ಉದ್ಯೋಗಿಗಳ ಸೆಳೆಯಲು ಅನೈತಿಕ ತಂತ್ರ: ಕಾಗ್ನಿಜೆಂಟ್‌ ವಿರುದ್ಧ ಇನ್ಫೋಸಿಸ್‌ ಕಿಡಿ

| Published : Dec 28 2023, 01:45 AM IST

ಉದ್ಯೋಗಿಗಳ ಸೆಳೆಯಲು ಅನೈತಿಕ ತಂತ್ರ: ಕಾಗ್ನಿಜೆಂಟ್‌ ವಿರುದ್ಧ ಇನ್ಫೋಸಿಸ್‌ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ತಮ್ಮ ಸಂಸ್ಥೆಯ ನುರಿತ ಉದ್ಯೋಗಿಗಳನ್ನು ಅನೈತಿಕ ಮಾರ್ಗದ ಮೂಲಕ ಕಾಗ್ನಿಜೆಂಟ್‌ ಸಂಸ್ಥೆಯು ಸೆಳೆಯುತ್ತಿರುವ ಕುರಿತು ಪತ್ರ ಬರೆದು ಇನ್ಫೋಸಿಸ್‌ ಆಕ್ರೋಶ ವ್ಯಕ್ತಪಡಿಸಿದೆ.

ನವದೆಹಲಿ: ಎದುರಾಳಿ ಕಂಪನಿಗಳಲ್ಲಿ ಹಿರಿಯ ಅಧಿಕಾರಿಗಳ ಸೆಳೆಯುವ ಐಟಿ ವಲಯದ ಕಂಪನಿಗಳ ತಂತ್ರ ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಕಾಗ್ನಿಜೆಂಟ್‌ ಕಂಪನಿ ತನ್ನ ಹಿರಿಯ ಅಧಿಕಾರಿಗಳನ್ನು ಅನೈತಿಕ ಮಾರ್ಗದಲ್ಲಿ ಸೆಳೆಯುತ್ತಿದೆ ಎಂದು ಐಟಿ ದೈತ್ಯ ಇನ್ಫೋಸಿಸ್‌ ಆರೋಪಿಸಿದೆ. ಅಲ್ಲದೆ ಈ ಕುರಿತು ಅದು ಕಾಗ್ನಿಜೆಂಟ್‌ಗೆ ಪತ್ರ ಬರೆದು ತನ್ನ ಆಕ್ಷೇಪವನ್ನೂ ಸಲ್ಲಿಸಿದೆ. ಇತ್ತೀಚೆಗೆ ವಿಪ್ರೋ ಕೂಡಾ ಕಾಗ್ನಿಜೆಂಟ್‌ ವಿರುದ್ಧ ಇದೇ ರೀತಿಯ ಆರೋಪ ಮಾಡಿತ್ತು.

ಏನಿದು ವಿವಾದ?:

ಈ ಹಿಂದೆ ಇನ್ಫೋಸಿಸ್‌ ಮತ್ತು ವಿಪ್ರೋದಲ್ಲಿ ಹಿರಿಯ ಅಧಿಕಾರಿಯಾಗಿದ್ದ ರಾಜೀವ್‌ ಕುಮಾರ್‌ ಇದೀಗ ಕಾಗ್ನಿಜೆಂಟ್‌ನ ಸಿಇಒ. ಕಳೆದ ಕೆಲ ತಿಂಗಳಿನಿಂದ 20 ಕಾರ್ಯನಿರ್ವಾಹಕ ಉಪಾಧ್ಯಕ್ಷರು, 4 ಹಿರಿಯ ಉಪಾಧ್ಯಕ್ಷರು ಸೇರಿದಂತೆ ಹಲವರು ಕಾಗ್ನಿಜೆಂಟ್‌ ಸೇರಿದ್ದಾರೆ. ಇವರ ಪೈಕಿ ಬಹುತೇಕರು ಇನ್ಫೋಸಿಸ್‌ ಮತ್ತು ವಿಪ್ರೋದಲ್ಲಿದ್ದವರು. ಈ ಎರಡೂ ಕಂಪನಿಗಳು ಎದುರಾಳಿಗಳಿಂದ ಸಾಕಷ್ಟು ಸ್ಪರ್ಧೆ ಎದುರಿಸುತ್ತಿರುವ ನಡುವೆಯೇ ಹಿರಿಯ ಅಧಿಕಾರಿಗಳನ್ನು ಕಾಗ್ನಿಜೆಂಟ್‌ ಸೆಳೆಯುತ್ತಿರುವುದು ಎರಡೂ ಕಂಪನಿಗಳನ್ನು ಸಿಟ್ಟಿಗೆಬ್ಬಿಸಿದೆ.

ಈ ಕಾರಣಕ್ಕಾಗಿಯೇ ಇಬ್ಬರು ಅಧಿಕಾರಿಗಳ ವಿರುದ್ಧ ಇತ್ತೀಚೆಗೆ ವಿಪ್ರೋ ಪ್ರಕರಣ ದಾಖಲಿಸಿದೆ. ಅದರ ಬೆನ್ನಲ್ಲೇ ಇದೀಗ ಇನ್ಫೋಸಿಸ್‌ ಕೂಡಾ ಕಾಗ್ನಿಜೆಂಟ್‌ಗೆ ಎಚ್ಚರಿಕೆ ಸ್ವರೂಪದ ಪತ್ರ ರವಾನಿಸಿದೆ ಎಂದು ಮೂಲಗಳು ತಿಳಿಸಿವೆ.