ಭಾರತ - ಬ್ರಿಟನ್ ಐತಿಹಾಸಿಕ ವ್ಯಾಪಾರ ಒಪ್ಪಂದ

| N/A | Published : Jul 25 2025, 12:31 AM IST / Updated: Jul 25 2025, 04:47 AM IST

ಸಾರಾಂಶ

ಪರಸ್ಪರ ಮುಕ್ತ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವ ಐತಿಹಾಸಿಕ ಒಪ್ಪಂದಕ್ಕೆ ಭಾರತ ಮತ್ತು ಬ್ರಿಟನ್‌, ಗುರುವಾರ ಇಲ್ಲಿ ಹಾಕಿವೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್‌ ಪ್ರಧಾನಿ ಕೀಮ್‌ ಸ್ಟಾರ್ಮರ್‌ ಸಮ್ಮುಖದಲ್ಲಿ ಒಪ್ಪಂದಕ್ಕೆ ಅಂಕಿತ ಬಿದ್ದಿದೆ.

 ಲಂಡನ್‌: ಪರಸ್ಪರ ಮುಕ್ತ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವ ಐತಿಹಾಸಿಕ ಒಪ್ಪಂದಕ್ಕೆ ಭಾರತ ಮತ್ತು ಬ್ರಿಟನ್‌, ಗುರುವಾರ ಇಲ್ಲಿ ಹಾಕಿವೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್‌ ಪ್ರಧಾನಿ ಕೀಮ್‌ ಸ್ಟಾರ್ಮರ್‌ ಸಮ್ಮುಖದಲ್ಲಿ ಒಪ್ಪಂದಕ್ಕೆ ಅಂಕಿತ ಬಿದ್ದಿದೆ. 

2030ರ ವೇಳೆಗೆ ಉಭಯ ದೇಶಗಳ ವ್ಯಾಪಾರದ ವಹಿವಾಟಿನ ಮೊತ್ತವನ್ನು ಅಂದಾಜು 5 ಲಕ್ಷ ಕೋಟಿ ರು.ಗೆ ಏರಿಸುವ ಗುರಿ ಹೊಂದಿರುವ ಈ ಒಪ್ಪಂದದ ಮುಂದಿನ ವರ್ಷದಿಂದ ಜಾರಿಗೆ ಬರಲಿದೆ. ಒಪ್ಪಂದದ ಅನ್ವಯ ಭಾರತದ ಶೇ.99ರಷ್ಟು ಉತ್ಪನ್ನಗಳು ಸುಂಕ ರಹಿತವಾಗಿ ಬ್ರಿಟನ್‌ ಪ್ರವೇಶಿಸುವ ಅವಕಾಶ ಪಡೆಯಲಿದ್ದರೆ, ಭಾರತವು ಬ್ರಿಟನ್‌ ವಸ್ತುಗಳಿಗೆ ಹೇರಿದ್ದ ಸುಂಕವನ್ನು ಭಾರೀ ಪ್ರಮಾಣದಲ್ಲಿ ಕಡಿತ ಮಾಡಲಿದೆ.

ಪರಿಣಾಮ ಮುಂಬರುವ ದಿನಗಳಲ್ಲಿ ಬ್ರಿಟನ್‌ನ ಕಾರು, ಚಾಕಲೆಟ್‌, ವಿಸ್ಕಿ, ಸೌಂದರ್ಯ ಸಾಮಗ್ರಿಗಳು, ಮೊದಲಾದ ವಸ್ತುಗಳು ಭಾರತೀಯರಿಗೆ ಲಭ್ಯವಾಗಲಿದ್ದರೆ, ಭಾರತದ ಜವಳಿ, ಆಭರಣ, ಪಾದರಕ್ಷೆ, ಕ್ರೀಡಾ ಉತ್ಪನ್ನ ಮತ್ತು ಗೊಂಬೆಗಳಿಗೆ ಹೊಸ ಮಾರುಕಟ್ಟೆ ಸೃಷ್ಟಿಯಾಗಲಿದೆ. ಅಲ್ಲದೆ ಬ್ರಿಟನ್‌ನಲ್ಲಿ ಸೇವೆ ಸಲ್ಲಿಸುವ ಭಾರತೀಯ ಉದ್ಯೋಗಿಗಳ ಪರವಾಗಿ ಭಾರತೀಯ ಐಟಿ ಕಂಪನಿಗಳು ಮೂರು ವರ್ಷಗಳ ಕಾಲ ಸಾಮಾಜಿಕ ಭದ್ರತಾ ನೆರವು ನೀಡುವುದಕ್ಕೆ ವಿನಾಯ್ತಿ ಸಿಗಲಿದೆ. ಆದರೆ ಭಾರತೀಯ ಕೃಷಿ ಸಮುದಾಯ ರಕ್ಷಿಸುವ ನಿಟ್ಟಿನಲ್ಲಿ ಕೃಷಿ, ಮತ್ತು ಡೈರಿ ಉತ್ಪನ್ನಗಳ ಆಮದಿನ ಮೇಲಿನ ಸುಂಕವನ್ನು ಹಿಂದಿನಂತೆಯೇ ಭಾರತ ಮುಂದುವರೆಸಿದೆ.

ಮುಕ್ತ ವ್ಯಾಪಾರ ಒಪ್ಪಂದ ಎಂದರೇನು?

ಎರಡು ದೇಶಗಳ ನಡುವೆ ನಡೆಯುವ ಸರಕು, ಸೇವೆಗಳ ವಿನಿಮಯಕ್ಕೆ ಸಂಬಂಧಿಸಿದಂತೆ ಪರಸ್ಪರ ಅನುಕೂಲವಾಗುವಂತೆ ಮಾಡಿಕೊಳ್ಳಲಾಗುವ ಒಪ್ಪಂದವನ್ನು ವ್ಯಾಪಾರ ಒಪ್ಪಂದ ಎನ್ನಲಾಗುತ್ತದೆ. ಇದರಡಿಯಲ್ಲಿ, ವಿನಿಮಯವಾಗುವ ಸರಕುಗಳ ಪ್ರಮಾಣ, ವಿಧಿಸಲಾಗುವ ತೆರಿಗೆಯ ಮೊತ್ತ ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿದ ನಿಯಮಗಳನ್ನು ರೂಪಿಸಲಾಗಿರುತ್ತದೆ. ಹೀಗಿರುವಾಗ, ಮುಕ್ತ ವ್ಯಾಪಾರವೆಂದರೆ, ತೆರಿಗೆ ರಹಿತ ವ್ಯಾಪಾರವೆಂದಲ್ಲ. ಬದಲಿಗೆ, ವಿನಿಮಯವಾಗುವ ಸರಕು-ಸೇವೆಗಳ ಮೇಲಿನ ಸುಂಕವನ್ನು ಗಣನೀಯ ಪ್ರಮಾಣದಲ್ಲಿ, ಉಭಯ ದೇಶಗಳಿಗೆ ಅನುಕೂಲವಾಗುವಂತೆ ಇಳಿಕೆ ಮಾಡುವುದು. ಈ ಮೂಲಕ, ಅಂತಹ ವಸ್ತುಗಳ ಬೆಲೆ ತಗ್ಗಿಸಿ, ಬೇಡಿಕೆ ಹೆಚ್ಚಿಸಿ ವ್ಯಾಪಾರವನ್ನು ಉತ್ತೇಜಿಸಲಾಗುವುದು.==

ಮುಕ್ತ ವ್ಯಾಪಾರದಿಂದ ಲಾಭವೇನು?

ಪಾಲುದಾರ ರಾಷ್ಟ್ರಗಳ ಮಾರುಕಟ್ಟೆಗಳಿಗೆ ಸುಂಕರಹಿತ ಪ್ರವೇಶ ಪಡೆಯುವುದರಿಂದ ರಫ್ತು ಮಾರುಕಟ್ಟೆಗಳ ವೈವಿಧ್ಯೀಕರಣ ಮತ್ತು ವಿಸ್ತರಣೆಯಾಗುತ್ತದೆ. ಜತೆಗೆ, ಈಗಾಗಲೇ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿರುವ ರಾಷ್ಟ್ರಗಳಿಗೆ ಸಮನಾಗಿ ಸ್ಪರ್ಧಿಸಲು ಸಾಧ್ಯವಾಗುತ್ತದೆ. ದೇಶವೊಂದರ ಜತೆಗಿನ ವ್ಯಾಪಾರವು ಶೂನ್ಯಸುಂಕದಿಂದ ಲಾಭದಾಯಕವಾಗುವುದರಿಂದ, ರಾಷ್ಟ್ರಗಳು ಅಂತಹ ದೇಶಗಳ ಜತೆಗಿನ ವ್ಯಾಪಾರದಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತವೆ. ಇದರಿಂದ ವಿದೇಶಿಹೂಡಿಕೆ ಹೆಚ್ಚುವುದಲ್ಲದೆ, ಆ ದೇಶಗಳಲ್ಲಿರುವ ಕಚ್ಚಾವಸ್ತುಗಳನ್ನು ಬಳಸಿಕೊಳ್ಳಲೂ ಅವಕಾಶ ಸಿಗುತ್ತದೆ.

=ಚನ್ನಪಟ್ಟಣದ ಗೊಂಬೆಗಳಿಗೂ  ಬ್ರಿಟನ್‌ಗೆ ಉಚಿತ ಪ್ರಯಾಣ! 

ಕರ್ನಾಟಕದ ರಾಮನಗರ ಜಿಲ್ಲೆಯಲ್ಲಿರುವ ಚನ್ನಪಟ್ಟಣದ ಸುಪ್ರಸಿದ್ಧ ಮರದ ಗೊಂಬೆಗಳೂ ಇನ್ನು ಬ್ರಿಟನ್‌ಗೆ ಯಾವುದೇ ಸುಂಕವಿಲ್ಲದೆ ರಫ್ತಾಗಲಿವೆ. ಇದರಿಂದ ಅವುಗಳು ಅಲ್ಲಿ ಅಗ್ಗದ ದರದಲ್ಲಿ ಲಭ್ಯವಾಗುವುದಲ್ಲದೆ, ಇದರಿಂದ ಬೇಡಿಕೆ ಹೆಚ್ಚುತ್ತದೆ. ಇವು ಜಿಐ ಟ್ಯಾಗ್‌(ಭೌಗೋಳಿಕ ಗುರುತು) ಹೊಂದಿರುವ ಕಾರಣ, ಜನಪ್ರಿಯತೆಯೂ ವೃದ್ಧಿಸುತ್ತದೆ.

 ಯಾವ ಬ್ರಿಟನ್‌ ವಸ್ತುಗಳ ಅಗ್ಗ

ದೊಡ್ಡ ಕಾರುಗಳು, ವಿಸ್ಕಿ, ಬಿಸ್ಕೆಟ್‌, ಚಾಕಲೆಟ್‌, ಸೌಂದರ್ಯ ಸಾಮಗ್ರಿ, ವೈದ್ಯಕೀಯ ಸಾಮಗ್ರಿ, ಏರೋಸ್ಪೇಸ್ ಬಿಡಿಭಾಗ, ಎಲೆಕ್ಟ್ರಿಕ್‌ ವಾಹನಗಳು, ಸ್ಮಾರ್ಟ್‌ಫೋನ್‌, ಆಪ್ಟಿಕಲ್ ಫೈಬರ್ ಕೇಬಲ್‌, ಇನ್ವರ್ಟರ್‌

ಭಾರತದ ಯಾವ ವಸ್ತು ರಫ್ತು

ಜವಳಿ, ಆಭರಣ, ಪಾದರಕ್ಷೆ, ಸಮುದ್ರ ಆಹಾರ, ಕ್ರೀಡಾ ಉತ್ಪನ್ನ, ಗೊಂಬೆಗಳು, ಆಟೋಮೊಬೈಲ್‌, ಎಂಜಿನಿಯರಿಂಗ್‌ ಉತ್ಪನ್ನ, ಕೃಷಿ ಉತ್ಪನ್ನ, ತರಕಾರಿ, ಹಣ್ಣು, ಸಂಬಾರ ಪದಾರ್ಥ, ಜನೆರಿಕ್‌ ಔಷಧ, ವೈದ್ಯಕೀಯ ಉಪಕರಣ, ಹಣಕಾಸು ಸೇವಾ ಸಂಸ್ಥೆಗಳು, ಪೀಠೋಪಕರಣಗಳು, ಬನಾರಸಿ ಸೀರೆ, ಚಂದೇರಿ ವಸ್ತ್ರ, ಕೊಲ್ಹಾಪುರಿ ಚಪ್ಪಲಿ, ಸಸ್ಯಜನ್ಯ ಎಣ್ಣೆ, ರಾಸಾಯನಿಕ, ಪ್ರಾಣಿ ಉತ್ಪನ್ನಗಳು, ಗೋವಾದ ಫೆನಿ, ನಾಶಿಕ್‌ನ ಪ್ರಸಿದ್ಧ ವೈನ್, ಕೇರಳದ ಕಳ್ಳಿ

Read more Articles on