ಸಾರಾಂಶ
ನವದೆಹಲಿ: ಭಾರತಕ್ಕೆ ಸದಾ ಒಂದಿಲ್ಲೊಂದು ರೀತಿಯಲ್ಲಿ ತೊಂದರೆ ಕೊಡುವ ಚೀನಾ, ಅರುಣಾಚಲ ಪ್ರದೇಶದ ಗಡಿಯಾಚೆಗಿನ ಭಾಗದಲ್ಲಿ 90 ಹಳ್ಳಿಗಳನ್ನು ನಿರ್ಮಿಸುತ್ತಿದೆ. ಇದನ್ನು ಅದು ಭಾರತದ ವಿರುದ್ಧ ಸೇನಾ ಮೂಲಸೌಕರ್ಯ ಬಲಪಡಿಸುವ ಉದ್ದೇಶಕ್ಕೆ ಬಳಸುವ ಶಂಕೆಯಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಇನ್ನೊಂದು ಕಡೆ, ಚೀನಾದ ಕಮ್ಯುನಿಸ್ಟ್ ಆಡಳಿತದಿಂದ ತಪ್ಪಿಸಿಕೊಳ್ಳಲು ಟಿಬೆಟ್ ನಿರಾಶ್ರಿತರು ಸಾಮಾನ್ಯವಾಗಿ ಬಳಸುವ ಟಿಬೆಟ್ ಹಾಗೂ ನೇಪಾಳದ ನಡುವಿನ ಗಡಿಯಲ್ಲೂ ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಮೂಲಕ ಅವರ ಪರಾರಿಗೆ ಕಡಿವಾಣ ಹಾಕುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.ಹೀಗಾಗಿ, 5 ವರ್ಷ ಹಿಂದಿನ ಗಲ್ವಾನ್ ಸಂಘರ್ಷದ ಬಳಿಕ ಗಡಿಯಲ್ಲಿ ಇತ್ತೀಚೆಗೆ ಶಾಂತಿ ಮಂತ್ರ ಜಪ ಆರಂಭಿಸಿದ್ದ ಚೀನಾ ಗುಪ್ತವಾಗಿ ಭಾರತದ ವಿರುದ್ಧ ಮತ್ತೆ ಕತ್ತಿ ಮಸೆಯುತ್ತಿದೆ ಎಂದು ಸಾಬೀತಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಹೇಳಿದೆ.
ಖರ್ಗೆ ಆಕ್ರೋಶ:ಈ ವರದಿ ಬಹಿರಂಗವಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಮೋದಿ ಅವರ ಆದ್ಯತೆಗಳು ನಕಲಿ ಜಾಹೀರಾತುಗಳ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುವುದೇ ವಿನಃ ರಾಷ್ಟ್ರೀಯ ಭದ್ರತೆಯಲ್ಲ. ಚೀನಾಗೆ ಕೆಂಗಣ್ಣು ತೋರುವ ಬದಲು ಪ್ರಧಾನಿ ಮೋದಿ ಅವರಿಗೆ ಸಲಾಂ ಮಾಡುತ್ತಿದ್ದಾರೆ. ರಾಷ್ಟ್ರೀಯ ಭದ್ರತೆ, ಪ್ರಾದೇಶಿಕ ಸಾರ್ವಭೌಮತ್ವ ಮತ್ತು ಸಮಗ್ರತೆ ಅತಿಮುಖ್ಯವಾದವು. ಆದರೆ ಮೋದಿ ಅವುಗಳಿಗೇ ಅಪಾಯ ತಂದೊಡ್ಡುತ್ತಿದ್ದಾರೆ. ಇದಕ್ಕೆ ನಮ್ಮ ಬಳಿ ಸೂಕ್ತ ಸಾಕ್ಷಿಗಳಿವೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಂತೆಯೇ, ‘ಗಡಿ ಪ್ರದೇಶದ ಹಳ್ಳಿಗಳ ಅಭಿವೃದ್ಧಿಗಾಗಿ ಆರಂಭಿಸಲಾದ ವೈಬ್ರಂಟ್ ವಿಲೇಜಸ್ ಕಾರ್ಯಕ್ರಮದ ಶೇ.90ರಷ್ಟು ನಿಧಿಯನ್ನು ಕಳೆದೆರಡು ವರ್ಷಗಳಲ್ಲಿ ಖರ್ಚೇ ಮಾಡಿಲ್ಲ. 4,800 ಕೋಟಿ ರು.ನಲ್ಲಿ ಕೇವಲ 509 ಕೋಟಿ ರು. ವ್ಯಯಿಸಲಾಗಿದೆ’ ಎಂದು ಖರ್ಗೆ ಆರೋಪಿಸಿದ್ದಾರೆ.