ಅಕ್ರಮ ಆಸ್ತಿಯ ಮಾಹಿತಿ ಬಯಸಿ ಇಂಟರ್‌ಪೋಲ್‌ನಿಂದ ಇದೇ ಮೊದಲ ಬಾರಿ ಸಿಲ್ವರ್‌ ನೋಟಿಸ್

| Published : Jan 11 2025, 12:48 AM IST / Updated: Jan 11 2025, 04:28 AM IST

ಸಾರಾಂಶ

ಅಪರಾಧಿಗಳ ವಿದೇಶದಲ್ಲಿರುವ ಅಕ್ರಮ ಆಸ್ತಿಯ ಮಾಹಿತಿ ಬಯಸಿ ಇಂಟರ್‌ ಪೋಲ್‌ ಇದೇ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಸಿಲ್ವರ್‌ ನೋಟಿಸ್‌ ಜಾರಿ ಮಾಡಿದೆ. ಇದೊಂದು ಪೈಲಟ್‌ ಯೋಜನೆಯಾಗಿದ್ದು, ಭಾರತ ಕೂಡ ಇದರ ಭಾಗವಾಗಿದೆ.

ನವದೆಹಲಿ: ಅಪರಾಧಿಗಳ ವಿದೇಶದಲ್ಲಿರುವ ಅಕ್ರಮ ಆಸ್ತಿಯ ಮಾಹಿತಿ ಬಯಸಿ ಇಂಟರ್‌ ಪೋಲ್‌ ಇದೇ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಸಿಲ್ವರ್‌ ನೋಟಿಸ್‌ ಜಾರಿ ಮಾಡಿದೆ. ಇದೊಂದು ಪೈಲಟ್‌ ಯೋಜನೆಯಾಗಿದ್ದು, ಭಾರತ ಕೂಡ ಇದರ ಭಾಗವಾಗಿದೆ.

ಕುಖ್ಯಾತ ಮಾಫಿಯಾ ಡಾನ್‌ ಒಬ್ಬನ ವಿದೇಶಿ ಆಸ್ತಿ ಪತ್ತೆಹಚ್ಚುವ ಸಂಬಂಧ ಇಟಲಿ ಮಾಡಿದ ಮನವಿ ಮೇರೆಗೆ ಮೊದಲ ಸಿಲ್ವರ್‌ ನೋಟಿಸ್‌ ಅನ್ನು ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ.

ಸದ್ಯ ಇಂಟರ್‌ಪೋಲ್‌ ರೆಡ್‌, ಗ್ರೀನ್‌, ಆರೆಂಜ್‌, ಯೆಲ್ಲೋ, ಬ್ಲೂ, ಬ್ಲ್ಯಾಕ್‌, ಪರ್ಪಲ್‌ ಬಣ್ಣದ ನೋಟಿಸ್‌ಗಳನ್ನು ಜಾರಿ ಮಾಡುತ್ತಿದ್ದು, ಸಿಲ್ಪರ್‌ ನೋಟಿಸ್‌ ಇಂಟರ್‌ಪೋಲ್‌ ಬಿಡುಗಡೆ ಮಾಡುತ್ತಿರುವ ಎಂಟನೇ ಬಣ್ಣದ ನೋಟಿಸ್‌ ಆಗಿದೆ. ರೆಡ್‌ ಕಾರ್ನರ್‌ ನೋಟಿಸ್‌ ಸಂಬಂಧಪಟ್ಟ ವ್ಯಕ್ತಿಯ ಬಂಧನಕ್ಕೆ ಅವಕಾಶ ಮಾಡಿಕೊಡುತ್ತದೆ.

ಸದ್ಯ ಈ ಸಿಲ್ಪರ್‌ ನೋಟಿಸ್‌ ಪ್ರಾಯೋಗಿಕ ಯೋಜನೆಯಲ್ಲಿ 52 ದೇಶಗಳು ಭಾಗಿಯಾಗಿದ್ದು, ನವೆಂಬರ್‌ ವರೆಗೆ ಮುಂದುವರಿಯಲಿದೆ.

ತೆರಿಗೆದಾರರ ಸ್ವರ್ಗ ದೇಶಗಳು ಮತ್ತು ಇತರೆ ದೇಶಗಳಿಗೆ ಕದ್ದುಮುಚ್ಚಿ ಹಣ ವರ್ಗಾವಣೆ ಮಾಡಿ ಆಸ್ತಿ ಮಾಡಿಕೊಂಡಿರುವ ಕ್ರಿಮಿನಲ್‌ಗಳ ಆಸ್ತಿ ಪತ್ತೆಗೆ ಈ ಸಿಲ್ವರ್‌ ನೋಟಿಸ್‌ ಅನುಕೂಲ ಮಾಡಿಕೊಡಲಿದೆ ಎಂದು ಭಾರತದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಭಾರತವು ಈಗಾಗಲೇ ವಿಜಯ್‌ ಮಲ್ಯ ಸೇರಿ 10 ಮಂದಿಯನ್ನು ಆರ್ಥಿಕ ಅಪರಾಧಿಗಳು ಎಂದು ಘೋಷಿಸಿದೆ. ಇವರ ವಿರುದ್ಧ ಭಾರತದಲ್ಲಿ ಆರ್ಥಿಕ ವಂಚನೆ ಪ್ರಕರಣ ದಾಖಲಾಗಿದ್ದು, ಇವರು ಹೊರದೇಶದಲ್ಲಿ ಆಸ್ತಿ ಮಾಡಿಕೊಂಡು ಅಲ್ಲೇ ನೆಲೆಸಿದ್ದಾರೆ.