ಸಾರಾಂಶ
ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಜೊತೆ ಮಾತುಕತೆ ನಡೆಸಲಿರುವ ಪ್ರಧಾನಿ, ಹೂಡಿಕೆ, ವ್ಯಾಪಾರ, ರಕ್ಷಣೆ, ಶಿಕ್ಷಣ, ಸಂಶೋಧನೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲಿದ್ದಾರೆ. ಇದೇ ವೇಳೆ ಭಾರತ ಮತ್ತು ಬ್ರಿಟನ್ ನಡುವಿನ ಮುಕ್ತ ವ್ಯಾಪಾಟ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ.
ನವದೆಹಲಿ: 4 ದಿನ ಬ್ರಿಟನ್ ಹಾಗೂ ಮಾಲ್ಡೀವ್ಸ್ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಬುಧವಾರ ಲಂಡನ್‌ಗೆ ಬಂದಿಳಿದಿದ್ದಾರೆ. ಈ ವೇಳೆ ಅವರಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು.
ಗುರುವಾರ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಜೊತೆ ಮಾತುಕತೆ ನಡೆಸಲಿರುವ ಪ್ರಧಾನಿ, ಹೂಡಿಕೆ, ವ್ಯಾಪಾರ, ರಕ್ಷಣೆ, ಶಿಕ್ಷಣ, ಸಂಶೋಧನೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲಿದ್ದಾರೆ. ಇದೇ ವೇಳೆ ಭಾರತ ಮತ್ತು ಬ್ರಿಟನ್ ನಡುವಿನ ಮುಕ್ತ ವ್ಯಾಪಾಟ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಆ ಬಳಿಕ ಬ್ರಿಟನ್ ದೊರೆ ಚಾರ್ಲ್ಸ್-3 ಅವರನ್ನು ಮೋದಿ ಭೇಟಿಯಾಗಲಿದ್ದಾರೆ.
ಮುಕ್ತ ವ್ಯಾಪಾರ ಒಪ್ಪಂದ
ಗುರುವಾರ ಪ್ರಧಾನಿ ಮೋದಿ ಹಾಗೂ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಈ ಒಪ್ಪಂದವು 2030ರ ವೇಳೆಗೆ ಎರಡೂ ದೇಶಗಳ ನಡುವಿನ ವ್ಯಾಪಾರವನ್ನು ದ್ವಿಗುಣಗೊಳಿಸಿ 10 ಲಕ್ಷ ಕೋಟಿ ರು.ಗೆ ತಲುಪುವ ಗುರಿ ಹೊಂದಿದೆ.
ಒಪ್ಪಂದದ ಪ್ರಕಾರ ಎರಡೂ ದೇಶಗಳು ತಾವು ವ್ಯಾಪಾರ ಮಾಡುವ ಗರಿಷ್ಠ ಸರಕುಗಳ ಮೇಲಿನ ಸೀಮಾ ಸುಂಕವನ್ನು ತೆಗೆದುಹಾಕುತ್ತವೆ ಅಥವಾ ಗಮನಾರ್ಹವಾಗಿ ಕಡಿಮೆ ಮಾಡುತ್ತವೆ. ವ್ಯಾಪಾರ ಮತ್ತು ಹೂಡಿಕೆಗಳನ್ನು ಉತ್ತೇಜಿಸುವ ನೀತಿಗಳನ್ನು ಅಳವಡಿಸಿಕೊಳ್ಳುತ್ತವೆ.
ಒಪ್ಪಂದದಿಂದ ಯಾರಿಗೆ ಏನು ಲಾಭ?
ಪ್ರಸ್ತುತ ಒಪ್ಪಂದದ ಅಡಿಯಲ್ಲಿ, ಭಾರತದ ರಫ್ತಿನ ಶೇ.99ರಷ್ಟು ವಸ್ತುಗಳಿಗೆ ಬ್ರಿಟನ್ ಮಾರುಕಟ್ಟೆಯಲ್ಲಿ ಶೂನ್ಯ ಸುಂಕ ಅನ್ವಯವಾಗಲಿದೆ. ಬ್ರಿಟಿಷ್ ವಿಸ್ಕಿ ಮತ್ತು ಜಿನ್ ಮೇಲಿನ ಆಮದು ಸುಂಕವನ್ನು ಶೇ.150ರಿಂದ 75ಕ್ಕೆ ಹಾಗೂ ಆಟೋಮೊಬೈಲ್‌ಗಳ ಮೇಲಿನ ಸುಂಕಗಳನ್ನು ಶೇ.100ರಿಂದ 10ಕ್ಕೆ ಇಳಿಸಲಾಗುತ್ತದೆ.
ಭಾರತದ ಜವಳಿ, ಸಮುದ್ರ ಉತ್ಪನ್ನಗಳು, ಚರ್ಮ, ಪಾದರಕ್ಷೆಗಳು, ಆಟಿಕೆಗಳು, ರತ್ನಗಳು ಮತ್ತು ಆಭರಣಗಳು, ಎಂಜಿನಿಯರಿಂಗ್ ಸಾಮಗ್ರಿಗಳು, ವಾಹನಗಳ ಬಿಡಿಭಾಗಗಳು ಮತ್ತು ಎಂಜಿನ್‌ಗಳು, ಸಾವಯವ ರಾಸಾಯನಿಕಗಳ ರಫ್ತಿಗೆ ಹೆಚ್ಚಿನ ಅನುಕೂಲ ಸಿಗಲಿದೆ. ಒಪ್ಪಂದವು ಶುದ್ಧ ಇಂಧನ ಮತ್ತು ಡಿಜಿಟಲ್ ವಲಯದಲ್ಲಿ ಬ್ರಿಟಿಷ್ ಹೂಡಿಕೆದಾರರನ್ನು ಆಕರ್ಷಿಸಲಿದೆ. ಬ್ರಿಟನ್‌ಗೆ ಸ್ಕಾಚ್ ವಿಸ್ಕಿ, ಹಣಕಾಸು ಸೇವೆಗಳು, ಶಿಕ್ಷಣ, ತಂತ್ರಜ್ಞಾನ ಕ್ಷೇತ್ರದಲ್ಲಿ ಒಪ್ಪಂದದಿಂದ ಪ್ರಮುಖ ಪ್ರಯೋಜನ ಸಿಗಲಿದೆ.
ಅಲ್ಲದೆ, ಒಪ್ಪಂದವು ಗುತ್ತಿಗೆ ಸೇವಾ ಪೂರೈಕೆದಾರರು, ವ್ಯಾಪಾರ ಸಂದರ್ಶಕರು, ಹೂಡಿಕೆದಾರರು, ಆಂತರಿಕ ಕಾರ್ಪೊರೇಟ್ ವರ್ಗಾವಣೆದಾರರು, ಯೋಗ ಶಿಕ್ಷಕರು, ಸಂಗೀತಗಾರರು, ಅಡುಗೆಯವರಂತಹ ಸ್ವತಂತ್ರ ವೃತ್ತಿಪರರಿಗೆ ಉಭಯ ದೇಶಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಲಿದೆ.