ಪಂಜಾಬ್‌ ಕಿಂಗ್ಸ್‌ನ ಆಲ್ರೌಂಡ್‌ ಶೋ ಎದುರು ಲಖನೌ ಸೂಪರ್‌ ಜೈಂಟ್ಸ್‌ ಸೋಲು

| N/A | Published : Apr 02 2025, 01:03 AM IST / Updated: Apr 02 2025, 04:43 AM IST

ಸಾರಾಂಶ

ಪಂಜಾಬ್‌ ಕಿಂಗ್ಸ್‌ನ ಆಲ್ರೌಂಡ್‌ ಶೋ ಎದುರು ಲಖನೌ ಸೂಪರ್‌ ಜೈಂಟ್ಸ್‌ ಮಂಕಾಗಿದೆ. ಮಂಗಳವಾರ ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ 8 ವಿಕೆಟ್‌ಗಳ ಅಮೋಘ ಗೆಲುವು ಸಾಧಿಸಿ, ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು.

ಲಖನೌ: ಪಂಜಾಬ್‌ ಕಿಂಗ್ಸ್‌ನ ಆಲ್ರೌಂಡ್‌ ಶೋ ಎದುರು ಲಖನೌ ಸೂಪರ್‌ ಜೈಂಟ್ಸ್‌ ಮಂಕಾಗಿದೆ. ಮಂಗಳವಾರ ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ 8 ವಿಕೆಟ್‌ಗಳ ಅಮೋಘ ಗೆಲುವು ಸಾಧಿಸಿ, ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು.

ಮೊದಲು ಬ್ಯಾಟ್‌ ಮಾಡಿದ ಲಖನೌ, ನಿರ್ಣಾಯಕ ಹಂತಗಳಲ್ಲಿ ಪ್ರಮುಖ ಬ್ಯಾಟರ್‌ಗಳ ವಿಕೆಟ್‌ ಕಳೆದುಕೊಂಡು 20 ಓವರಲ್ಲಿ 7 ವಿಕೆಟ್‌ಗೆ 171 ರನ್‌ ಗಳಿಸಿತು. ಸ್ಪಿನ್‌ ಸ್ನೇಹಿ ಪಿಚ್‌ನಲ್ಲಿ ಈ ಗುರಿ ಬೆನ್ನತ್ತುವುದು ಅಂದುಕೊಂಡಷ್ಟು ಸುಲಭವಲ್ಲ ಅನಿಸಿದರೂ ಪಂಜಾಬ್‌ ಬ್ಯಾಟರ್‌ಗಳು ನಿರಾಯಾಸವಾಗಿ ಬ್ಯಾಟ್‌ ಬೀಸಿ, ಇನ್ನೂ 3.4 ಓವರ್‌ ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದರೊಂದಿಗೆ ತಂಡದ ನೆಟ್‌ ರನ್‌ರೇಟ್‌ ಸಹ ಉತ್ತಮಗೊಂಡಿತು.

ಲಖನೌ ಮೊದಲ ಓವರಲ್ಲೇ ಮಿಚೆಲ್‌ ಮಾರ್ಷ್‌ ವಿಕೆಟ್‌ ಕಳೆದುಕೊಂಡಿತು. ಮಾರ್ಕ್‌ರಮ್‌ 28 ರನ್‌ ಗಳಿಸಿ ಔಟಾದರೆ, ನಾಯಕ ರಿಷಭ್‌ ಪಂತ್‌ 5 ಎಸೆತದಲ್ಲಿ 2 ರನ್‌ ಗಳಿಸಿ ಪೆವಿಲಿಯನ್‌ಗೆ ವಾಪಸಾದರು. ಆದರೆ ಲಖನೌಗೆ ಭಾರಿ ಹಿನ್ನಡೆ ಉಂಟಾಗಿದ್ದು ನಿಕೋಲಸ್‌ ಪೂರನ್‌ (44) ಔಟಾದಾಗ. 12ನೇ ಓವರಲ್ಲಿ ಪೂರನ್‌ ವಿಕೆಟ್‌ ಬಿದ್ದಾಗ ತಂಡದ ಮೊತ್ತ 89 ರನ್‌. ಆ ಬಳಿಕ ಆಯುಷ್‌ ಬದೋನಿ (41), ಅಬ್ದುಲ್‌ ಸಮದ್‌(27)ರ ಹೋರಾಟದಿಂದ ತಂಡ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು.

ಪಂಜಾಬ್‌ ಸಹ ತನ್ನ ಆರಂಭಿಕ ಪ್ರಿಯಾನ್ಶ್‌ ಆರ್ಯಾ (08)ರನ್ನು ಬೇಗನೆ ಕಳೆದುಕೊಂಡಿತು. ಆದರೆ ಪ್ರಭ್‌ಸಿಮ್ರನ್‌ ಸಿಂಗ್‌ 34 ಎಸೆತದಲ್ಲಿ 9 ಬೌಂಡರಿ, 3 ಸಿಕ್ಸರ್‌ ಚಚ್ಚಿ ತಂಡವನ್ನು ಸುರಕ್ಷಿತ ಸ್ಥಿತಿಗೆ ತಂದು ನಿಲ್ಲಿಸಿದರು. ಅವರು ಔಟಾದಾಗ ಪಂಜಾಬ್‌ ಗೆಲುವಿಗೆ ಇನ್ನು ಕೇವಲ 68 ರನ್‌ ಬೇಕಿತ್ತು.

ಶ್ರೇಯಸ್‌ ಅಯ್ಯರ್‌ ಹಾಗೂ ಇಂಪ್ಯಾಕ್ಟ್‌ ಆಟಗಾರನಾಗಿ ಕಣಕ್ಕಿಳಿದ ನೇಹಲ್‌ ವಧೇರಾ, ಲಖನೌ ಬೌಲರ್‌ಗಳ ಬೆವರಿಳಿಸಿದರು. ಶ್ರೇಯಸ್‌ 30 ಎಸೆತದಲ್ಲಿ 52 ರನ್‌ ಚಚ್ಚಿದರೆ, ನೇಹಲ್‌ 25 ಎಸೆತದಲ್ಲಿ 43 ರನ್‌ ಗಳಿಸಿದರು. ಇಬ್ಬರೂ ತಲಾ 3 ಬೌಂಡರಿ, 4 ಸಿಕ್ಸರ್‌ ಸಿಡಿಸಿದರು.ಸ್ಕೋರ್‌: ಲಖನೌ 20 ಓವರಲ್ಲಿ 171/7 (ಪೂರನ್‌ 44, ಬದೋನಿ 41, ಸಮದ್‌ 27, ಅರ್ಶ್‌ದೀಪ್‌ 3-43), ಪಂಜಾಬ್‌ 16.2 ಓವರಲ್ಲಿ 177/2 (ಪ್ರಭ್‌ಸಿಮ್ರನ್‌ 69, ಶ್ರೇಯಸ್‌ 52*, ನೇಹಲ್‌ 43*, ದಿಗ್ವೇಶ್‌ 2-30)