ಪಹಲ್ಗಾಂ ದಾಳಿಯ ಬಳಿಕ ತಡೆಹಿಡಿಯಲಾಗಿರುವ ಸಿಂದೂ ಉಪನದಿಗಳ ನೀರು ಸಿಗದೆ ಪಾಕಿಸ್ತಾನದ ನದಿಗಳು ಒಣಗತೊಡಗಿವೆ. ಹೀಗಿರುವಾಗ, ಅಲ್ಲಿನ ಡ್ಯಾಂಗಳಿಂದ ಬಿಡುಗಡೆಯಾಗುವ ನೀರಿನ ಪ್ರಮಾಣದಲ್ಲಿ, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.15ರಷ್ಟು ಕುಸಿತವಾಗಿದೆ ಎಂದು ತಿಳಿದುಬಂದಿದೆ.

ಡೆಡ್‌ ಲೆವೆಲ್‌ ಸಮೀಪಿಸುತ್ತಿದೆ ನೀರು ಬಿಡುಗಡೆ ಪ್ರಮಾಣ

ಮುಂಗಾರು ಇನ್ನೂ ದೂರ: ಕೃಷಿ ಕ್ಷೇತ್ರಕ್ಕೆ ಭಾರೀ ಪಟ್ಟು

ನವದೆಹಲಿ: ಭಾರತದೊಂದಿಗಿನ ಸಂಘರ್ಷ ಪಾಕಿಸ್ತಾನವನ್ನು ನಿರಂತರ ಬಾಯಾರುವಂತೆ ಮಾಡುತ್ತಿದೆ. ಪಹಲ್ಗಾಂ ದಾಳಿಯ ಬಳಿಕ ತಡೆಹಿಡಿಯಲಾಗಿರುವ ಸಿಂದೂ ಉಪನದಿಗಳ ನೀರು ಸಿಗದೆ ಪಾಕಿಸ್ತಾನದ ನದಿಗಳು ಒಣಗತೊಡಗಿವೆ. ಹೀಗಿರುವಾಗ, ಅಲ್ಲಿನ ಡ್ಯಾಂಗಳಿಂದ ಬಿಡುಗಡೆಯಾಗುವ ನೀರಿನ ಪ್ರಮಾಣದಲ್ಲಿ, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.15ರಷ್ಟು ಕುಸಿತವಾಗಿದೆ ಎಂದು ತಿಳಿದುಬಂದಿದೆ.

ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿ ಜೂ.5 ರಂದು 1.24 ಲಕ್ಷ ಕ್ಯೂಸೆಕ್‌ ನೀರು ಬಿಡುಗಡೆ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1.44 ಲಕ್ಷ ಕ್ಯೂಸೆಕ್‌ನಷ್ಟು ನೀರು ಬಿಡಲಾಗಿತ್ತು. ಖೈಬರ್ ಪಖ್ತುಂಖ್ವಾ ಪ್ರದೇಶದಲ್ಲಿರುವ ತರ್ಬೆಲಾ ಅಣೆಕಟ್ಟಿನಲ್ಲಿ ನೀರಿನ ಮಟ್ಟ 1,465 ಮೀ.ಗೆ ಇಳಿದಿದೆ. ಇದರ ಡೆಡ್‌ ಲೆವೆಲ್‌ (ಕನಿಷ್ಠ ಬಿಡುಗಡೆ ಮಾಡಲು ಸಾಧ್ಯವಾಗುವ ನೀರು) 1,402 ಮೀ. ಇದೆ. 638 ಮೀ ಡೆಡ್‌ಲೆವೆಲ್‌ ಇರುವ ಚಶ್ಮಾ ಡ್ಯಾಂನಿಂದ 644 ಮೀ. ನೀರು ಬಿಡುಗಡೆಯಾಗಿದೆ. ಸಿಂದೂ ನದಿಯ ಮೇಲೆ ಅವಲಂಬಿತವಾಗಿರುವ ಅನ್ಯ ಜಲಾಶಯಗಳ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ.

ಕೃಷಿಗೆ ಸಮಸ್ಯೆ:

ಇದು ಖಾರಿಫ್‌ ಸಾಗುವಳಿಯ ಕಾಲವಾಗಿದ್ದು, ಹೊಲಗದ್ದೆಗಳಿಗೆ ಸಕಾಲಕ್ಕೆ ನೀರು ಸಿಗದಿದ್ದರೆ ಪಾಕಿಸ್ತಾನದ ಕೃಷಿ ಕ್ಷೇತ್ರಕ್ಕೆ ಅಪಾರ ಹಾನಿಯಾಗುತ್ತದೆ. ಆ ದೇಶಕ್ಕೆ ಮುಂಗಾರು ಪ್ರವೇಶವಾಗುವುದು ಇನ್ನೂ ತಡವಾಗಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುತ್ತದೆ. ಸಾಲದ್ದಕ್ಕೆ, ಜೂ.8ರಿಂದ ಪಾಕಿಸ್ತಾನದಲ್ಲಿ ಉಷ್ಣ ಮಾರುತ ಶುರುವಾಗಲಿದೆ ಎನ್ನಲಾಗಿದೆ.

==

ಚೀನಾ ಶಾಕ್‌: ಭಾರತದ ವಾಹನೋದ್ಯಮ ಮುಚ್ಚುವ ಭೀತಿ

ದುರ್ಲಭ ಅರ್ಥ್‌ ಮ್ಯಾಗ್ನೆಟ್‌ ರಫ್ತಿಗೆ ಚೀನಾ ನಿರ್ಬಂಧ

ಎಲೆಕ್ಟ್ರಾನಿಕ್‌ ಉಪಕರಣ, ವಾಹನ ತಯಾರಿಗೆ ಅಗತ್ಯ

ನವದೆಹಲಿ: ಭಾರತದಲ್ಲಿ ಬೆಳವಣಿಗೆಯಾಗುತ್ತಿರುವ ವಿದ್ಯುತ್‌ ಚಾಲಿತ ವಾಹನ ಹಾಗೂ ಆಟೋಮೊಬೈಲ್‌ ಕ್ಷೇತ್ರಕ್ಕೆ ದೊಡ್ಡ ಹೊಡೆತ ಕೊಡಬಹುದಾದಂತ ಬೆಳವಣಿಗೆಯಾಗಿದೆ. ಕಾರಣ, ಅವುಗಳ ಉತ್ಪಾದನೆಗೆ ಅತ್ಯವಶ್ಯಕವಾದ ಭೂಮಿಯಡಿ ಸಿಗುವ ದುರ್ಲಭ ಅಯಸ್ಕಾಂತ (ರೇರ್‌ ಅರ್ಥ್‌ ಮ್ಯಾಗ್ನೆಟ್‌) ರಫ್ತಿಗೆ ಕತ್ತರಿ ಹಾಕಲು ಚೀನಾ ಮುಂದಾಗಿದೆ.ಈ ಬಗ್ಗೆ ಮಾತನಾಡಿರುವ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ ಫೆಡರೇಶನ್ (ಎಫ್‌ಎಡಿಎ) ಅಧ್ಯಕ್ಷ ಸಿ.ಎಸ್. ವಿಘ್ನೇಶ್ವರ್, ‘ರೇರ್‌ ಅರ್ಥ್‌ ಮ್ಯಾಗ್ನೆಟ್‌ ಪೂರೈಕೆ ನಿಂತುಹೋದರೆ, ದೇಶದ ಇವಿ ಉತ್ಪಾದನೆಯೇ ಜೂನ್‌ ಅಂತ್ಯದ ವೇಳೆಗೆ ನಿಂತುಹೋಗಬಹುದು. ಹೀಗಾಗದಿರಲು, ಸರ್ಕಾರ ಸಂಬಂಧಿಸಿದವರ ಬಳಿ ಮಾತುಕತೆ ನಡೆಸಬೇಕು’ ಎಂದು ಎಚ್ಚರಿಸಿದ್ದಾರೆ.

ದೇಶದಲ್ಲಿ ಇದು ಮುಂಗಾರಿನ ಸಮಯವಾದ್ದರಿಂದ, ಒಳ್ಳೆ ಬೆಳೆಯಾಗಿ ವಾಹನಗಳಿಗೆ ಬೇಡಿಕೆ ಹೆಚ್ಚುತ್ತದೆ. ಆದರೆ ಅದಕ್ಕೆ ತಕ್ಕಂತೆ ಪೂರೈಕೆ ಮಾಡಲು ಚೀನಾದ ಈ ನಡೆಯಿಂದ ತೊಡಕುಂಟಾಗುತ್ತದೆ ಎಂದೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ದುರ್ಲಭ ಅಯಸ್ಕಾಂತ ಲಭ್ಯವಿದ್ದರೂ ಅದರ ಪ್ರಮಾಣ ಕಡಿಮೆಯಿದೆ. 2024ರಲ್ಲಿ 2,900 ಮೆಟ್ರಿಕ್‌ ಟನ್‌ ಉತ್ಪಾದಿಸಲಾಗಿತ್ತು. ಅತ್ತ ಇಷ್ಟೇ ಪ್ರಮಾಣದ (2,850 ಮೆಟ್ರಿಕ್‌ ಟನ್‌) ಅಯಸ್ಕಾಂತವನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗಿತ್ತು.ರೇರ್‌ ಅರ್ಥ್‌ ಮ್ಯಾಗ್ನೆಟ್‌ ಮಹತ್ವ:

ಇದನ್ನು ಪ್ರಮುಖವಾಗಿ ಮೊಬೈಲ್‌, ಇಯರ್‌ಫೋನ್‌ಗಳಂತಹ ಎಲೆಕ್ಟ್ರಾನಿಕ್‌ ಉಪಕರಣಗಳು, ವಾಹನಗಳ ಮೋಟರ್‌ ಇತ್ಯಾದಿಗಳನ್ನು ಉತ್ಪಾದಿಸಲು ಬಳಸಲಾಗುತ್ತದೆ. ಹೆಸರೇ ಹೇಳುವಂತೆ, ಇವು ದುರ್ಲಭವಾಗಿದ್ದು, ಎಲ್ಲಾ ದೇಶಗಳಲ್ಲಿ ಲಭ್ಯವಿಲ್ಲ. ಇದ್ದರೂ ಅದನ್ನು ಭೂಮಿಯಿಂದ ಹೊರತೆಗೆವ ತಂತ್ರಜ್ಞಾನ ಎಲ್ಲರ ಬಳಿ ಲಭ್ಯವಿಲ್ಲ. ಹೀಗಿರುವಾಗ, ವಿಶ್ವದಲ್ಲಿ ಲಭ್ಯವಿರುವ ಶೇ.90ರಷ್ಟು ದುರ್ಲಭ ಅಯಸ್ಕಾಂತ ಹೊಂದಿರುವ ಚೀನಾ ಅದರ ರಫ್ತನ್ನು ನಿಲ್ಲಿಸಿಬಿಟ್ಟರೆ, ಇದರಿಂದ ಭಾರತ ಮಾತ್ರವಲ್ಲದೆ, ಜಾಗತಿಕ ಮಟ್ಟದಲ್ಲೂ ಇವಿ ಉತ್ಪಾದನೆಯ ಮೇಲೆ ವ್ಯತಿರಿಕ್ತ ಪರಿಣಾಮವಾಗಲಿದೆ.