ದೇಶದ ಮೊದಲ 2 ನಗರಗಳ ನಡುವೆ ಸಂಪರ್ಕದ ವಂದೇ ಮೆಟ್ರೋ ರೈಲು ಸೇವೆಗೆ ಇಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ

| Published : Sep 16 2024, 01:49 AM IST / Updated: Sep 16 2024, 04:53 AM IST

ಸಾರಾಂಶ

ಹೆಚ್ಚಿನ ಜನಸಂದಣಿಯ 2 ನಗರಗಳ ನಡುವೆ ಸಂಪರ್ಕದ ಉದ್ದೇಶ ಹೊಂದಿರುವ ವಂದೇ ಮೆಟ್ರೋ ರೈಲು ಸೇವೆಗೆ ಸೋಮವಾರ ಇಲ್ಲಿ ಚಾಲನೆ ಸಿಗಲಿದೆ.

 ಭುಜ್‌ (ಗುಜರಾತ್‌)ಹೆಚ್ಚಿನ ಜನಸಂದಣಿಯ 2 ನಗರಗಳ ನಡುವೆ ಸಂಪರ್ಕದ ಉದ್ದೇಶ ಹೊಂದಿರುವ ವಂದೇ ಮೆಟ್ರೋ ರೈಲು ಸೇವೆಗೆ ಸೋಮವಾರ ಇಲ್ಲಿ ಚಾಲನೆ ಸಿಗಲಿದೆ. 

ಗುಜರಾತ್‌ನ ಅಹಮದಾಬಾದ್‌ ಮತ್ತು ಕಛ್‌ ಜಿಲ್ಲೆಯ ಭುಜ್‌ ನಗರಗಳ ನಡುವೆ ಸಂಪರ್ಕ ಕಲ್ಪಿಸುವ ದೇಶದ ಮೊತ್ತಮೊದಲ ವಂದೇ ಮೆಟ್ರೋ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. 

ಇದೇ ವೇಳೆ ಹಲವು ವಂದೇಭಾರತ್‌ ರೈಲುಗಳಿಗೂ ವರ್ಚುವಲ್ ಆಗಿ ಹಸಿರು ನಿಶಾನೆ ತೋರಲಿದ್ದಾರೆ.ಸಾಮಾನ್ಯ ಮೆಟ್ರೋ ರೈಲುಗಳು ನಗರ ವ್ಯಾಪ್ತಿಯೊಳಗೆ ಮತ್ತು ನಗರದ ಹೊರವಲಯದ ಪ್ರದೇಶಗಳನ್ನು ಕೇಂದ್ರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಿವೆ. ಆದರೆ 100-250 ಕಿ.ಮೀ ವ್ಯಾಪ್ತಿಯ ನಗರಗಳ ನಡುವೆ ಸಂಪರ್ಕಕ್ಕಾಗಿ ವಂದೇ ಮೆಟ್ರೋ ರೈಲು ಸೇವೆ ಆರಂಭಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗಂಟೆಗೆ 110 ಕಿ.ಮೀ ವೇಗದಲ್ಲಿ ಸಂಚರಿಸಬಲ್ಲ ಈ ರೈಲು, ಸ್ಲೈಡಿಂಗ್‌ ಡೋರ್‌, ಆರಾಮದಾಯಕ ಆಸನ ಸೇರಿದಂತೆ ಮೆಟ್ರೋ ರೈಲಿನ ರೀತಿಯಲ್ಲೇ ಎಲ್ಲಾ ಸೌಕರ್ಯ ಹೊಂದಿರಲಿದೆ. ರೈಲು 12 ಕೋಚ್‌ ಹೊಂದಿದ್ದು ಒಮ್ಮೆಗೆ 1150 ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲದು.

ಮೊದಲ ರೈಲು:

ಉದ್ಯಮಗಳ ನಗರವಾಗಿರುವ ಅಹಮದಾಬಾದ್‌ ಮತ್ತು ಭೌಗೋಳಿಕವಾಗಿ ದೇಶದ ಅತಿದೊಡ್ಡ ಜಿಲ್ಲೆ ಮತ್ತು ಔದ್ಯಮಿಕ ಕೇಂದ್ರವಾಗಿರುವ ಭುಜ್‌ ನಡುವಿನ 359 ಕಿ.ಮೀ ದೂರವನ್ನು ರೈಲು 5 ಗಂಟೆ 45 ನಿಮಿಷದಲ್ಲಿ ಕ್ರಮಿಸಲಿದೆ. ಟಿಕೆಟ್‌ ದರ 455 ರುಪಾಯಿ. ಕನಿಷ್ಠ ದರ 30 ರುಪಾಯಿ.

==

ತೀರ್ಥಕ್ಷೇತ್ರ ಸಂಪರ್ಕಿಸುವ 6 ವಂದೇ ರೈಲುಗಳಿಗೆ ಮೋದಿ ಚಾಲನೆ

 ರಾಂಚಿ :  ಪ್ರಧಾನಿ ನರೇಂದ್ರ ಮೋದಿ ಭಾನುವಾರ ವಾರಾಣಸಿ. ಕೋಲ್ಕತಾದ ಬೇಲೂರು ಮಠ ಹಾಗೂ ಜಾರ್ಖಂಡದ ಬೈದ್ಯನಾಥ ಧಾಮದಂಥ ತೀರ್ಥಕ್ಷೇತ್ರ ಸಂಪರ್ಕಿಸುವ 6 ವಂದೇಭಾರತ್‌ ರೈಲುಗಳಿಗೆ ಚಾಲನೆ ನೀಡಿದರು. ಈ ರೈಲುಗಳು ಜಾರ್ಖಂಡ್‌, ಒಡಿಶಾ, ಬಿಹಾರ ಹಾಗೂ ಉತ್ತರ ಪ್ರದೇಶಗಳಲ್ಲಿ ಸಂಚರಿಸಲಿವೆ.

ಟಾಟಾನಗರಕ್ಕೆ ಬಂದು ಮೋದಿ ಖುದ್ದು ಟಾಟಾನಗರ-ಪಟನಾ ವಂದೇಭಾರತ್‌ ರೈಲಿಗೆ ಹಾಗೂ ಉಳಿದ ರೈಲುಗಳಿಗೆ ಅಲ್ಲಿಂದಲೇ ವರ್ಚುವಲ್‌ ವಿಧಾನದಲ್ಲಿ ಚಾಲನೆ ನೀಡಬೇಕಿತ್ತು. ಆದರೆ ಪ್ರತಿಕೂಲ ಹವಾಮಾನದ ಕಾರಣ ರಾಂಚಿಯಿಂದ ಅವರ ಹೆಲಿಕಾಪ್ಟರ್‌ ಟಾಟಾನಗರಕ್ಕೆ ಬರಲಿಲ್ಲ. ಹೀಗಾಗಿ ರಾಂಚಿಯಿಂದಲೇ ಎಲ್ಲ ರೈಲುಗಳಿಗೆ ಅವರು ವರ್ಚುವಲ್‌ ಆಗಿ ಚಾಲನೆ ನೀಡಿದರು. ಟಾಟಾನಗರ-ಪಟನಾ, ರೂರ್‌ಕೆಲಾ-ಹೌರಾ, ದೇವಗಢ-ವಾರಾಣಸಿ, ಭಾಗಲ್ಪುರ-ಹೌರಾ, ಗಯಾ-ಹೌರಾ, ಬ್ರಹ್ಮಪುರ-ಟಾಟಾನಗರ ನಡುವೆ ಈ ರೈಲು ಸಂಚರಿಸಲಿವೆ.

ಇದೇ ವೇಳೆ, 32 ಸಾವಿರ ಪ್ರಧಾನಮಂತ್ರಿ ಗ್ರಾಮೀಣ ಆವಾಸ್‌ ಯೋಜನೆ ಫಲಾನುಭವಿಗಳಿಗೆ ವರ್ಚುವಲ್‌ ಆಗಿ ಅವರು ಮನೆ ಹಕ್ಕುಪತ್ರ ವಿತರಿಸಿದರು ಹಾಗೂ ಜಾರ್ಖಂಡ್‌ನ 600 ಕೋಟಿ ರು. ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.ಈ ವೇಳೆ ಅವರು ಮಾತನಾಡಿ, ಆದಿವಾಸಿಗಳು, ಬಡವರು, ಮಹಿಳೆಯರ ಉದ್ಧಾರ ಕೇಂದ್ರದ ಆದ್ಯತೆ ಎಂದರು.