ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜನ್ಮಸಿದ್ಧ ಪೌರತ್ವ ರದ್ದತಿ ನಿರ್ಧಾರಕ್ಕೆ ಭಾರತೀಯರ ವಿರೋಧ

| Published : Jan 23 2025, 12:47 AM IST / Updated: Jan 23 2025, 04:47 AM IST

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜನ್ಮಸಿದ್ಧ ಪೌರತ್ವ ರದ್ದತಿ ನಿರ್ಧಾರಕ್ಕೆ ಭಾರತೀಯರ ವಿರೋಧ
Share this Article
  • FB
  • TW
  • Linkdin
  • Email

ಸಾರಾಂಶ

ಅಮೆರಿಕದಲ್ಲಿ ಜನಿಸಿದ ಮಕ್ಕಳಿಗೆ ಸ್ವಾಭಾವಿಕವಾಗಿ ಅಲ್ಲಿನ ನಾಗರಿಕತ್ವ ಒದಗಿಸುತ್ತಿದ್ದ ಜನ್ಮಸಿದ್ಧ ಪೌರತ್ವ ಹಕ್ಕನ್ನು ರದ್ದುಪಡಿಸಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಹಿ ಮಾಡಿದ ನಿರ್ಧಾರಕ್ಕೆ ಭಾರತೀಯ ಮೂಲದ ಅಮೆರಿಕನ್ನರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

ವಾಷಿಂಗ್ಟನ್‌: ಅಮೆರಿಕದಲ್ಲಿ ಜನಿಸಿದ ಮಕ್ಕಳಿಗೆ ಸ್ವಾಭಾವಿಕವಾಗಿ ಅಲ್ಲಿನ ನಾಗರಿಕತ್ವ ಒದಗಿಸುತ್ತಿದ್ದ ಜನ್ಮಸಿದ್ಧ ಪೌರತ್ವ ಹಕ್ಕನ್ನು ರದ್ದುಪಡಿಸಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಹಿ ಮಾಡಿದ ನಿರ್ಧಾರಕ್ಕೆ ಭಾರತೀಯ ಮೂಲದ ಅಮೆರಿಕನ್ನರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

ಮೊದಲಿದ್ದ ನಿಯಮದ ಪ್ರಕಾರ ಅಮೆರಿಕದಲ್ಲಿ ಜನಿಸಿದ ಯಾವುದೇ ವಿದೇಶಿಗರ ಹಸುಳೆಗಳು ಅಲ್ಲಿನ ಪೌರತ್ವ ಪಡೆಯುತ್ತಿದ್ದವು. ಇದನ್ನು ಬಳಸಿಕೊಂಡು ಅನೇಕರು ತಾತ್ಕಾಲಿಕ ವೀಸಾ ಪಡೆದು ಅಥವಾ ಅಕ್ರಮವಾಗಿ ಅಮೆರಿಕ್ಕೆ ಹೋಗಿ ಮಕ್ಕಳಿಗೆ ಜನ್ಮ ನೀಡುತ್ತಿದ್ದರು. ಈಗ ಟ್ರಂಪ್‌ ಇದಕ್ಕೆ ಕಡಿವಾಣ ಹಾಕಿದ್ದಾರೆ. ಫೆ.19ರ ಬಳಿಕ ಜನಿಸುವ ಮಕ್ಕಳ ಪೋಷಕರಲ್ಲಿ ಒಬ್ಬರಾದರೂ ಅಮೆರಿಕ ನಾಗರಿಕ ಆಗಿರಬೇಕು. ಇಬ್ಬರೂ ಪೋಷಕರು ಅಮೆರಿಕ ನಾಗರಿಕ ಆಗದೇ ಇದ್ದರೆ, ಜನ್ಮಸಿದ್ಧ ಪೌರತ್ವ ಸಿಗದು ಎಂಬ ನಿಯಮಕ್ಕೆ ಅಧ್ಯಕ್ಷ ಟ್ರಂಪ್‌ ಅಧಿಕಾರಕ್ಕೇರುತ್ತಿದ್ದಂತೆ ಸಹಿ ಮಾಡಿದ್ದಾರೆ.

ಭಾರತ ಸಂಸದರ ವಿರೋಧ:

ಇದನ್ನು ಭಾರತ ಮೂಲದ ಅಮೆರಿಕನ್‌ ಸಂಸದ ರೋ ಖನ್ನಾ ವಿರೋಧಿಸಿ, ‘ಇದು ಕೇವಲ ಅಕ್ರಮ ಅಥವಾ ದಾಖಲೆರಹಿತ ವಲಸಿಗರ ಮೇಲಷ್ಟೇ ಅಲ್ಲ, ವಿದ್ಯಾರ್ಥಿ ವೀಸಾ ಅಥವಾ ಎಚ್‌-1ಬಿ ವೀಸಾ ಪಡೆದು ಅಮೆರಿಕದಲ್ಲಿ ವಾಸವಿರುವವರ ಮೇಲೂ ಪರಿಣಾಮ ಬೀರುತ್ತದೆ’ ಎಂದಿದ್ದಾರೆ.

ಕನ್ನಡಿಗ ಸಂಸದ ಶ್ರೀ ಥಾಣೇದಾರ್‌ ಜನ್ಮಸಿದ್ಧ ಪೌರತ್ವ ಹಕ್ಕು ನಿಯಮವನ್ನು ಉಳಿಸಿಕೊಳ್ಳಲು ಹೋರಾಡುವುದಾಗಿ ಹೇಳಿದ್ದಾರೆ.

ಸಂಸದೆ ಪ್ರಮಿಳಾ ಜಯಪಾಲ್‌ ಮಾತನಾಡಿ, ‘ಹೊಸ ನಿಯಮವು ಅಸಾಂವಿಧಾನಿಕವಾಗಿದ್ದು, ಕೇವಲ ಸಹಿ ಮಾಡುವುದರಿಂದ ಇದರ ಜಾರಿ ಸಾಧ್ಯವಿಲ್ಲ. ಒಂದೊಮ್ಮೆ ಜಾರಿಯಾದಲ್ಲಿ, ದೇಶದ ಸಂವಿಧಾನ ಹಾಗೂ ಕಾನೂನಿನ ಅಪಹಾಸ್ಯ ಮಾಡಿದಂತಾಗುತ್ತದೆ’ ಎಂದರು.

22 ರಾಜ್ಯಗಳಿಂದಲೂ ವಿರೋಧ:

ಅತ್ತ ಹೊಸ ನಿಯಮ ವಿರೋಧಿಸಿ ವಲಸಿಗರ ಹಕ್ಕು ಸಂಘಟನೆ ಕೋರ್ಟ್‌ ಮೆಟ್ಟಿಲೇರಿದೆ. 22 ರಾಜ್ಯಗಳ ಅಟಾರ್ನಿ ಜನರಲ್‌ಗಳು ಅದರ ಜಾರಿಯನ್ನು ತಡೆಯುವಂತೆ ಕೋರಿ 2 ಫೆಡೆರಲ್‌ ಜಿಲ್ಲಾ ಕೋರ್ಟ್‌ಗಳಿಗೆ ಆಗ್ರಹಿಸಿದ್ದಾರೆ.

ಭಾರತೀಯರ ಮೇಲೇನು ಪರಿಣಾಮ?:

ಅಮೆರಿಕದಲ್ಲಿ ಈಗ 54 ಲಕ್ಷ ಭಾರತೀಯರಿದ್ದಾರೆ. ಇವರಲ್ಲಿ ಶೇ.66ರಷ್ಟು ಜನ ವಲಸಿಗರಾಗಿದ್ದಾರೆ. ಶೇ.34 ಜನ ಮಾತ್ರ ಅಮೆರಿಕ ನಾಗರಿಕರಾಗಿದ್ದಾರೆ.

ಈ ವಲಸಿಗ ಶೇ.66 ಜನರು ಭಾರತೀಯ ನಾಗರಿಕರೇ ಆಗಿದ್ದು, ಅಮೆರಿಕದಲ್ಲಿ ಎಚ್‌1ಬಿ ವೀಸಾ ಸೇರಿ ಹಲವು ವೀಸಾ ಆಧರಿಸಿ ಅಮೆರಿಕದಲ್ಲಿದ್ದಾರೆ. ಇವರು ಅಮೆರಿಕ ನಾಗರಿಕರಲ್ಲ.

ಜನ್ಮಸಿದ್ಧ ವೀಸಾ ರದ್ದತಿಯಿಂದ ಈ ಶೇ.66 ಭಾರತೀಯರಲ್ಲಿ ಯಾರಿಗಾದರೂ ಮಕ್ಕಳಾದರೆ ಆ ಮಗುವಿಗೆ ತನ್ನಿಂತಾನೇ ಅಮೆರಿಕ ಪೌರತ್ವ ಸಿಗದು. ಇವರು ತಮ್ಮ ಮಕ್ಕಳಿಗಾಗಿ ಪೌರತ್ವಕ್ಕೆ ಹೊಸದಾಗಿ ಅರ್ಜಿ ಹಾಕಬೇಕಾಗಬಹುದು. ಅರ್ಜಿ ಮಂಜೂರಾಗುವವರೆಗೆ ಮಗುವನ್ನು ಅವರು ಭಾರತದಲ್ಲೇ ಬಿಟ್ಟು ಬರಬೇಕಾದ ಸ್ಥಿತಿ ಉಂಟಾಗಬಹುದು. ಇಲ್ಲವೇ ಪ್ರವಾಸಿ ವೀಸಾಗೆ ಅರ್ಜಿ ಹಾಕಬೇಕು.

ಎಚ್‌-1ಬಿ ವೀಸಾ ಸೌಲಭ್ಯದಿಂದ ಅಮೆರಿಕಕ್ಕೆ ಹೋಗುವವರಲ್ಲಿ ಭಾರತೀಯರೇ ಅಧಿಕವಿದ್ದಾರೆ. ಭಾರತೀಯರು ಸೇರಿ 6.5 ಲಕ್ಷ ವಿದೇಶಿಗರು ಎಚ್‌-1ಬಿ ವೀಸಾ ಪಡೆದರೆ, 20 ಸಾವಿರ ಭಾರತೀಯರು ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ಹೋಗುತ್ತಾರೆ.

ಎಚ್‌1ಬಿ ವೀಸಾದಾರ ಪ್ರತಿಭಾವಂತರು ನನಗಿಷ್ಟ: ಟ್ರಂಪ್‌

ಪಿಟಿಐ ನವದೆಹಲಿಭಾರತ ಸೇರಿ ವಲಸಿಗರಿಗೆ ನೀಡಲಾಗುವ ಎಚ್‌1ಬಿ ವೀಸಾ ಬಗ್ಗೆ ಅಮೆರಿಕದಲ್ಲಿ ಪರ-ವಿರೋಧ ಚರ್ಚೆ ನಡೆದಿರುವ ನಡುವೆಯೇ, ‘ಎಚ್‌1ಬಿ ವೀಸಾ ಪಡೆದಿರುವ ಪ್ರತಿಭಾವಂತರು ನನಗೆ ಇಷ್ಟ’ ಎಂದು ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಬುಧವಾರ ಮಾತನಾಡಿದ ಅವರು, ‘ವೀಸಾ ಪರ ಹಾಗೂ ವಿರೋಧ ಚರ್ಚೆಗಳು ನಡೆದಿವೆ. ಎರಡೂ ಕಡೆಯ ಚರ್ಚೆಗಳನ್ನು ನಾನು ಗೌರವಿಸುವೆ. ಆದರೆ ಪ್ರತಿಭಾವಂತ ಎಚ್‌1ಬಿ ವೀಸಾದಾರರು ನನಗೆ ಇಷ್ಟ. ಅರ್ಹರು ನಮ್ಮ ದೇಶಕ್ಕೆ ಬಂದು ನಮ್ಮಲ್ಲಿನ ಜನರಿಗೆ ತರಬೇತಿ ನೀಡುವುದು ಒಳ್ಳೆಯ ಬೆಳವಣಿಗೆ’ ಎಂದರು.