ಚೀನಿ ಸೇನೆಗೆ ಗಡಿಯಲ್ಲಿ ಭಾರತದ ದನಗಾಹಿಗಳ ಕಲ್ಲೇಟು!

| Published : Feb 01 2024, 02:04 AM IST / Updated: Feb 01 2024, 09:16 AM IST

ಚೀನಿ ಸೇನೆಗೆ ಗಡಿಯಲ್ಲಿ ಭಾರತದ ದನಗಾಹಿಗಳ ಕಲ್ಲೇಟು!
Share this Article
  • FB
  • TW
  • Linkdin
  • Email

ಸಾರಾಂಶ

ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿಯ ಸೈನಿಕರು ಭಾರತದ ಗಡಿಯೊಳಗೆ ನುಗ್ಗಿ ಬೆದರಿಕೆ ಹಾಕಿದ್ದಕ್ಕೆ ಸಿಡಿದೆದ್ದ ಭಾರತದ ದನಗಾಹಿಗಳು, ಅವರೊಂದಿಗೆ ಮಾತಿನ ಚಕಮಕಿ ನಡೆಸಿ ಕಲ್ಲೆಸೆದಿದ್ದಾರೆ.

ಲಡಾಖ್‌: ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿಯ ಸೈನಿಕರು ಭಾರತದ ಗಡಿಯೊಳಗೆ ನುಗ್ಗಿ ಬೆದರಿಕೆ ಹಾಕಿದ್ದಕ್ಕೆ ಸಿಡಿದೆದ್ದ ಭಾರತದ ದನಗಾಹಿಗಳು, ಅವರೊಂದಿಗೆ ಮಾತಿನ ಚಕಮಕಿ ನಡೆಸಿ ಕಲ್ಲೆಸೆದಿದ್ದಾರೆ. 

ಹೀಗಾಗಿ ಚೀನಿ ಯೋಧರು ಹಿಂದಕ್ಕೆ ಓಡಿಹೋದ ಘಟನೆ ಲೇಹ್‌ನ ಚುಲ್‌ಸುಲ್‌ ಪ್ರದೇಶದಲ್ಲಿ ನಡೆದಿದೆ. ಈ ಘಟನೆಯ ದೃಶ್ಯಾವಳಿಯನ್ನುಲೇಹ್‌ನ ನಗರಪಾಲಿಕೆ ಸದಸ್ಯ ಸೇರಿಂಗ್‌ ನಮ್ಗ್ಯಾಲ್‌ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. 

ಈ ತಿಂಗಳ ಆರಂಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ ಆದರೆ ಚೀನಿ ಸೇನೆ ಈ ವಾದವನ್ನು ಅಲ್ಲಗಳೆದಿದ್ದು, ತನ್ನ ಪ್ರದೇಶದಲ್ಲಿ ಭಾರತೀಯ ದನಗಾಹಿಗಳು ದನ ಮೇಯಿಸುತ್ತಿದ್ದುದಾಗಿ ಆರೋಪಿಸಿದೆ.

ಏನಾಯಿತು?
6.5 ನಿಮಿಷಗಳಿರುವ ದೃಶ್ಯಾವಳಿಯಲ್ಲಿ ಲೇಹ್‌ನ ಚುಲ್‌ಸುಲ್‌ ಪ್ರದೇಶದದ ತಕ್ಲುಂಗ್‌ ಚೊರೊಕ್‌ ಕಣಿವೆಯಲ್ಲಿ 608 ಚೀನಿ ಸೈನಿಕರು ವಾಹನದಲ್ಲಿ ಸೈರನ್‌ ಮಾಡಿಕೊಂಡು ಭಾರತದ ಭೂಭಾಗಕ್ಕೆ ಬಂದು ಅಲ್ಲಿದ್ದ ದನಗಾಹಿಗಳನ್ನು ಬೆದರಿಸಲು ಪ್ರಯತ್ನಿಸಿದ್ದಾರೆ. ಇಲ್ಲಿ ದನ ಮೇಯಿಸಬೇಡಿ ಎಂದು ಎಚ್ಚರಿಸಿದ್ದಾರೆ.

ಆಗ ಅಲ್ಲಿದ್ದ ದನ ಮೇಯಿಸುವವರು ದಿಟ್ಟತನದಿಂದ ಚೀನಿ ಸೈನಿಕರನ್ನು ಎದುರಿಸಿ ಅವರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ‘ಇದು ಭಾರತದ ಭೂಭಾಗ. ಇಲ್ಲೇಕೆ ಬಂದಿದ್ದೀರಿ? ಇಲ್ಲಿಂದ ಹೊರಡಿ’ ಎಂದಿದ್ದಾರೆ. 

ಆದರೂ ಕೇಳದಿದ್ದಾಗ ಸೈನಿಕರ ಮೇಲೆ ಕಲ್ಲೆಸೆದಿದ್ದಾರೆ. ಆಗ ಚೀನಿ ಸೈನಿಕರು ಅಲ್ಲಿಂದ ಕಾಲ್ಕಿತ್ತ ದೃಶ್ಯಾವಳಿ ವಿಡಿಯೋದಲ್ಲಿ ಸೆರೆಯಾಗಿದೆ. 

ಈ ಕುರಿತು ಮಾತನಾಡಿದ ನಮ್ಗ್ಯಾಲ್‌, ‘ನಾವು ನಮ್ಮ ಜನರಿಗೆ ಗಡಿ ಹತ್ತಿರ ಹೋಗಬೇಡಿ ಎಂದು ಬಹಳ ಸಾರಿ ಎಚ್ಚರಿಸಿದ್ದೇವೆ. ಆದರೂ ಅಲ್ಲಿ ಸಮೃದ್ಧ ಹುಲ್ಲುಗಾವಲಿರುವ ಕಾರಣ ವದನ ಮೇಯಿಸಲು ಅಲ್ಲಿಗೆ ಹೋಗುತ್ತಾರೆ. 

ಇದೇ ರೀತಿ ಜ.2 ರಂದು ಅಲ್ಲಿ ಚೀನಿ ಸೈನಿಕರು ಏಕಾಏಕಿ ನಮ್ಮ ಪ್ರದೇಶದೊಳಗೆ ನುಗ್ಗಿದಾಗ ನಮ್ಮ ಜನರು ಅವರಿಗೆ ತಕ್ಕ ಶಾಸ್ತಿ ಮಾಡಿದ್ದಾರೆ ಇಲ್ಲದಿದ್ದರೆ ಚೀನಿಯರು ಅಲ್ಲಿಗೆ ಬಂದು ಕೆಲವು ಟೆಂಟ್‌ಗಳನ್ನು ಹಾಕಿಕೊಂಡು ತಮ್ಮದೇ ಜಾಗ ಎಂದು ಹಕ್ಕು ಸಾಧಿಸಿಬಿಡುತ್ತಾರೆ’ ಎಂದರು.

‘ಘಟನೆಯನ್ನು ಅವಲೋಕಿಸಲು ಜ.11ರಂದು ಲೇಹ್‌ನ ಮ್ಯಾಜಿಸ್ಟ್ರೇಟ್‌ಗಳೂ ಕೂಡ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಈ ಕುರಿತು ನಾವು ಕೇಂದ್ರ ಗೃಹ ಸಚಿವಾಲಯಕ್ಕೂ ಮಾಹಿತಿ ನೀಡಿದ್ದು, ಅವರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಜ.11ರಂದು ಸುದ್ದಿಗೋಷ್ಠಿ ನಡೆಸಿದ್ದ ಮುಖ್ಯ ಸೇನಾ ಜನರಲ್‌ ಮನೋಜ್‌ ಪಾಂಡೆ, ಗಲ್ವಾನ್‌ ಕಣಿವೆ ಪ್ರದೇಶದ ಚೀನಾ ಗಡಿಯಲ್ಲಿ ಪರಿಸ್ಥಿತಿ ‘ಸ್ಥಿರವಾಗಿದ್ದರೂ ಸೂಕ್ಷ್ಮವಾಗಿದೆ’ ಎಂಬುದಾಗಿ ತಿಳಿಸಿದ್ದರು ಎನ್ನಲಾಗುತ್ತಿದೆ.