ಸಾರಾಂಶ
ನವದೆಹಲಿ: 2047ರ ವೇಳೆಗೆ 2 ಸಾವಿರ ಲಕ್ಷ ಕೋಟಿಯಿಂದ 3 ಸಾವಿರ ಲಕ್ಷ ಕೋಟಿ ರು. ಜಿಡಿಪಿಯೊಂದಿಗೆ ಭಾರತದ ಆರ್ಥಿಕತೆಯು ಅಧಿಕ ಆದಾಯದ ದೇಶವಾಗಿ ಪರಿವರ್ತನೆಯಾಗಲಿದೆ.
ಜನಸಂಖ್ಯೆ, ತಾಂತ್ರಿಕ ಆವಿಷ್ಕಾರ ಮತ್ತು ಕ್ಷೇತ್ರವಾರು ಪರಿವರ್ತನೆ ಹಾಗೂ ವಾರ್ಷಿಕ ಶೇ. 8ರಿಂದ ಶೇ.10ರಷ್ಟು ಆರ್ಥಿಕ ಬೆಳವಣಿಗೆಯ ಬೆಂಬಲದೊಂದಿಗೆ ಇಂಥ ಪರಿವರ್ತನೆ ಸಾಧ್ಯವಾಗಲಿದೆ ಎಂದು ಬೈನ್ ಆ್ಯಂಡ್ ಕಂಪನಿ ಮತ್ತು ನಾಸ್ಕಾಂನ ವರದಿ ಹೇಳಿದೆ.
200 ದಶಲಕ್ಷ ಉದ್ಯೋಗ ಸೃಷ್ಟಿ:
2027ರಲ್ಲಿ ಸೇವಾ ಕ್ಷೇತ್ರಗಳು ದೇಶದ ಆರ್ಥಿಕತೆಗೆ ಶೇ.60ರಷ್ಟು ಹಾಗೂ ಉತ್ಪಾದನಾ ಕ್ಷೇತ್ರವು ಶೇ.32 ರಷ್ಟು ಕೊಡುಗೆ ನೀಡುವ ನಿರೀಕ್ಷೆ ಇದೆ. ಈ ಎರಡೂ ಕ್ಷೇತ್ರಗಳು ಆರ್ಥಿಕತೆ ವಿಸ್ತರಣೆಯಲ್ಲಿ ಪ್ರಮುಖ ಪಾತ್ರವಹಿಸಲಿವೆ. ಸುಮಾರು 200 ದಶಲಕ್ಷ ಮಂದಿ ಮುಂದಿನ ದಶಕಗಳಲ್ಲಿ ಉದ್ಯೋಗ ಮಾರುಕಟ್ಟೆ ಪ್ರವೇಶಿಸಲಿದ್ದಾರೆ. ಉನ್ನತಮೌಲ್ಯದ ಉದ್ಯೋಗ ಸೃಷ್ಟಿ ಭಾರತಕ್ಕೆ ಸಾಧ್ಯವಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಎಲೆಕ್ಟ್ರಾನಿಕ್ಸ್, ಎನರ್ಜಿ, ಕೆಮಿಕಲ್ಸ್, ಆಟೋಮೊಬೈಲ್ ಮತ್ತು ಸೇವೆ ಈ ಐದು ಕ್ಷೇತ್ರಗಳು ದೇಶದ ಅಭಿವೃದ್ಧಿಯ ಚಾಲಕ ಶಕ್ತಿಯಾಗಿ ಕೆಲಸ ಮಾಡಲಿವೆ. ವರಮಾನ, ಕೌಶಲ್ಯಭರಿತ ಕೆಲಸಗಾರರಲ್ಲಿನ ಹೆಚ್ಚಳ ಮತ್ತು ಮೂಲಸೌಲಭ್ಯದ ಸುಧಾರಣೆಯು ಭಾರತದ ಆರ್ಥಿಕತೆಯ ಬೆಳವಣಿಗೆಗೆ ಉತ್ತೇಜನ ನೀಡಲಿದೆ ಎಂದು ವರದಿ ತಿಳಿಸಿದೆ.
ತಗ್ಗಲಿದೆ ಆಮದು:
ಬ್ಯಾಕ್‌ವರ್ಡ್ ಇಂಟಿಗ್ರೇಷನ್ ಮತ್ತು ಸ್ಥಳೀಯ ಉತ್ಪಾದನೆಯ ಒಗ್ಗೂಡಿಸುವಿಕೆಯು ಕ್ಲಿಷ್ಟಕರ ಬಿಡಿಭಾಗಗಳಿಗಾಗಿ ಆಮದಿನ ಮೇಲಿನ ದೇಶದ ಅವಲಂಬನೆ ಕಡಿಮೆ ಮಾಡಲಿದೆ.
ಡಿಜಿಟಲ್, ಟ್ರಾನ್ಸ್‌ಪೋರ್ಟ್ ಮೂಲಸೌಲಭ್ಯ, ದೇಶೀ ಉತ್ಪಾದನೆ ಮೇಲ್ತರಕ್ಕೇರಿಸುವಿಕೆ ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿಗೆ ನೀಡುವ ಉತ್ತೇಜನದಿಂದ ಭವಿಷ್ಯದ ತಂತ್ರಜ್ಞಾನ ಮತ್ತು ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಭಾರತವನ್ನು ನಾಯಕನನ್ನಾಗಿ ಪರಿವರ್ತಿಸಬಹುದಾಗಿದೆ ಎಂದು ನಾಸ್ಕಾಂನ ಹಿರಿಯ ಉಪಾಧ್ಯಕ್ಷೆ ಸಂಗೀತಾ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಆರ್ಥಿಕ ಬೆಳವಣಿಗೆಯು ಮೂಲಸೌಲಭ್ಯದ ಬಲವರ್ಧನೆ, ಕೌಶಲ್ಯದ ಕೊರತೆ ನಿವಾರಣೆ ಮತ್ತು ತಂತ್ರಜ್ಞಾನ ಹಾಗೂ ಅಂತಾರಾಷ್ಟ್ರೀಯ ಪಾಲುದಾರಿಕೆ ಮೂಲಕ ಆವಿಷ್ಕಾರಕ್ಕೆ ಉತ್ತೇಜನ ನೀಡುವುದನ್ನು ಅವಲಂಬಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.