-ಒಮಾನ್‌ ಬಳಿ 2 ಯುಎಇ ಟ್ಯಾಂಕರ್‌ಗಳಿಗೆ ದಾಳಿ

-ಎರಡೂ ಹಡಗಿನಲ್ಲಿದ್ದ 10 ಭಾರತೀಯರಿಗೆ ಗಾಯ

- ಯುದ್ಧದಲ್ಲಿ ಮೃತಪಟ್ಟ ಭಾರತೀಯರ ಸಂಖ್ಯೆ 14ಕ್ಕೆ

-ಕೃತ್ಯಕ್ಕೆ ಯುಎಇ ಹಾಗೂ ಭಾರತ ತೀವ್ರ ಖಂಡನೆ

-ಇರಾನ್ ರಾಯಭಾರಿಯ ಕರೆದು ಭಾರತ ಆಕ್ಷೇಪ


-ತಕ್ಕ ಪ್ರತಿಕ್ರಿಯೆ ನೀಡಲು ಸಿದ್ಧ: ಯುಎಇ ಗುಡುಗುಪಿಟಿಐ ದುಬೈ/ನವದೆಹಲಿ

ಅಮೆರಿಕ ಮತ್ತು ಇರಾನ್‌ ಕದನ ತೀವ್ರ ಸ್ವರೂಪ ಪಡೆದಿರುವ ನಡುವೆಯೇ, ಒಮಾನ್‌ ಬಳಿ ಹೋರ್ಮುಜ್‌ ಜಲಸಂಧಿಯಲ್ಲಿ ಸಂಚರಿಸುತ್ತಿದ್ದ 2 ಯುಎಇ ಟ್ಯಾಂಕರ್‌ಗಳ ಮೇಲೆ ಇರಾನ್‌ ಮಂಗಳವಾರ ದಾಳಿ ನಡೆಸಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸಿಬ್ಬಂದಿ ಸಾವನ್ನಪ್ಪಿದ್ದು, ಉಳಿದ 10 ಮಂದಿ ಗಾಯಗೊಂಡಿದ್ದಾರೆ. ಈ ಬೆನ್ನಲ್ಲೇ ಇರಾನ್‌ ರಾಯಭಾರ ಕಚೇರಿಯ ಉಪಮುಖ್ಯಸ್ಥರನ್ನು ಕರೆದು ಭಾರತ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದೆ. ಒಮಾನ್‌ ಜಲಪ್ರದೇಶದಲ್ಲಿ ಹೋರ್ಮುಜ್‌ ಮೂಲಕ ಹಾದುಹೋಗುತ್ತಿದ್ದ ಎಂಟಿ ಅಲ್ ಬಹಿಯಾ ಮತ್ತು ಎಂಟಿ ಮೊಂಬಾಸಾ ಹಡಗುಗಳ ಮೇಲೆ ಇರಾನ್ ದಾಳಿ ಮಾಡಿದೆ. ಇವುಗಳಲ್ಲಿ 30 ಮಂದಿ ಭಾರತೀಯ ನಾವಿಕರು ಹಾಗೂ ಒಟ್ಟು 46 ಮಂದಿ ಸಿಬ್ಬಂದಿಯಿದ್ದರು. ಅಲ್ ಬಹಿಯಾದಲ್ಲಿನ 12 ಭಾರತೀಯರ ಪೈಕಿ ಒಬ್ಬರು ದುರದೃಷ್ಟವಶಾತ್ ಮೃತಪಟ್ಟಿದ್ದಾರೆ ಮತ್ತು ಇನ್ನೊಬ್ಬರು ಗಾಯಗೊಂಡಿದ್ದಾರೆ. ಮೊಂಬಾಸಾದಲ್ಲಿನ 18 ಭಾರತೀಯರ ಪೈಕಿ 9 ಮಂದಿ ಗಾಯಗೊಂಡಿದ್ದು, ಇವರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. ಈ ಮೂಲಕ, ಯುದ್ಧ ಆರಂಭವಾದಾಗಿನಿಂದ ಪ್ರಾಣ ಕಳೆದುಕೊಂಡ ಭಾರತೀಯರ ಸಂಖ್ಯೆ 14ಕ್ಕೇರಿದೆ.ಭಾರತ ಖಂಡನೆ: ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ‘ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿ ನಡೆಯುವ ಇಂಥ ದಾಳಿ ಮತ್ತು ಹಿಂಸೆಯನ್ನು ಬಲವಾಗಿ ಖಂಡಿಸುತ್ತೇವೆ. ಸಂವಾದ ಮತ್ತು ರಾಜತಾಂತ್ರಿಕತೆ ಮೂಲಕ ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸಬೇಕು’ ಎಂದು ಪುನರುಚ್ಚರಿಸಿದೆ. ಜತೆಗೆ, ದೆಹಲಿಯಲ್ಲಿರುವ ಇರಾನ್ ರಾಯಭಾರ ಕಚೇರಿಯ ಉಪ ಮುಖ್ಯಸ್ಥರನ್ನು ಕರೆದು, ದಾಳಿ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ತಕ್ಕ ಉತ್ತರ ನೀಡಲು ಸಿದ್ಧ: ಯುಎಇದಾಳಿ ಯುಎಇ ಬಗ್ಗೆ ರಕ್ಷಣಾ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, ‘ಒಮಾನಿ ಜಲಪ್ರದೇಶದಲ್ಲಿ ಸಾಗುವಾಗ ನಮ್ಮ ರಾಷ್ಟ್ರೀಯ ಟ್ಯಾಂಕರ್‌ಗಳಾದ ಮೊಂಬಾಸಾ ಮತ್ತು ಅಲ್ ಬಹಿಯಾಗಳ ಮೇಲೆ 2 ಇರಾನಿ ಕ್ರೂಸ್ ಕ್ಷಿಪಣಿಗಳು ದಾಳಿ ಮಾಡಿವೆ. ಈ ದಾಳಿ ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ. ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡುವ ಸಂಪೂರ್ಣ ಹಕ್ಕನ್ನು ಯುಎಇ ಹೊಂದಿದೆ. ಯಾವುದೇ ಬೆದರಿಕೆಗಳನ್ನು ಎದುರಿಸಲು ಅತ್ಯುನ್ನತ ಮಟ್ಟದ ಸನ್ನದ್ಧತೆಯಲ್ಲಿದ್ದೇವೆ’ ಎಂದು ಇರಾನ್‌ಗೆ ಎಚ್ಚರಿಕೆ ನೀಡಿದೆ.

==

ಇರಾನ್‌ ವಿರುದ್ಧ ದಾಳಿಗೆ

ಅಮೆರಿಕ ಮೊದಲ ಬಾರಿ

ಸೀ ಡ್ರೋನ್‌ ಬಳಕೆ

ವಾಷಿಂಗ್ಟನ್‌: ಇರಾನ್‌ನ ವಿರುದ್ಧದ ದಾಳಿಗೆ ತನ್ನ ಬತ್ತಳಿಕೆಯಲ್ಲಿರುವ ಬಲಿಷ್ಠ ಅಸ್ತ್ರಗಳನ್ನೆಲ್ಲಾ ಹೊರತೆಗೆಯುತ್ತಿರುವ ಅಮೆರಿಕ, ಮೊದಲ ಬಾರಿಗೆ ಕೋರ್ಸೇರ್ ಎಂಬ ಹೆಸರಿನ ಸೀ ಡ್ರೋನ್‌ ಬಳಕೆ ಮಾಡಿದೆ. ಇದನ್ನು ಬಳಸಿಕೊಂಡು ಇರಾನ್‌ನ ಬಂದರ್ ಅಬ್ಬಾಸ್ ನೌಕಾ ನೆಲೆಗೆ ಸೇರಿದ ಜಲಾಂತರ್ಗಾಮಿ ನೌಕೆ ಮತ್ತು ಹಡಗು ನಿರ್ವಹಣಾ ಕೇಂದ್ರದ ಮೇಲೆ ದಾಳಿ ನಡೆಸಿರುವುದಾಗಿ ಅಮೆರಿಕದ ಸೆಂಟ್ರಲ್‌ ಕಮಾಂಡ್‌ ಸೋಮವಾರ ತಿಳಿಸಿದೆ.ಏನಿದು ಸೀ ಡ್ರೋನ್‌?: ಸೀ ಡ್ರೋನ್‌ ಎಂಬುದು 1,000 ಪೌಂಡ್‌ಗಳಷ್ಟು ಭಾರವನ್ನು ಹೊತ್ತು ಗಂಟೆಗೆ 35 ನಾಟ್‌ಗಳಿಗಿಂತ ಹೆಚ್ಚಿನ ವೇಗದಲ್ಲಿ ಚಲಿಸಬಲ್ಲ 24 ಅಡಿ ಉದ್ದದ ಸ್ವಯಂಚಾಲಿತ ದೋಣಿಯಾಗಿದೆ. ಇದರಲ್ಲಿ ಚಾಲಕರಿರದ ಕಾರಣ ಡ್ರೋನ್‌ ಎಂದೂ ಪರಿಗಣಿಸಲಾಗುತ್ತದೆ. ಇದನ್ನು ಸರೋನಿಕ್ ಕಂಪನಿ ಉತ್ಪಾದಿಸಿದೆ.

==

ಅಮೆರಿಕ-ಇರಾನ್‌ ನಡುವೆ ನಿಲ್ಲದ ಕಾದಾಟ

-ಇರಾನ್‌ನ ಹಲವು ಸ್ಥಳಗಳಿಗೆ ಅಮೆರಿಕ ಬಾಂಬ್‌-ಬಹ್ರೈನ್‌, ಜೋರ್ಡಾನ್‌ ಮೇಲೆ ಇರಾನ್‌ ಕ್ಷಿಪಣಿ

-ಯುಎಇಗೆ ಸೇರಿದ 2 ಟ್ಯಾಂಕರ್ ಮೇಲೆ ದಾಳಿ-ಡಚ್ ಕಂಪನಿಯ ಹಡಗಿನ ಮೇಲೂ ಗುಂಡೇಟು

-ಇರಾನ್‌ಗೆ ಕೆಟ್ಟದಾಗಿ ಹೊಡೀತಿದ್ದೇವೆ: ಟ್ರಂಪ್‌ಟೆಹ್ರಾನ್‌/ದುಬೈ/ವಾಷಿಂಗ್ಟನ್‌ಅಮೆರಿಕ ಮತ್ತು ಇರಾನ್‌ ನಡುವಿನ ಕದನ ಮಂಗಳವಾರವೂ ಮುಂದುವರಿದಿದ್ದು, ಎರಡೂ ದೇಶಗಳು ಭೀಕರ ದಾಳಿ-ಪ್ರತಿದಾಳಿ ನಡೆಸಿವೆ. ಇರಾನ್‌ನ ಕರಾವಳಿ ರಕ್ಷಣಾ ವ್ಯವಸ್ಥೆ, ಕ್ಷಿಪಣಿ ಮತ್ತು ಡ್ರೋನ್‌ ಸಂಗ್ರಹಾಗಾರಗಳು ಸೇರಿದಂತೆ ಹಲವು ಸ್ಥಳಗಳ ಮೇಲೆ ಅಮೆರಿಕ ದಾಳಿ ಮಾಡಿದರೆ, ಅಮೆರಿಕ ಮಿತ್ರದೇಶಗಳಾದ ಬಹ್ರೈನ್‌, ಜೋರ್ಡಾನ್‌ ಹಾಗೂ 2 ಯುಎಇ ಹಡಗುಗಳ ಮೇಲೆ ದಾಳಿಯ ಮೂಲಕ ಇರಾನ್‌ ಪ್ರತೀಕಾರಕ್ಕೆ ಯತ್ನಿಸಿದೆ. ಈ ನಡುವೆ, ಹೋರ್ಮುಜ್‌ ಜಲಸಂಧಿ ಮೇಲಿನ ನಿಯಂತ್ರಣಕ್ಕಾಗಿ ಉಭಯ ದೇಶಗಳ ಪಟ್ಟು ಮುಂದುವರಿದಿದೆ.

ಅಮೆರಿಕ ಭೀಕರ ದಾಳಿ:

‘ಹೋರ್ಮುಜ್‌ನಲ್ಲಿ ಇರಾನ್‌ ಮೇಲಿನ ದಿಗ್ಬಂಧನವನ್ನು ಅಮೆರಿಕ ಪುನಃ ಸ್ಥಾಪಿಸುತ್ತದೆ’ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗುಡುಗಿದ ಬೆನ್ನಲ್ಲೇ, ಮಂಗಳವಾರ ಬೆಳಿಗ್ಗೆ ಇರಾನ್‌ ಮೇಲೆ ಅಮೆರಿಕ ಭೀಕರ ದಾಳಿ ನಡೆಸಿದೆ. ಕರಾವಳಿ ರಕ್ಷಣಾ ವ್ಯವಸ್ಥೆಗಳು, ಕ್ಷಿಪಣಿ ಮತ್ತು ಡ್ರೋನ್ ನೆಲೆಗಳು ಮತ್ತು ಕಡಲ ಸಾಮರ್ಥ್ಯಗಳನ್ನು ಗುರಿಯಾಗಿಸಿಕೊಂಡು ಇರಾನ್‌ನ ಹಲವು ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಅಮೆರಿಕ ಸೇನೆಯ ಕೇಂದ್ರ ಕಮಾಂಡ್ (ಸೆಂಟ್‌ಕಾಂ) ಹೇಳಿದೆ. ಈ ದಾಳಿಯನ್ನು ಇರಾನ್ ಕೂಡ ಒಪ್ಪಿಕೊಂಡಿದೆ.

‘ಇರಾನ್ ವಿರುದ್ಧ ಅಮೆರಿಕ ಸೇನೆಯು ಮತ್ತೊಂದು ಸುತ್ತಿನ ದಾಳಿಗಳನ್ನು ಆರಂಭಿಸಿದೆ’ ಎಂದು ಸೆಂಟ್‌ಕಾಂ ಘೋಷಿಸಿದೆ. ‘ಈ ದಾಳಿಗಳು ಇರಾನಿನ ಪಡೆಗಳ ಮೇಲೆ ಭಾರೀ ವೆಚ್ಚವನ್ನು ಹೇರುತ್ತವೆ ಮತ್ತು ಹೋರ್ಮುಜ್‌ನಲ್ಲಿ ಮುಗ್ಧ ನಾಗರಿಕರು ಮತ್ತು ವಾಣಿಜ್ಯ ಹಡಗುಗಳ ಮೇಲೆ ದಾಳಿ ಮಾಡುವ ಅವರ ಸಾಮರ್ಥ್ಯವನ್ನು ಕುಗ್ಗಿಸುತ್ತವೆ’ ಎಂದು ಅಮೆರಿಕ ಸೇನೆ ಹೇಳಿಕೆ ನೀಡಿದೆ.

ಕೆಟ್ಟದಾಗಿ ಹೊಡೆಯುತ್ತಿದ್ದೇವೆ: ಟ್ರಂಪ್‌

ಇರಾನ್‌ ಮೇಲೆ ಅಮೆರಿಕ ಮತ್ತೊಂದು ಸುತ್ತಿನ ದಾಳಿ ಆರಂಭಿಸಿದ ಬೆನ್ನಲ್ಲೇ ಹೇಳಿಕೆ ನೀಡಿದ ಅಧ್ಯಕ್ಷ ಟ್ರಂಪ್‌, ‘ನಾವು ಇರಾನ್‌ಗೆ ತುಂಬಾ ಕೆಟ್ಟದಾಗಿ ಹೊಡೆಯುತ್ತಿದ್ದೇವೆ ಮತ್ತು ಅದು ಮುಂದುವರಿಯುತ್ತದೆ. ನಾವು ಅವರ ಎಲ್ಲಾ ಆಕ್ರಮಣಕಾರಿ ಸಾಮರ್ಥ್ಯವನ್ನು ನಾಶಪಡಿಸುತ್ತಿದ್ದೇವೆ. ಜಲಸಂಧಿ ಮೇಲೆ ನಿಯಂತ್ರಣ ಸಾಧಿಸುತ್ತಿದ್ದೇವೆ. ಪುನಃ ದಿಗ್ಬಂಧನ ಹೇರುತ್ತಿದ್ದೇವೆ’ ಎಂದಿದ್ದಾರೆ.

ಇದೇ ವೇಳೆ, ‘ನಾವು ಪ್ರಪಂಚದ ಅತ್ಯಂತ ಶ್ರೀಮಂತ ಭಾಗವನ್ನು (ಹೋರ್ಮುಜ್‌) ರಕ್ಷಿಸುತ್ತಿದ್ದೇವೆ. ಅದಕ್ಕಾಗಿ ಹಣ ಖರ್ಚು ಮಾಡುತ್ತಿದ್ದೇವೆ. ಹಾಗಾಗಿ ರಕ್ಷಣೆಗೆ ಮಾಡಿದ ವೆಚ್ಚವನ್ನು ನಮಗೆ ಮರುಪಾವತಿಸಬೇಕಾಗುತ್ತದೆ’ ಎಂದು ಹೋರ್ಮುಜ್‌ ಶುಲ್ಕ ಪಾವತಿ ವಿಚಾರವನ್ನು ಪುನರುಚ್ಚರಿಸಿದ್ದಾರೆ.

ಕೊಲ್ಲಿ ಮೇಲೆ ಇರಾನ್‌ ಪ್ರತಿದಾಳಿ:

ಅಮೆರಿಕ ದಾಳಿಗೆ ಪ್ರತಿಯಾಗಿ ಇರಾನ್, ಬಹ್ರೈನ್, ಜೋರ್ಡಾನ್ ಮತ್ತು ಹೋರ್ಮುಜ್‌ ಮೂಲಕ ಪ್ರಯಾಣಿಸಿದ ಯುಎಇಯ 2 ಟ್ಯಾಂಕರ್‌ಗಳನ್ನು ಗುರಿಯಾಗಿಸಿ ದಾಳಿ ಮಾಡಿದೆ. ಯುಎಇ ಹಡಗುಗಳ ಮೇಲಿನ ದಾಳಿಯಲ್ಲಿ, ಓರ್ವ ಭಾರತೀಯ ಸಿಬ್ಬಂದಿ ಮೃತಪಟ್ಟಿದ್ದು, 10 ಜನ ಗಾಯಗೊಂಡಿದ್ದಾರೆ.

ಈ ಬೆಳವಣಿಗೆ ಬಳಿಕ ಡಚ್ ಹಡಗು ಸಂಸ್ಥೆ ಸ್ಟೋಲ್ಟ್ ಟ್ಯಾಂಕರ್ಸ್, ಒಮಾನ್ ಬಳಿ ತನ್ನದೊಂದು ಹಡಗಿನ ಮೇಲೂ ದಾಳಿಯಾಗಿದೆ ಎಂದು ಹೇಳಿಕೊಂಡಿದೆ. ದಾಳಿಯಿಂದ ಹಡಗಿನ ಎಂಜಿನ್ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ, ಆದರೆ ಎಲ್ಲಾ ನಾವಿಕರು ಸುರಕ್ಷಿತರಾಗಿದ್ದಾರೆ ಮತ್ತು ಅವರನ್ನು ರಕ್ಷಿಸಲಾಗಿದೆ ಎಂದು ಕಂಪನಿ ಹೇಳಿದೆ. ಕೊಲ್ಲಿಯ ಅಮೆರಿಕ ಮಿತ್ರರಾಷ್ಟ್ರವಾದ ಬಹ್ರೈನ್‌ ಕೂಡ ಇರಾನ್‌ನ ದಾಳಿಗೆ ಒಳಗಾಗಿದ್ದು, ಕ್ಷಿಪಣಿ ಎಚ್ಚರಿಕೆ ಸೈರನ್‌ಗಳನ್ನು 3 ಬಾರಿ ಮೊಳಗಿಸಿದೆ. ಇತ್ತ ಇರಾನ್‌ನಿಂದ ಬಂದ 4 ಕ್ಷಿಪಣಿಗಳನ್ನು ತಡೆಗಟ್ಟಿದ್ದೇವೆ ಎಂದು ಜೋರ್ಡಾನ್ ಸೇನೆ ಹೇಳಿಕೊಂಡಿದೆ.

==