ನವದೆಹಲಿ: ಡಿಸೆಂಬರ್‌ ಆರಂಭದಿಂದ ದೇಶಾದ್ಯಂತ ಭಾರೀ ಸಮಸ್ಯೆಗೆ ಕಾರಣವಾಗಿರುವ ಇಂಡಿಗೋ ಸಂಸ್ಥೆಯ ವಿಮಾನ ರದ್ದತಿ, ವಾಸ್ತವವಾಗಿ ನ.21ರಿಂದಲೇ ಆರಂಭವಾಗಿತ್ತು. ಅಂದಿನಿಂದ ಇಂದಿನವರೆಗೆ ಒಟ್ಟು 9.55 ಲಕ್ಷ ಟಿಕೆಟ್‌ಗಳನ್ನು ರದ್ದುಪಡಿಸಲಾಗಿದೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ನ.21ರಿಂದಲೇ ಸಮಸ್ಯೆ ಆರಂಭ । ಡಿ.1ರ ಬಳಿಕ ಸಮಸ್ಯೆ ಗಂಭೀರ

ಸೋಮವಾರವೂ 500 ವಿಮಾನ ರದ್ದು । 4500 ಲಗೇಜ್‌ ವಾಪಸ್‌

827 ಕೋಟಿ ಹಣ ಮರುಪಾವತಿ । ಸಂಸತ್ತಲ್ಲೂ ಪ್ರತಿಧ್ವನಿಸಿದ ಬಿಕ್ಕಟ್ಟು

ನವದೆಹಲಿ: ಡಿಸೆಂಬರ್‌ ಆರಂಭದಿಂದ ದೇಶಾದ್ಯಂತ ಭಾರೀ ಸಮಸ್ಯೆಗೆ ಕಾರಣವಾಗಿರುವ ಇಂಡಿಗೋ ಸಂಸ್ಥೆಯ ವಿಮಾನ ರದ್ದತಿ, ವಾಸ್ತವವಾಗಿ ನ.21ರಿಂದಲೇ ಆರಂಭವಾಗಿತ್ತು. ಅಂದಿನಿಂದ ಇಂದಿನವರೆಗೆ ಒಟ್ಟು 9.55 ಲಕ್ಷ ಟಿಕೆಟ್‌ಗಳನ್ನು ರದ್ದುಪಡಿಸಲಾಗಿದೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಇಂಡಿಗೋ ಬಿಕ್ಕಟ್ಟಿನ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ ಸೋಮವಾರ ವಿಸ್ತೃತ ಮಾಹಿತಿ ನೀಡಿದ್ದು, ‘ನ.21ರಿಂದ ಇದುವರೆಗೆ 955591 ಜನರ ಟಿಕೆಟ್‌ಗಳನ್ನು ರದ್ದು ಮಾಡಲಾಗಿದೆ. ರದ್ದಾದ ಟಿಕೆಟ್‌ ಸಂಬಂಧ ಸಂಸ್ಥೆ 827 ಕೋಟಿ ರು. ಹಣವನ್ನು ಗ್ರಾಹಕರಿಗೆ ಮರಳಿಸಿದೆ. ಜೊತೆಗೆ ವಿವಿಧ ನಿಲ್ದಾಣಗಳಲ್ಲಿ ಬಾಕಿ ಉಳಿದಿದ್ದ 9000 ಬ್ಯಾಗ್‌ಗಳ ಪೈಕಿ 4500 ಬ್ಯಾಗ್‌ಗಳನ್ನು ಗ್ರಾಹಕರಿಗೆ ತಲುಪಿಸಲಾಗಿದೆ. ಉಳಿದ ಬ್ಯಾಗುಗಳನ್ನು ಮುಂದಿನ 36 ಗಂಟೆಯಲ್ಲಿ ತಲುಪಿಸಲಿದೆ’ ಎಂದು ಹೇಳಿದೆ.

7ನೇ ದಿನವೂ ವ್ಯತ್ಯಯ:

ಈ ನಡುವೆ ಸೋಮವಾರ ಕೂಡಾ ಇಂಡಿಗೋ ಸಂಸ್ಥೆ 500 ವಿಮಾನಗಳ ಸಂಚಾರ ಸ್ಥಗಿತಗೊಳಿಸಿದೆ. 138 ಸ್ಥಳಗಳ ಪೈಕಿ 137 ಜಾಗಗಳಿಗೆ 1802 ವಿಮಾನಗಳು ಓಡಾಟ ನಡೆಸಿದೆ.

ಸದನದಲ್ಲೂ ಪ್ರತಿಧ್ವನಿ:

ಇಂಡಿಗೋ ಬಿಕ್ಕಟ್ಟು ಸದ್ಯ ನಡೆಯುತ್ತಿರುವ ಸಂಸತ್‌ ಅಧಿವೇಶನದಲ್ಲೂ ಪ್ರತಿ ಧ್ವನಿಸಿದೆ. ಕಾಂಗ್ರೆಸ್‌ ನಾಯಕ ಪ್ರಮೋದ್‌ ತಿವಾರಿ ರಾಜ್ಯಸಭೆಯಲ್ಲಿ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಸಚಿವರು‘ ನಾವು ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸುತ್ತಿದ್ದೇವೆ. ಇಂಡಿಗೋ ಇದನ್ನು ನಿಭಾಯಿಸಬೇ ಕಾಗಿತ್ತು, ಸಿಬ್ಬಂದಿ ಮೂಲಕ ನಿತ್ಯದ ಸೇವೆ ನಡೆಸಬೇಕಿತ್ತು. ಯಾರೇ ಲೋಪವೆಸಗಿದರೂ ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎಂದಿದ್ದಾರೆ.

ತುರ್ತು ವಿಚಾರಣೆ ಇಲ್ಲ:

ಈ ನಡುವೆ ಇಂಡಿಗೋ ಬಿಕ್ಕಟ್ಟಿನ ಬಗ್ಗೆ ತುರ್ತು ವಿಚಾರಣೆ ನಡೆಸಬೇಕೆಂದು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ತಳ್ಳಿಹಾಕಿದೆ. ವಜಾಗೊಳಿಸಿದೆ. ‘ಇದು ಗಂಭೀರ ಪ್ರಕರಣ, ಲಕ್ಷಾಂತರ ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ. ಕೇಂದ್ರ ಸಕಾಲಿಕ ಕ್ರಮ ಕೈಗೊಂಡಿದೆ. ಹಾಗಾಗಿ ತುರ್ತು ವಿಚಾರಣೆ ಸಾಧ್ಯತೆ ತಳ್ಳಿಹಾಕಿದೆ. ಆದರೆ ಇದೇ ರೀತಿಯ ಅರ್ಜಿಯೊಂದನ್ನು ಡಿ.10ಕ್ಕೆ ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್‌ ಸಮ್ಮತಿಸಿದೆ.