ಸಾರಾಂಶ
ನವದೆಹಲಿ: 4 ತಿಂಗಳ ಮಗುವಿನ ಕೊಲೆ ಪ್ರಕರಣದಲ್ಲಿ ದೋಷಿ ಎನ್ನಿಸಿಕೊಂಡಿದ್ದ ಉತ್ತರಪ್ರದೇಶದ ಶೆಹಜಾದಿ ಎಂಬ ಮಹಿಳೆಯನ್ನು ಅರಬ್ ರಾಷ್ಟ್ರ ಅಬುಧಾಬಿಯಲ್ಲಿ ಫೆ.15ರಂದು ಮರಣದಂಡನೆ ಶಿಕ್ಷೆಗೆ ಒಳಪಡಿಸಲಾಗಿದೆ.
ತಮ್ಮ ಮಗಳ ಯೋಗಕ್ಷೇಮದ ಮಾಹಿತಿ ಕೋರಿ ಆಕೆಯ ಪೋಷಕರು ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಕೇಂದ್ರ ಸರ್ಕಾರವು, ಶೆಹಜಾದಿಯನ್ನು ಗಲ್ಲು ಶಿಕ್ಷೆಗೆ ಒಳಪಡಿಸಿರುವ ಆಘಾತಕಾರಿ ಮಾಹಿತಿ ನೀಡಿದೆ. ಇದೇ ವೇಳೆ. ಮಾ.5ರಂದು ಅಬುಧಾಬಿಯಲ್ಲಿ ಆಕೆಯ ಅಂತ್ಯಕ್ರಿಯೆ ನಡೆಯಲಿದ್ದು, ಕುಟುಂಬಸ್ಥರು ಭಾಗವಹಿಸಬಹುದು’ ಎಂದು ವಿದೇಶಾಂಗ ಸಚಿವಾಲಯವು ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.
ಏನಿದು ಪ್ರಕರಣ?:
ಉತ್ತರ ಪ್ರದೇಶದ ಶೆಹಜಾದಿ (33) ಎಂಬ ಮಹಿಳೆಗೆ ಉಜೈರ್ ಎಂಬಾತ ವಂಚಿಸಿ ದುಬೈ ದಂಪತಿಗೆ ಮಾರಾಟ ಮಾಡಿದ್ದ. ದಂಪತಿ ಆಕೆಯನ್ನು ತಮ್ಮ ಮಗುವಿನ ಆರೈಕೆಗೆ ನೇಮಿಸಿದ್ದರು. ಆದರೆ ಕೆಲದಿನಗಳಲ್ಲಿ ಮಗು ಮೃತಪಟ್ಟಿತ್ತು. ಶೆಹಜಾದಿಯೇ ಮಗುವಿನ ಕೊಲೆ ಮಾಡಿದ್ದಾಳೆ ಎಂದು ಆರೋಪಿಸಿ ದಂಪತಿ ದೂರು ನೀಡಿದ್ದರು. ತನಿಖೆ ಬಳಿಕ ಅಬುಧಾಬಿ ನ್ಯಾಯಾಲಯ ಆಕೆಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು.
ಶೆಹಜಾದಿ ರಕ್ಷಣೆ ಕೋರಿ ಆಕೆಯ ಪೋಷಕರು ಕೇಂದ್ರಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆ ಪ್ರಕರಣದ ಮರುಪರಿಶೀಲನೆ ನಡೆಸುವಂತೆ ಭಾರತೀಯ ರಾಯಭಾರಿ ಕಚೇರಿ ಅಬುಧಾಬಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಆದರೆ ಫೆ.15ರಂದೇ ಆಕೆಯನ್ನು ಗಲ್ಲಿಗೇರಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ.