ಸಾರಾಂಶ
ನವದೆಹಲಿ: ಐಟಿ ಕ್ಷೇತ್ರದ ದೈತ್ಯ ಕಂಪನಿ ಇನ್ಫೋಸಿಸ್ ತನ್ನ ಮೈಸೂರು ಕ್ಯಾಂಪಸ್‌ನಲ್ಲಿ ತರಬೇತಿ ನಂತರವೂ ಮೂರು ಪ್ರಯತ್ನಗಳಲ್ಲಿ ಆಂತರಿಕ ಮೌಲ್ಯಮಾಪನ ಪರೀಕ್ಷೆಯಲ್ಲಿ ವಿಫಲರಾಗಿದ್ದಕ್ಕೆ ಹೊಸದಾಗಿ ನೇಮಕಗೊಂಡ 300 ಉದ್ಯೋಗಿಗಳನ್ನು ತೆಗೆದು ಹಾಕಿದೆ.
ಈ ಬಗ್ಗೆ ಇನ್ಫೋಸಿಸ್ ಪ್ರತಿಕ್ರಿಯಿಸಿದ್ದು, ‘ನಾವು ಕಠಿಣ ನೇಮಕಾತಿ ಪ್ರಕ್ರಿಯೆಯನ್ನು ಹೊಂದಿದ್ದೇವೆ. ಹೊಸದಾಗಿ ನೇಮಕಗೊಂಡವರು ನಮ್ಮ ಮೈಸೂರು ಕ್ಯಾಂಪಸ್‌ನಲ್ಲಿ ತರಬೇತಿಯನ್ನು ಪಡೆದ ಬಳಿಕವೂ ಮೂರು ಅವಕಾಶ ನೀಡಿದರೂ ಆಂತರಿಕ ಮೌಲ್ಯ ಮಾಪನವನ್ನು ಪೂರ್ಣಗೊಳಿಸಲು ವಿಫಲರಾಗಿದ್ದಾರೆ. ಹೀಗಾಗಿ ಅವರು ಸಂಸ್ಥೆಯೊಂದಿಗೆ ಮುಂದುವರೆಯಲು ಸಾಧ್ಯವಿಲ್ಲ. ಈ ಷರತ್ತನ್ನು ಅವರ ಒಪ್ಪಂದದಲ್ಲಿಯೂ ಉಲ್ಲೇಖಿಸಲಾಗಿದೆ’ ಎಂದಿದೆ.
ಇನ್ನು ಇನ್ಫೋಸಿಸ್ ಸಂಸ್ಥೆಯ ಈ ದಿಢೀರ್ ನಿರ್ಧಾರಕ್ಕೆ ಐಟಿ ಉದ್ಯೋಗಿಗಳ ಸಂಘ ಎನ್‌ಐಟಿಇಎಸ್ ಆಕ್ರೋಶ ವ್ಯಕ್ತ ಪಡಿಸಿದ್ದು, ಹೊಸ ಉದ್ಯೋಗಳು ಇದರಿಂದ ಹೆಚ್ಚು ಬಾಧಿತರಾಗುತ್ತಿದ್ದಾರೆ. ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಿ ಇನ್ಫೋಸಿಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಕ್ಕೆ ಅಧಿಕೃತ ದೂರು ನೀಡುವುದಾಗಿ ಹೇಳಿದ್ದಾರೆ.