಕೆ ಇಳಿದಿದೆ. ಆದರೆ ಅದು ನಿರೀಕ್ಷಿತ 6ಕ್ಕಿಂತ ಅಧಿಕವೇ ಇದೆ.
ದೇಶದಲ್ಲಿ ಸಂತಾನೋತ್ಪತ್ತಿ
ದರ ಭಾರಿ ಪ್ರಮಾಣದಲ್ಲಿಳಿಕೆ
- ದೇಶಾದ್ಯಂತ 1.9ಕ್ಕೆ ಕುಸಿತ : ಕೇಂದ್ರ ಸರ್ಕಾರದ ವರದಿ
- ಗ್ರಾಮೀಣ ಭಾರತದಲ್ಲಿ ಮಾತ್ರ ಇದೆ ಸರಿಯಾದ ಪ್ರಮಾಣ
ಶಿಶು ಮರಣ ದರ ಐತಿಹಾಸಿಕ ಇಳಿಕೆ - 2013ರಲ್ಲಿ 40 ಇದ್ದದ್ದು ಈಗ 25ಕ್ಕೆ ಕುಸಿತ
ನವದೆಹಲಿ: ಭಾರತದಲ್ಲಿ ಶಿಶುಮರಣದರದಲ್ಲಿ ಐತಿಹಾಸಿಕ ಇಳಿಕೆ ಕಂಡಿದೆ. 2013ರಲ್ಲಿ 40 ಇದ್ದ ಈ ಪ್ರಮಾಣ, 2023ರ ವೇಳೆಗೆ ಶೇ.37.5ರಷ್ಟು ಕಡಿಮೆಯಾಗಿ 25ಕ್ಕೆ ಕುಸಿದಿದೆ. ಜೊತೆಗೆ 1971ರಲ್ಲಿ 129ಕ್ಕೆ ಹೋಲಿಸಿದರೆ ಈಗ ಶೇ.80ರಷ್ಟು ಕಡಿಮೆಯಾಗಿದೆ. ಇದು ದೇಶದ ಆರೋಗ್ಯ ಕ್ಷೇತ್ರದಲ್ಲಿ ಆದ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ. ರಿಜಿಸ್ಟಾರ್ ಜನರಲ್ ಬಿಡುಗಡೆ ಮಾಡಿರುವ 2023ರ ಮಾದರಿ ನೋಂದಣಿ ವ್ಯವಸ್ಥೆಯ ವರದಿಯಲ್ಲಿ ಈ ಮಾಹಿತಿ ತಿಳಿದುಬಂದಿದೆ. ಒಂದು ವರ್ಷದಲ್ಲಿ ಜನಿಸುವ 1000 ಶಿಶುಗಳಲ್ಲಿ ಎಷ್ಟು ಹಸುಳೆಗಳು ಸಾವನ್ನಪ್ಪುತ್ತವೆ ಎಂಬುದರ ಲೆಕ್ಕವೇ ಶಿಶು ಮರಣ ದರ
ಭಾರತಕ್ಕೀಗ ವಯಸ್ಸಾಗುತ್ತಿದೆ!
ನವದೆಹಲಿ: ಜನನ ಪ್ರಮಾಣ ಕುಸಿತ ನಡುವೆಯೇ ದೇಶದಲ್ಲಿ 14 ವರ್ಷದ ವರೆಗಿನ ಮಕ್ಕಳ ಸಂಖ್ಯೆಯಲ್ಲಿಯೂ ಇಳಿಕೆಯಾಗುತ್ತಿರುವುದು ಕಂಡುಬಂದಿದೆ. ಕೇಂದ್ರದ ಅಂಕಿಅಂಶಗಳ ಪ್ರಕಾರ, 1991ರಲ್ಲಿ ಶೇ.36.3ರಷ್ಟಿದ್ದ 0-14 ವಯಸ್ಸಿನ ಮಕ್ಕಳ ಪ್ರಮಾಣ 2023ರ ವೇಳೆಗೆ ಶೇ.24.2ಕ್ಕೆ ಬಂದು ನಿಂತಿದೆ. ನವಜಾತ ಶಿಶುಗಳಿಂದ ಹಿಡಿದು 14 ವರ್ಷದ ಒಳಗಿನವರಲ್ಲಿ ಹೆಣ್ಣುಮಕ್ಕಳಿಗೆ ಹೋಲಿಸಿದರೆ ಗಂಡುಮಕ್ಕಳ ಸಂಖ್ಯೆಯೇ ಅಧಿಕವಿದೆ.
ಅತ್ತ 15ರಿಂದ 59 ವರ್ಷದ ಒಳಗಿನವರು, ಅರ್ಥಾತ್ ದುಡಿಯುವ ವರ್ಗದವರ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. 1991ರಲ್ಲಿ ಶೇ.57.7ರಷ್ಟಿದ್ದ ಈ ವರ್ಗದವರು 2023ರ ವೇಳೆಗೆ ಶೇ.66.1 ಆಗಿದೆ. ಈ ವಯಸ್ಸಿನವರು ಅತಿ ಹೆಚ್ಚಾಗಿರುವುದು ದೆಹಲಿಯಲ್ಲಿ(ಶೇ.70.8). ಬಿಹಾರದಲ್ಲಿ ಅತಿ ಕಡಿಮೆ, ಶೇ.60.1ರಷ್ಟು ದುಡಿಯುವ ವರ್ಗದ ಜನರಿದ್ದಾರೆ.