‘ಆರೋಗ್ಯ ತುರ್ತುಸ್ಥಿತಿ’ಯ ಎಂಪಾಕ್ಸ್‌ ತಳಿ ಭಾರತದಲ್ಲೂ ಪತ್ತೆ : ಕೇರಳದ ಮಲಪ್ಪುರಂನಲ್ಲಿ 38 ವರ್ಷದ ವ್ಯಕ್ತಿಗೆ ದೃಢ

| Published : Sep 24 2024, 01:52 AM IST / Updated: Sep 24 2024, 06:57 AM IST

‘ಆರೋಗ್ಯ ತುರ್ತುಸ್ಥಿತಿ’ಯ ಎಂಪಾಕ್ಸ್‌ ತಳಿ ಭಾರತದಲ್ಲೂ ಪತ್ತೆ : ಕೇರಳದ ಮಲಪ್ಪುರಂನಲ್ಲಿ 38 ವರ್ಷದ ವ್ಯಕ್ತಿಗೆ ದೃಢ
Share this Article
  • FB
  • TW
  • Linkdin
  • Email

ಸಾರಾಂಶ

ಕೇರಳದ ಮಲಪ್ಪುರಂನಲ್ಲಿ ವ್ಯಕ್ತಿಯೊಬ್ಬರಿಗೆ ಎಂಪಾಕ್ಸ್‌ನ ‘ಕ್ಲೇಡ್‌1ಬಿ’ ತಳಿ ಪತ್ತೆಯಾಗಿದ್ದು, ಇದು ಭಾರತದಲ್ಲಿ ಪತ್ತೆಯಾದ ಮೊದಲ ಪ್ರಕರಣವಾಗಿದೆ. ಆತನ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

  ನವದೆಹಲಿ : ಆರೋಗ್ಯ ತುರ್ತುಸ್ಥಿತಿ ಎಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ಘೋಷಿಸಲ್ಪಟ್ಟ ಎಂಪಾಕ್ಸ್‌ ವ್ಯಾಧಿಯ ‘ಕ್ಲೇಡ್‌1ಬಿ’ ತಳಿ ಭಾರತದಲ್ಲೂ ಮೊದಲ ಬಾರಿ ಪತ್ತೆ ಆಗಿದೆ. ಕೇರಳದ ಮಲಪ್ಪುರಂನಲ್ಲಿ ಇತ್ತೀಚೆಗೆ 38 ವರ್ಷದ ವ್ಯಕ್ತಿಗೆ ಎಂ-ಪಾಕ್ಸ್‌ ದೃಢಪಟ್ಟಿತ್ತು. ಆತನಿಗೆ ತಗುಲಿದ್ದು ಎಂಪಾಕ್ಸ್‌ನ ‘ಕ್ಲೇಡ್‌1ಬಿ’ ತಳಿ ಎಂದು ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಮೂಲಗಳು ಹೇಳಿವೆ.

ಎಂ-ಪಾಕ್ಸ್‌ನ ಇತ್ತೀಚಿನ ಅಲೆಯಲ್ಲಿ ಭಾರತದ ಮೊದಲ ಪ್ರಕರಣ ಆಫ್ರಿಕಾದಿಂದ ಬಂದ ವ್ಯಕ್ತಿಯೊಬ್ಬನಲ್ಲಿ ದಿಲ್ಲಿಯಲ್ಲಿ ಕಾಣಿಸಿತ್ತು. ಆದರೆ ಆತನಲ್ಲಿ ‘ಕ್ಲೇಡ್‌ 2’ ತಳಿ ಪತ್ತೆ ಆಗಿತ್ತು. ಇದನ್ನು ಆರೋಗ್ಯ ತುರ್ತುಸ್ಥಿತಿ ಎಂದು ಡಬ್ಲುಎಚ್ಒ ಪರಿಗಣಿಸಿರಲಿಲ್ಲ.

ಆದರೆ ಇದಾದ ನಂತರ ಯುಎಇನಿಂದ ಕೇರಳದ ಮಲಪ್ಪುರಂಗೆ ಬಂದ 38 ವರ್ಷದ ವ್ಯಕ್ತಿಯಲ್ಲಿ ಎಂಪಾಕ್ಸ್‌ ಕಾಣಿಸಿತ್ತು. ಆತ ಜೀನೋಮ್‌ ಸೀಕ್ವೆನ್ಸಿಂಗ್‌ ನಡೆಸಿದಾಗ ಅದು ‘ಕ್ಲೇಡ್‌1ಬಿ’ ತಳಿ ಎಂದು ಗೊತ್ತಾಗಿದೆ. ಆದರೆ ಆತನ ಆರೋಗ್ಯ ಸ್ಥಿರವಾಗಿದೆ ಎಂದು ಮೂಲಗಳು ಹೇಳಿವೆ.

ಎಂಪಾಕ್ಸ್‌ ಕಾಯಿಲೆ ವೈರಸ್‌ನಿಂದ ಬರುತ್ತದೆ. ಅಲ್ಲದೆ, ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಕಾಯಿಲೆ. ಮೈಮೇಲೆ ಗುಳ್ಳೆಗಳು ಏಳುತ್ತವೆ. ಜ್ವರ ಬರುತ್ತದೆ.

ಎಂ-ಪಾಕ್ಸ್‌ ರೋಗಿ ಸಂಪೂರ್ಣ ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ

ನವದೆಹಲಿ: ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಂಡ ಮೊದಲ ಮಂಕಿಪಾಕ್ಸ್‌ ಪ್ರಕರಣದ ರೋಗಿ ಗುಣಮುಖನಾಗಿದ್ದು, ಆತನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.ಈ ಬಗ್ಗೆ ಇಲ್ಲಿನ ಲೋಕನಾಯಕ ಜಯ ಪ್ರಕಾಶ್‌ ನಾರಾಯಣ್‌ (ಎಲ್‌ಎನ್‌ಜೆಪಿ) ಆಸ್ಪತ್ರೆಯ ಅಧಿಕಾರಿಗಳು ಮಾಹಿತಿ ನೀಡಿದ್ದು, ಮಂಕಿಪಾಕ್ಸ್‌ ವೈರಸ್‌ನ ಲಕ್ಷಣಗಳು ಹೊಂದಿರುವ ಹರ್ಯಾಣದ ಹಿಸಾರ್‌ ಮೂಲದ ಯುವಕನೊಬ್ಬ ಸೆ.8 ರಂದು ಆಸ್ಪತ್ರೆಗೆ ದಾಖಲಾಗಿದ್ದ. 12 ದಿನಗಳ ಕಾಲ ಚಿಕಿತ್ಸೆ ನೀಡಿದ್ದು, ಇದೀಗ ಆತ ಗುಣಮುಖನಾಗಿದ್ದಾನೆ. ಆದ್ದರಿಂದ ಸೆ.21 ರಂದು ಆತನನ್ನು ಬಿಡುಗಡೆ ಮಾಡಲಾಯಿತು ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ದುಬೈನಿಂದ ಕೇರಳಕ್ಕೆ ಬಂದಿದ್ದ ವ್ಯಕ್ತಿಯಲ್ಲಿ ಈ ಎಂ-ಪಾಕ್ಸ್‌ ವೈರಸ್‌ ದೃಢಪಟ್ಟಿದ್ದು, ಭಾರತದಲ್ಲಿ ಇದು 2ನೇ ಪ್ರಕರಣವಾಗಿತ್ತು.