ಅಸಮಾನತೆ ನಿವಾರಣೆಗೆ ಸಂಪತ್ತು ತೆರಿಗೆ, ಪಿತ್ರಾರ್ಜಿತ ಆಸ್ತಿಗೆ ತೆರಿಗೆ ಜಾರಿಗೆ ಸಲಹೆ!

| Published : May 25 2024, 01:01 AM IST / Updated: May 25 2024, 06:06 AM IST

ಅಸಮಾನತೆ ನಿವಾರಣೆಗೆ ಸಂಪತ್ತು ತೆರಿಗೆ, ಪಿತ್ರಾರ್ಜಿತ ಆಸ್ತಿಗೆ ತೆರಿಗೆ ಜಾರಿಗೆ ಸಲಹೆ!
Share this Article
  • FB
  • TW
  • Linkdin
  • Email

ಸಾರಾಂಶ

‘ಭಾರತದಲ್ಲಿ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆ ನಿವಾರಣೆಗೆ 10 ಕೋಟಿ ರು.ಗಿಂತ ಹೆಚ್ಚು ಸಂಪತ್ತು ಹೊಂದಿರುವ ಭಾರೀ ಶ್ರೀಮಂತರ ಸಂಪತ್ತಿನ ಮೇಲೆ ಶೇ.2 ತೆರಿಗೆ ಹಾಕಬೇಕು ಮತ್ತು ಪಿತ್ರಾರ್ಜಿತ ಆಸ್ತಿಯ ಮೇಲೆ ಶೇ.33 ತೆರಿಗೆ ಹಾಕಬೇಕು’ ಎಂದು   ಸಂಶೋಧನಾ ವರದಿಯೊಂದು ಸಲಹೆ ನೀಡಿದೆ.

ನವದೆಹಲಿ: ‘ಭಾರತದಲ್ಲಿ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆ ನಿವಾರಣೆಗೆ 10 ಕೋಟಿ ರು.ಗಿಂತ ಹೆಚ್ಚು ಸಂಪತ್ತು ಹೊಂದಿರುವ ಭಾರೀ ಶ್ರೀಮಂತರ ಸಂಪತ್ತಿನ ಮೇಲೆ ಶೇ.2 ತೆರಿಗೆ ಹಾಕಬೇಕು ಮತ್ತು ಪಿತ್ರಾರ್ಜಿತ ಆಸ್ತಿಯ ಮೇಲೆ ಶೇ.33 ತೆರಿಗೆ ಹಾಕಬೇಕು’ ಎಂದು ಭಾರತ ಹಾಗೂ ಫ್ರಾನ್ಸ್‌ನ ಆರ್ಥಿಕ ತಜ್ಞರು ಸಿದ್ಧಪಡಿಸಿದ ಸಂಶೋಧನಾ ವರದಿಯೊಂದು ಸಲಹೆ ನೀಡಿದೆ.

ಕಾಂಗ್ರೆಸ್‌ ನಾಯಕ ಸ್ಯಾಮ್‌ ಪಿತ್ರೋಡಾ ಕೆಲ ದಿನಗಳ ಹಿಂದೆ ಇಂಥದ್ದೊಂದು ಸಲಹೆ ನೀಡಿದಾಗ ಅದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಬಿಜೆಪಿ ನಾಯಕರು ಕಾಂಗ್ರೆಸ್‌ ವಿರುದ್ಧ ಮುಗಿಬಿದ್ದಿದ್ದರು. ಅದರ ಬೆನ್ನಲ್ಲೇ ಈ ವರದಿ ಪ್ರಕಟವಾಗಿದೆ.ಪ್ಯಾರಿಸ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ಆ್ಯಂಡ್‌ ವರ್ಲ್ಡ್‌ ಇನ್‌ಈಕ್ವಾಲಿಟಿ ಲ್ಯಾಬ್‌ನ ಥಾಮಸ್‌ ಪಿಕೆಟ್ಟಿ, ಹಾರ್ವರ್ಡ್‌ ಕೆನೆಡಿ ಸ್ಕೂಲ್‌ ಆ್ಯಂಡ್‌ ವರ್ಲ್ಡ್‌ ಇನ್‌ಈಕ್ವಾಲಿಟಿ ಲ್ಯಾಬ್‌ನ ಲುಕಾಸ್‌ ಚಾನ್ಸೆಲ್‌ ಮತ್ತು ನ್ಯೂಯಾಕ್ಸ್‌ ಯೂನಿವರ್ಸಿಟಿ ಮತ್ತು ವರ್ಲ್ಡ್‌ ಇನ್‌ಈಕ್ವಾಲಿಟಿ ಲ್ಯಾಬ್‌ನ ನಿತಿನ್‌ ಕುಮಾರ್‌ ಭಾರತಿ ಅವರನ್ನೊಳಗೊಂಡ ತಂಡ, ‘ಇನ್‌ಕಮ್‌ ಆ್ಯಂಡ್‌ ವೆಲ್ತ್‌ ಇನ್‌ಈಕ್ವಾಲಿಟಿ ಇನ್‌ ಇಂಡಿಯಾ, 1922-2023: ದ ರೈಸ್‌ ಆಫ್‌ ಬಿಲಿಯನೇರ್‌ ರಾಜ್‌’ ವರದಿ ಪ್ರಕಟಿಸಿದೆ

.ವರದಿಯಲ್ಲೇನಿದೆ?:

ಭಾರತದಲ್ಲಿ ಆರ್ಥಿಕ ಅಸಮಾನತೆ ನಿವಾರಣೆಗೆ ತೆರಿಗೆ ಪದ್ಧತಿಯಲ್ಲಿ ಅಮೂಲಾಗ್ರ ಬದಲಾವಣೆ ಮಾಡಬೇಕು. ಆಗರ್ಭ ಶ್ರೀಮಂತರಿಗೆ ಹೆಚ್ಚಿನ ತೆರಿಗೆ ವಿಧಿಸುವ ಮೂಲಕ ಆರ್ಥಿಕ ಅಸಮಾನತೆ ನಿವಾರಣೆಗೆ ಅಗತ್ಯವಾದ ಸಾಮಾಜಿಕ ವಲಯದ ಯೋಜನೆಗಳಿಗೆ ಹೂಡಿಕೆ ಮಾಡಲು ಹಣ ಹೊಂದಿಸಬೇಕು. ಭಾರೀ ಶ್ರೀಮಂತರ ಮೇಲೆ ತೆರಿಗೆ ವಿಧಿಸಿ, ಉಳಿದ ಶೇ.99.96ರಷ್ಟು ಜನರನ್ನು ಹೊರಗಿಡಬೇಕು ಎಂದು ವರದಿ ಹೇಳಿದೆ.

10 ಕೋಟಿ ರು.ಗಿಂತ ಹೆಚ್ಚಿನ ಆಸ್ತಿ ಹೊಂದಿರುವವರಿಗೆ ಕನಿಷ್ಠ ಶೇ.2ರಷ್ಟು ‘ಸಂಪತ್ತು ತೆರಿಗೆ’ ವಿಧಿಸಬೇಕು. ಅದೇ ರೀತಿಯ ಪಿತ್ರಾರ್ಜಿತ ಆಸ್ತಿಯ ಮೇಲೆ ಶೇ.33ರಷ್ಟು ತೆರಿಗೆ ಹಾಕಬೇಕು. ಹೀಗೆ ಹಾಕಿದರೆ ಸಂಗ್ರಹವಾಗುವ ಮೊತ್ತವು ದೇಶದ ಒಟ್ಟು ಜಿಡಿಪಿಯ ಶೇ.2.73ರಷ್ಟು ಇರಲಿದೆ. ಬಡವರು, ಕೆಳವರ್ಗದ ಜನರು ಮತ್ತು ಮಧ್ಯಮ ವರ್ಗದ ಜನರಿಗೆ ನೆರವು ನೀಡಲು ಇಂಥ ಯೋಜನೆ ಅಗತ್ಯ ಎಂದು ವರದಿ ಹೇಳಿದೆ.

ಜೊತೆಗೆ ಇಂಥ ತೆರಿಗೆ ಪದ್ಧತಿ ಜಾರಿಗೂ ಮುನ್ನ ವಿಸ್ತೃತ ಚರ್ಚೆ ನಡೆಸಬೇಕು. ಅದರ ಮೂಲಕ ಹೊರಹೊಮ್ಮಿದ ಸರ್ವಸಮ್ಮತ ಅಂಶಗಳನ್ನು ಬಳಸಿಕೊಂಡು ಹೊಸ ತೆರಿಗೆ ನೀತಿ ಜಾರಿ ಮಾಡಬೇಕು ಎಂದು ವರದಿ ಹೇಳಿದೆ.

ಅಲ್ಲದೆ 2000ನೇ ಇಸವಿಯ ಬಳಿಕ ಭಾರತದಲ್ಲಿ ಆರ್ಥಿಕ ಅಸಮಾನತೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. 2000ನೇ ಇಸವಿಯಲ್ಲಿ ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.1ರಷ್ಟಿರುವ ಶ್ರೀಮಂತರ ಆದಾಯ ಮತ್ತು ಸಂಪತ್ತು ಒಟ್ಟಾರೆ ಆದಾಯ ಮತ್ತು ಸಂಪತ್ತಿನಲ್ಲಿ ಶೇ.22.6ರಷ್ಟಿದ್ದರೆ, 2022-23ರಲ್ಲಿ ಅದು ಶೇ.40.1ಕ್ಕೆ ಹೆಚ್ಚಳವಾಗಿದೆ. ಈ ಪ್ರಮಾಣದಲ್ಲಿ ವಿಶ್ವದಲ್ಲೇ ಅತ್ಯಧಿಕ ಎಂದು ವರದಿ ಹೇಳಿದೆ.

==

ಸಲಹೆಗಳೇನು?

- ₹10 ಕೋಟಿಗಿಂತ ಹೆಚ್ಚು ಆಸ್ತಿ ಮೇಲೆ ಶೇ.2 ತೆರಿಗೆ ಹಾಕಿ- ಪಿತ್ರಾರ್ಜಿತ ಆಸ್ತಿ ಮೇಲೆ ಶೇ.33 ತೆರಿಗೆ ಹಾಕಿ