ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನಾಯಕತ್ವ ನಾವು ಒಪ್ಪಲ್ಲ : ಶಾಸಕ ಯತ್ನಾಳ್‌

| Published : Jan 20 2025, 01:33 AM IST / Updated: Jan 20 2025, 04:26 AM IST

BasavanaGowda Patel Yatnal

ಸಾರಾಂಶ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧದ ತಮ್ಮ ವಾಗ್ದಾಳಿಯನ್ನು ಮುಂದುವರೆಸಿರುವ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ‘ವಿಜಯೇಂದ್ರನನ್ನು ನಾವು ಒಪ್ಪಲ್ಲ, ಅವರು ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲೇ ಬೇಕು’ ಎಂದು ಆಗ್ರಹಿಸಿದ್ದಾರೆ.

 ವಿಜಯಪುರ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧದ ತಮ್ಮ ವಾಗ್ದಾಳಿಯನ್ನು ಮುಂದುವರೆಸಿರುವ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ‘ವಿಜಯೇಂದ್ರನನ್ನು ನಾವು ಒಪ್ಪಲ್ಲ, ಅವರು ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲೇ ಬೇಕು’ ಎಂದು ಆಗ್ರಹಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಯತ್ನಾಳ್‌, ಮಾಜಿ ಸಚಿವ ರಮೇಶ ಜಾರಕಿಹೊಳಿ ಮಾತನಾಡಿದ್ದು ಸತ್ಯ, ನಾನು ಸದಾಕಾಲ ಅವರ ಪರವಾಗಿದ್ದೇನೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಲಾಯಕ್ ಇಲ್ಲ. ವಿಜಯೇಂದ್ರ ಅವರ ಕಾರಣದಿಂದಾಗಿಯೇ ಸುನೀಲ್‌ ಕುಮಾರ್‌ ಅವರು ಕಾರ್ಯದರ್ಶಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕಾಗಿ ಬಂದಿದೆ. ವಿಜಯೇಂದ್ರ ಅವರ ನಾಯಕತ್ವವನ್ನು ನಾವು ಒಪ್ಪಲ್ಲ, ವಿಜಯೇಂದ್ರ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ, ಯಡಿಯೂರಪ್ಪ ಅವರ ವಿರುದ್ಧವೂ ವಾಗ್ದಾಳಿ ನಡೆಸಿದ ಯತ್ನಾಳ ಅವರು, ಯಡಿಯೂರಪ್ಪ ಕೂಡ ಎಷ್ಟೋ ಜನರಿಗೆ ಮೋಸ ಮಾಡಿದ್ದಾರೆ. ಬಿ.ಬಿ.ಶಿವಪ್ಪ, ಮಲ್ಲಿಕಾರ್ಜುನಯ್ಯ ಸೇರಿದಂತೆ ಅನೇಕರಿಗೆ ಮೋಸ ಮಾಡಿದ್ದಾರೆ, ಅನ್ಯಾಯ ಮಾಡಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಅನೇಕರ ರಾಜಕೀಯ ಜೀವನ ಅಂತ್ಯಗೊಳಿಸಿದ್ದಾರೆ. ಈಗಲಾದರೂ ಯಡಿಯೂರಪ್ಪ ಅವರು ಮೊಮ್ಮಕ್ಕಳ ಜೊತೆ ಆಟ ಆಡುತ್ತಾ ಕುಳಿತುಕೊಳ್ಳಲಿ ಎಂದು ಸಲಹೆ ನೀಡಿದರು.

ವಿಜಯೇಂದ್ರ ಮಾಡಿದ ತಪ್ಪಿನಿಂದಲೇ ಯಡ್ಡಿಯೂರಪ್ಪ ಅವರು ಜೈಲಿಗೆ ಹೋಗಬೇಕಾಯಿತು. ಪುತ್ರ ವ್ಯಾಮೋಹದಿಂದಲೇ ಯಡಿಯೂರಪ್ಪ ಅವರು ಹಾಳಾಗಿದ್ದು, ಮಗನ ಮೇಲಿನ ವ್ಯಾಮೋಹವನ್ನು ಯಡಿಯೂರಪ್ಪ ಕಡಿಮೆ ಮಾಡಲಿ ಎಂದು ವಾಗ್ದಾಳಿ ನಡೆಸಿದರು.

ಯತ್ನಾಳ್‌ಗೆ ಒಳ್ಳೇದಾಗ್ಲಿ: ಕೈಮುಗಿದ ವಿಜಯೇಂದ್ರ

 ಮಾನ್ವಿ : ‘ನಾನು ಇಟ್ಟ ಗುರಿ, ಮುಂದಿಟ್ಟ ಹೆಜ್ಜೆಯಿಂದ ಯಾವತ್ತೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ರೈತ ನಾಯಕ ಯಡಿಯೂರಪ್ಪ ಅವರ ಮಗನಾಗಿ ಹೇಳುತ್ತೇನೆ. ಶಿಕಾರಿಪುರ ತಾಲೂಕಿಗೆ ಸೀಮಿತವಾಗದೆ ರಾಜ್ಯಾದ್ಯಂತ ಓಡಾಡಿ ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ಬಿಜೆಪಿ ಮುನ್ನಡೆಸುವ ಅವಕಾಶ ನನಗೆ ಮತ್ತೊಮ್ಮೆ ಸಿಗುವ ವಿಶ್ವಾಸವಿದೆ. ಪಕ್ಷ ಸಂಘಟನೆಯನ್ನು ಮುಂದುವರಿಸಿ, ಮುಂದಿನ ಬಾರಿ ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವ ಗುರಿ ನನ್ನದು’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. 

ಆ ಮೂಲಕ ವಿಜಯೇಂದ್ರ ರಾಜೀನಾಮೆ ನೀಡಲೇಬೇಕು ಎಂಬ ಯತ್ನಾಳ ಹೇಳಿಕೆಗೆ ಪರೋಕ್ಷವಾಗಿ ತಿರುಗೇಟು ನೀಡಿದರು.ಪಟ್ಟಣದಲ್ಲಿ ಆಯೋಜಿಸಿದ್ದ ಸರ್ವಧರ್ಮ ಸಾಮೂಹಿಕ ಮದುವೆ ಕಾರ್ಯಕ್ರಮ ಉದ್ಘಾಟನೆಗೆ ಆಗಮಿಸಿದ್ದ ವಿಜಯೇಂದ್ರ ಸುದ್ದಿಗಾರರ ಜೊತೆ ಮಾತನಾಡಿದರು. ಈ ವೇಳೆ, ಅಧ್ಯಕ್ಷ ಹುದ್ದೆಗೆ ವಿಜಯೇಂದ್ರ ಲಾಯಕ್‌ ಇಲ್ಲ ಎಂಬ ಯತ್ನಾಳ ಹೇಳಿಕೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ವಿಜಯೇಂದ್ರ ಅವರು, ‘ಯತ್ನಾಳ ಅವರಿಗೆ ಒಳ್ಳೆಯದಾಗಲಿ, ಭಗವಂತ ಅವರಿಗೆ ಒಳ್ಳೆಯದನ್ನು ಮಾಡಲಿ’ ಎಂದು ಕೈ ಮುಗಿದು ಮುಂದೆ ಸಾಗಿದರು.

ಬಳಿಕ, ಮದುವೆ ಸಮಾರಂಭದಲ್ಲಿ ಮಾತನಾಡಿ, ಬಿಜೆಪಿ ಆಂತರಿಕ ಪ್ರಜಾಪ್ರಭುತ್ವ ಇರುವಂತಹ ರಾಜಕೀಯ ಪಕ್ಷ. ನನ್ನ ತಂದೆ ಯಡಿಯೂರಪ್ಪನವರು ತಮ್ಮೆಲ್ಲರ ಆಶೀರ್ವಾದದಿಂದ 4 ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಈಗ ಬಿಜೆಪಿಯ ಎಲ್ಲ ಹಿರಿಯರು ಆಶೀರ್ವಾದ ಮಾಡಿ ನನಗೆ ಪಕ್ಷ ಮುನ್ನಡೆಸುವ ಜವಾಬ್ದಾರಿ ಕೊಟ್ಟಿದ್ದಾರೆ. ಕಳೆದೊಂದು ವರ್ಷದಿಂದ ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ವಹಿಸಿಕೊಂಡು ಬಂದಿದ್ದೇನೆ. ಮುಂದೆಯೂ ಅದೇ ರೀತಿ ಕೆಲಸ ಮಾಡುವ ಉದ್ದೇಶ ಹೊಂದಿದ್ದೇನೆ. ನನಗೆ ಬಿಜೆಪಿಯನ್ನು ಮುನ್ನಡೆಸುವ ಅವಕಾಶ ಮತ್ತೊಮ್ಮೆ ಸಿಗುವ ಸಂಪೂರ್ಣ ವಿಶ್ವಾಸವಿದೆ. ಹಿರಿಯರು ಮತ್ತೊಮ್ಮೆ ಆಶೀರ್ವಾದ ಮಾಡಿ ಪಕ್ಷ ಮುನ್ನಡೆಸಲು ಅವಕಾಶ ಕೊಡುತ್ತಾರೆ, ಮತ್ತೊಮ್ಮೆ ಎಲ್ಲರನ್ನು ಒಗ್ಗೂಡಿಸಿಕೊಂಡು ಕೆಲಸ ಮಾಡುವ ಅವಕಾಶ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದರು.