ಭಾರೀ ಪರಿವರ್ತನೆ 11 ವರ್ಷಗಳ ಸಾಧನೆ: ಪ್ರಧಾನಿ ಮೋದಿ ಬಣ್ಣನೆ

| Published : Jun 11 2025, 03:15 AM IST

ಸಾರಾಂಶ

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದು 11 ವರ್ಷವಾಗಿರುವ ಮತ್ತು ತಾವು 3ನೇ ಬಾರಿ ಪ್ರಧಾನಿಯಾಗಿ 1 ವರ್ಷ ಕಳೆದಿರುವ ಹೊತ್ತಿನಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸರ್ಕಾರದ ಹಲವು ಸಾಧನೆಗಳನ್ನು ಪಟ್ಟಿ ಮಾಡಿದ್ದಾರೆ. ‘ಕಳೆದ 11 ವರ್ಷಗಳಲ್ಲಿ ದೇಶದ ವಿವಿಧ ಕ್ಷೇತ್ರಗಳಲ್ಲಿ ತ್ವರಿತ ಪರಿವರ್ತನೆಗಳಾಗಿವೆ’ ಎಂದು ಹೇಳಿದ್ದಾರೆ.

==ತಮ್ಮ ಸರ್ಕಾರಕ್ಕೆ 1 ವರ್ಷ ಸಂದ ಹಿನ್ನೆಲೆ ಪ್ರಧಾನಿ ಬಣ್ಣನೆ

ದೇಶದ ಆರ್ಥಿಕತೆ ವೇಗದ ಬೆಳವಣಿಗೆ, ಡಿಜಿಟಲ್‌ ಕ್ರಾಂತಿ

==

ಮೋದಿ ಹೇಳಿದ್ದೇನು?

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದೇಶ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕೆಯಾಗಿದೆ

140 ಕೋಟಿ ಭಾರತೀಯರ ಕೃಪೆಯಿಂದಾಗಿಯೇ ದೇಶವು ವಿವಿಧ ಕ್ಷೇತ್ರಗಳಲ್ಲಿ ತ್ವರಿತ ಬೆಳವಣಿಗೆ ಕಂಡಿದೆ

ಕೇಂದ್ರ ಸಚಿವರಲ್ಲಿ ಶೇ.60ರಷ್ಟು ಜನ ಎಸ್ಸಿ, ಎಸ್ಟಿ, ಒಬಿಸಿಗಳು. ಇದು ಈ ಗುಂಪಿಗೆ ಸಿಕ್ಕಿದ ದೊಡ್ಡ ಪ್ರಾತಿನಿಧ್ಯ

ಜಾಗತಿಕ ಮಟ್ಟದಲ್ಲಿ ಡಿಜಿಟಲ್‌ ನಾವೀನ್ಯತೆ, ಹವಾಮಾನದ ವಿಷಯದಲ್ಲಿ ಪ್ರಮುಖ ದನಿಯಾಗಿ ಹೊರಹೊಮ್ಮಿದೆ

===ಪಿಟಿಐ ನವದೆಹಲಿ

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದು 11 ವರ್ಷವಾಗಿರುವ ಮತ್ತು ತಾವು 3ನೇ ಬಾರಿ ಪ್ರಧಾನಿಯಾಗಿ 1 ವರ್ಷ ಕಳೆದಿರುವ ಹೊತ್ತಿನಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸರ್ಕಾರದ ಹಲವು ಸಾಧನೆಗಳನ್ನು ಪಟ್ಟಿ ಮಾಡಿದ್ದಾರೆ. ‘ಕಳೆದ 11 ವರ್ಷಗಳಲ್ಲಿ ದೇಶದ ವಿವಿಧ ಕ್ಷೇತ್ರಗಳಲ್ಲಿ ತ್ವರಿತ ಪರಿವರ್ತನೆಗಳಾಗಿವೆ’ ಎಂದು ಹೇಳಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಮೋದಿ, ‘ನಮ್ಮ ಸರ್ಕಾರ ಅಧಿಕಾರಕ್ಕೇರಿದಾಗಿಂದ ದೇಶವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಜತೆಗೆ, ಜಾಗತಿಕ ಮಟ್ಟದಲ್ಲಿ ಡಿಜಿಟಲ್‌ ನಾವೀನ್ಯತೆ ಮತ್ತು ಹವಾಮಾನದ ವಿಷಯದಲ್ಲಿ ಪ್ರಮುಖ ದನಿಯಾಗಿದೆ’ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು 2024ರ ಜೂ.9ರಂದು 3ನೇ ಬಾರಿ ಪ್ರಧಾನಿಯಾಗಿ ಪ್ರಮಾಣ ಸ್ವೀಕರಿಸಿದ್ದರು.

ಆ್ಯಪ್‌ನಲ್ಲಿ ವಿವರಣೆ:

ಇದರೊಂದಿಗೆ, ತಮ್ಮ ಸರ್ಕಾರದ 11 ವರ್ಷದ ಸಾಧನೆಗಳನ್ನೊಳಗೊಂಡ ಕಡತವುಳ್ಳ ನಮೋ ಆ್ಯಪ್‌ನ ಲಿಂಕ್‌ ಅನ್ನೂ ಹಂಚಿಕೊಂಡಿದ್ದಾರೆ.

ಆ ಕಡತದಲ್ಲಿ, ‘ಮೋದಿ ಅವರು ವಿಕಾಸವಾದ (ಅಭಿವೃದ್ಧಿಯ ರಾಜಕಾರಣ)ವನ್ನು ಮುಖ್ಯವಾಹಿನಿಗೆ ತಂದಿದ್ದಾರೆ. ಇದು ಈಗ ರಾಜಕೀಯ ಚರ್ಚೆಯ ಕೇಂದ್ರಬಿಂದುವಾಗಿದೆ. ಪ್ರಸ್ತುತ ಕೇಂದ್ರ ಸಚಿವರಲ್ಲಿ ಶೇ.60ರಷ್ಟು ಜನ ಪರಿಶಿಷ್ಟ ಜಾತಿ, ಪಂಗಡ ಮತ್ತು ಒಬಿಸಿ ವರ್ಗಗಳಿಗೆ ಸೇರಿದವರು. ಇದು, ಕೇಂದ್ರ ಸಚಿವ ಸಂಪುಟದಲ್ಲಿ ಈ ಗುಂಪುಗಳಿಗೆ ಸೇರಿರುವ ಅತ್ಯಧಿಕ ಪ್ರಾತಿನಿಧ್ಯವಾಗಿದೆ. ಈ ಮೂಲಕ, ಕಾಂಗ್ರೆಸ್ ನಂತಹ ವಿಪಕ್ಷಗಳ ಟೀಕೆಯ ನಡುವೆಯೂ ಸಾಮಾಜಿಕ ನ್ಯಾಯ ಒದಗಿಸುವ ಗುರಿ ಹೊಂದಿರುವ ಸಂದೇಶ ಸಾರಿದ್ದೇವೆ’ ಎನ್ನಲಾಗಿದೆ.

‘140 ಕೋಟಿ ಭಾರತೀಯರ ಕೃಪೆಯಿಂದ ದೇಶವ ವಿವಿಧ ಕ್ಷೇತ್ರಗಳಲ್ಲಿ ತ್ವರಿತ ಬೆಳವಣಿಗೆ ಕಂಡಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್ (ಎಲ್ಲರೊಂದಿಗೆ ಸ್ವರ ವಿಕಾಸ, ವಿಶ್ವಾಸ ಮತ್ತು ಪ್ರಯತ್ನ) ತತ್ವ ಅನುಸರಿಸಿದ ಎನ್‌ಡಿಎ ಸರ್ಕಾರ ವೇಗ, ಪ್ರಮಾಣ ಮತ್ತು ಸೂಕ್ಷ್ಮತೆಯೊಂದಿಗೆ ಅಭೂತಪೂರ್ವ ಬದಲಾವಣೆಗಳನ್ನು ತಂದಿದೆ. ಆರ್ಥಿಕ ಬೆಳವಣಿಗೆಯಿಂದ ಸಾಮಾಜಿಕ ಉನ್ನತಿಯವರೆಗೆ, ಜನ-ಕೇಂದ್ರಿತ ಮತ್ತು ಸರ್ವತೋಮುಖ ಪ್ರಗತಿಯತ್ತ ಗಮನ ಹರಿಸಲಾಗಿದೆ. ಹೊಸ ಸಂಕಲ್ಪದೊಂದಿಗೆ ವಿಕಸಿತ ಭಾರತದತ್ತ ಸಾಗುತ್ತೇವೆ’ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಲಾಗಿದೆ.