ಸಾರಾಂಶ
ನವದೆಹಲಿ : ರಾಜಸ್ಥಾನದ ಜೈಸಲ್ಮೇರ್‌ನಲ್ಲಿರುವ ಪೋಖ್ರಣ್ ಫೈರಿಂಗ್ ರೇಂಜ್‌ಗಳಲ್ಲಿ ಭಾರತವು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ‘ವಶೋರಾಡ್ಸ್’ ಕ್ಷಿಪಣಿಗಳನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.
VSHORADS ಎಂದರೆ ‘ಅತ್ಯಂತ ಕಡಿಮೆ ವ್ಯಾಪ್ತಿಯ ವಾಯು ರಕ್ಷಣಾ ವ್ಯವಸ್ಥೆ’ ಆಗಿದ್ದು, 4ನೇ ತಲೆಮಾರಿನ ವ್ಯವಸ್ಥೆಯಾಗಿದೆ. ಇದರ 3 ಪರೀಕ್ಷೆಗಳನ್ನು ರಾಜಸ್ಥಾನದ ಪೋಖ್ರಾನ್ ಶ್ರೇಣಿಯಲ್ಲಿ ರಕ್ಷಣಾ ಮತ್ತು ಸಂಶೋಧನಾ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ನಡೆಸಿದೆ.ಈ ಕ್ಷಿಪಣಿಗಳು ಕಳೆದ ಕೆಲವು ವರ್ಷಗಳಿಂದ ಅಭಿವೃದ್ಧಿ ಹಂತದಲ್ಲಿವೆ ಮತ್ತು ಶತ್ರು ವಿಮಾನಗಳು, ಡ್ರೋನ್‌ಗಳು ಮತ್ತು ಇತರ ವೈಮಾನಿಕ ಗುರಿಗಳನ್ನು ಕಡಿಮೆ ವ್ಯಾಪ್ತಿಯಲ್ಲಿ ನಿಭಾಯಿಸಲು ಸೇನಾ ಪಡೆಗಳಿಗೆ ನೆರವಾಗುತ್ತವೆ, ಈವರೆಗೂ ಪಡೆಗಳು ಇದಕ್ಕಾಗಿ ರಷ್ಯಾದ ಇಗ್ಲಾ ಕ್ಷಿಪಣಿಗಳನ್ನು ಅವಲಂಬಿಸಿದ್ದವು.
ಈಗ ಇಗ್ಲಾ ಸ್ಥಾನವನ್ನು ‘ವಶೋರಾಡ್ಸ್’ ಕ್ಷಿಪಣಿಗಳು ತುಂಬುವ ಸಾಧ್ಯತೆ ಇದೆ.ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಪ್ರಯೋಗದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದು, ‘ಆಧುನಿಕ ತಂತ್ರಜ್ಞಾನಗಳನ್ನು ಹೊಂದಿರುವ ಈ 4ನೇ ತಲೆಮಾರಿನ ಹೊಸ ಕ್ಷಿಪಣಿಯು ವೈಮಾನಿಕ ಬೆದರಿಕೆಗಳ ವಿರುದ್ಧ ಸಶಸ್ತ್ರ ಪಡೆಗಳಿಗೆ ಮತ್ತಷ್ಟು ತಾಂತ್ರಿಕ ಉತ್ತೇಜನ ನೀಡುತ್ತದೆ’ ಎಂದು ಹೇಳಿದ್ದಾರೆ.