ಸಾರಾಂಶ
ಅಮೆರಿಕಕ್ಕೆ ವಿದ್ಯಾಭ್ಯಾಸಕ್ಕೆಂದು ಬರುವ ವಿದೇಶಿ ವಿದ್ಯಾರ್ಥಿಗಳ ಪೈಕಿ ಭಾರತ ಮೊದಲ ಸ್ಥಾನ ಪಡೆದಿದೆ. ಈ ಮೂಲಕ ಕಳೆದ 15 ವರ್ಷಗಳಿಂದ ಮೊದಲ ಸ್ಥಾನದಲ್ಲಿದ್ದ ಚೀನಾವನ್ನು ಹಿಂದಿಕ್ಕಿದೆ.
ನವದೆಹಲಿ: ಅಮೆರಿಕಕ್ಕೆ ವಿದ್ಯಾಭ್ಯಾಸಕ್ಕೆಂದು ಬರುವ ವಿದೇಶಿ ವಿದ್ಯಾರ್ಥಿಗಳ ಪೈಕಿ ಭಾರತ ಮೊದಲ ಸ್ಥಾನ ಪಡೆದಿದೆ. ಈ ಮೂಲಕ ಕಳೆದ 15 ವರ್ಷಗಳಿಂದ ಮೊದಲ ಸ್ಥಾನದಲ್ಲಿದ್ದ ಚೀನಾವನ್ನು ಹಿಂದಿಕ್ಕಿದೆ.
2008-09ರಲ್ಲಿ ಯಾವುದೇ ದೇಶಗಳಿಗಿಂತ ಅತಿ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಅಮೆರಿಕದಲ್ಲಿದ್ದರು. ಇದಾದ ನಂತರ ಅಂದರೆ 2009-10ರಿಂದ ಸತತವಾಗಿ ಚೀನಾ ವಿದ್ಯಾರ್ಥಿಗಳು ಅತಿ ಹೆಚ್ಚು ಪ್ರಮಾಣಲ್ಲಿದ್ದು, ನಂ.1 ಸ್ಥಾನದಲ್ಲಿದ್ದರು. ಆದರೆ 2023-24ನೇ ಸಾಲಿನಲ್ಲಿ ಚೀನಾವನ್ನು ಹಿಂದಿಕ್ಕಿ ಭಾರತ ಮೊದಲ ಸ್ಥಾನ ಪಡೆದಿದೆ.2023-2024ನೇ ಶೈಕ್ಷಣಿಕ ವರ್ಷದಲ್ಲಿ ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿರುವ ಒಟ್ಟು ವಿದ್ಯಾರ್ಥಿಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಶೇ.29ರಷ್ಟಿದೆ. ಅಂದರೆ 3.3 ಲಕ್ಷಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇದು ಸಾರ್ವಕಾಲಿಕ ಗರಿಷ್ಠ. ಈ ಸಾಲಿನಲ್ಲಿ ಚೀನಾದ 2.77 ಲಕ್ಷ ಮಾತ್ರ ವಿದ್ಯಾರ್ಥಿಗಳು ಅಮೆರಿಕದಲ್ಲಿ ಅಧ್ಯಯನ ನಡೆಸುತ್ತಿದ್ದಾರೆ ಎಂದು ‘ಓಪನ್ ಡೋರ್ಸ್’ ಎಂಬ ಸಂಸ್ಥೆಯ ವರದಿ ತಿಳಿಸಿದೆ.
2022-23 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಹೋಲಿಸಿದರೆ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 2023-24ಕ್ಕೆ ಶೇ.23 ರಷ್ಟು ಏರಿಕೆ ಆಗಿದೆ.ಅಮೆರಿಕಕ್ಕೆ ಆಗಮಿಸುವ ವಿದೇಶಿ ವಿದ್ಯಾರ್ಥಿಗಳಲ್ಲಿ ಭಾರತ, ಚೀನಾ, ದಕ್ಷಿಣ ಕೊರಿಯಾ, ಕೆನಡಾ ಹಾಗೂ ತೈವಾನ್ ಟಾಪ್ 5 ರಾಷ್ಟ್ರಗಳಾಗಿವೆ.