ಸಾರಾಂಶ
ಮತಾಂತರವಾಗದೆ ನಡೆಯುವ ಅಂತರ್‌ಧರ್ಮೀಯ ಮದುವೆಗಳು ಅಕ್ರಮ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಜತೆಗೆ, ಅಪ್ರಾಪ್ತರು ಅಥವಾ ಮತಾಂತರವಾಗದ ಅಂತರ್ ಧರ್ಮೀಯ ಜೋಡಿಗೆ ಮದುವೆ ಪ್ರಮಾಣ ಪತ್ರ ನೀಡುವ ಆರ್ಯ ಸಮಾಜ ಸಂಸ್ಥೆ ವಿರುದ್ಧ ತನಿಖೆಗೂ ಆದೇಶಿಸಿದೆ.
ಲಖನೌ: ಮತಾಂತರವಾಗದೆ ನಡೆಯುವ ಅಂತರ್‌ಧರ್ಮೀಯ ಮದುವೆಗಳು ಅಕ್ರಮ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಜತೆಗೆ, ಅಪ್ರಾಪ್ತರು ಅಥವಾ ಮತಾಂತರವಾಗದ ಅಂತರ್ ಧರ್ಮೀಯ ಜೋಡಿಗೆ ಮದುವೆ ಪ್ರಮಾಣ ಪತ್ರ ನೀಡುವ ಆರ್ಯ ಸಮಾಜ ಸಂಸ್ಥೆ ವಿರುದ್ಧ ತನಿಖೆಗೂ ಆದೇಶಿಸಿದೆ.
ಅಪ್ರಾಪ್ತೆಯ ಅಪಹರಿಸಿ ಆರ್ಯ ಸಮಾಜದ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡ ಪ್ರಕರಣದ ವಿಚಾರಣೆ ವೇಳೆ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಆರೋಪಿ ಸೋನು ಅಲಿಯಾಸ್ ಸಹನೂರ್ ಅವರು ತನ್ನ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದು ಮಾಡುವಂತೆ ಕೋರಿದ್ದರು. ಸೋನು ವಿರುದ್ಧ ಇನ್ನೊಂದು ಧರ್ಮದ ಅಪ್ರಾಪ್ತೆಯನ್ನು ಆರ್ಯ ಸಮಾಜದಲ್ಲಿ ಮದುವೆಯಾಗಿರುವ ಆರೋಪ ಇದೆ. ಸದ್ಯ ಆಕೆಗೆ 18 ವರ್ಷ ತುಂಬಿದ್ದು ಆರೋಪಿ ಜತೆಗೆ ಸಂಸಾರ ಮಾಡುತ್ತಿದ್ದಾಳೆ.
ಆದರೆ, ಆರೋಪಿಯ ಅರ್ಜಿಯನ್ನು ತಿರಸ್ಕರಿಸಿದ ನ್ಯಾ.ಪ್ರಶಾಂತ್ ಕುಮಾರ್ ಅವರು, ‘ಆರ್ಯ ಸಮಾಜದಲ್ಲಿ ಅಪ್ರಾಪ್ತೆಯ ವಿವಾಹ ಕಾನೂನಿನ ಸ್ಪಷ್ಟ ಉಲ್ಲಂಘನೆ. ಆರ್ಯ ಸಮಾಜದಂಥ ದೇವಸ್ಥಾನಗಳು ಯಾವುದೇ ಕಾನೂನು ನಿಯಮ ಪಾಲಿಸದೆ ನಿರ್ದಿಷ್ಟ ಶುಲ್ಕಕ್ಕಾಗಿ ಮನಸೋಇಚ್ಛೆ ಮದುವೆ ಸರ್ಟಿಫಿಕೇಟ್ ನೀಡುತ್ತಿವೆ. ಇಂಥ ಕ್ರಮಗಳು ಕಾನೂನು ವಿರೋಧಿ’ ಎಂದಿದೆ.
ಜತೆಗೆ, ಆರ್ಯ ಸಮಾಜವು ಅಪ್ರಾಪ್ತ ಜೋಡಿಗಳು ಅಥವಾ ಮತಾಂತರ ಆಗದ ಅಂತರ್ ಧರ್ಮೀಯ ದಂಪತಿಗೆ ನೀಡುವ ಮದುವೆ ಪ್ರಮಾಣ ಪತ್ರಗಳ ಕುರಿತು ಡಿಸಿಪಿ ರ್‍ಯಾಂಕ್‌ನ ಅಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸುವಂತೆಯೂ ಉತ್ತರ ಪ್ರದೇಶ ಗೃಹ ಕಾರ್ಯದರ್ಶಿಗೆ ಕೋರ್ಟ್ ಸೂಚನೆ ನೀಡಿದೆ. ಆರೋಪಿ ವಿರುದ್ಧ ಪೋಸ್ಕೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು.