ನಿರ್ಬಂಧದ ಹೊರತಾಗಿಯೂ ಹೋರ್ಮುಜ್‌ ಜಲಸಂಧಿ ದಾಟಿ ಭಾರತದತ್ತ ಹೊರಟಿದ್ದ ನೌಕೆಯನ್ನು ಬುಧವಾರ ವಶಪಡಿಸಿಕೊಂಡಿದ್ದ ಇರಾನ್‌, ಆ ಕಾರ್ಯಾಚರಣೆಗೆ ಹೇಗಿತ್ತು ಎಂಬುದರ ಕುರಿತ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.

ಬಂದೂಕು ಹಿಡಿದು ನೌಕೆ ಹತ್ತಿದ ಮಾಸ್ಕ್‌ಧಾರಿಗಳು । ಸೀದಾ ಎಂಜಿನ್‌ ಕೋಣೆಗೇ ನುಗ್ಗಿ ಯೋಧರ ಶೋಧ

‘ಮಸ್ಕಿಟೋ ಫ್ಲೀಟ್‌’ನ ಕಾರ್ಯಾಚರಣೆ ಪ್ರದರ್ಶನ । ವಿಡಿಯೋ ಮೂಲಕ ಟ್ರಂಪ್‌ಗೆ ಪರೋಕ್ಷ ಟಾಂಗ್‌?

ಟೆಹ್ರಾನ್‌: ನಿರ್ಬಂಧದ ಹೊರತಾಗಿಯೂ ಹೋರ್ಮುಜ್‌ ಜಲಸಂಧಿ ದಾಟಿ ಭಾರತದತ್ತ ಹೊರಟಿದ್ದ ನೌಕೆಯನ್ನು ಬುಧವಾರ ವಶಪಡಿಸಿಕೊಂಡಿದ್ದ ಇರಾನ್‌, ಆ ಕಾರ್ಯಾಚರಣೆಗೆ ಹೇಗಿತ್ತು ಎಂಬುದರ ಕುರಿತ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ದುಬೈನಿಂದ ತೈಲ ಹೊತ್ತು ಗುಜರಾತ್‌ನತ್ತ ತೆರಳುತ್ತಿದ್ದ ಎಪಾಮಿನೊಂಡಾಸ್‌ ಸೇರಿ 3 ಹಡಗುಗಳು ಇರಾನ್‌ನ ಎಚ್ಚರಿಕೆ ಧಿಕ್ಕರಿಸಿದಾಗ, ಇರಾನ್‌ನ ಅರೆಸೇನಾಪಡೆ ಅವುಗಳತ್ತ ಗುಂಡು ಹಾರಿಸಿ, ಗ್ರೆನೇಡ್‌ ತೂರಿ ಬಳಿಕ ವಶಕ್ಕೆ ಪಡೆದಿತ್ತು.

ವಿಡಿಯೋದಲ್ಲೇನಿದೆ?:

ಸಾಗರದಲ್ಲಿ ನಿಂತಿರುವ ಎಂಎಸ್‌ಸಿ-ಫ್ರಾನ್ಸೆಸ್ಕಾ ಎಂಬ ಹಡಗಿನತ್ತ ಸಣ್ಣ ದೋಣಿಯೊಂದು ವೇಗವಾಗಿ ನುಗ್ಗಿ ಬರುತ್ತದೆ. ಬಳಿಕ ಅದರಲ್ಲಿದ್ದ ಮುಖಕ್ಕೆ ಮಾಸ್ಕ್‌ ಧರಿಸಿ, ಬೆನ್ನಲ್ಲಿ ಬಂದೂಕ ಧರಿಸಿದ್ದ ಐಆರ್‌ಜಿಸಿ ಯೋಧರೆಲ್ಲಾ ಹಾಲಿವುಡ್‌ ಚಿತ್ರಗಳಂತೆ ಒಬ್ಬೊಬ್ಬರಾಗಿ ಏಣಿ ಹಿಡಿದು ನೌಕೆ ಏರತೊಡಗುತ್ತಾರೆ.

ಇದೇ ಮಾದರಿಯಲ್ಲಿ ಇನ್ನೊಂದು ಸ್ಪೀಡ್‌ಬೋಟ್‌ ಎಪಾಮಿನೊಂಡಾಸ್‌ನತ್ತ ನುಗ್ಗುತ್ತದೆ ಹಾಗೂ ಯೋಧರು ಅದರ ಒಳಗೆ ಹೊಕ್ಕು, ಎಂಜಿನ್‌ ಕೋಣೆಯಲ್ಲಿ ಶೋಧ ನಡೆಸುತ್ತಾರೆ. ಬಳಿಕ ಅದರ ಪೂರ್ಣ ನಿಯಂತ್ರಣವನ್ನು ತಮ್ಮ ಕೈಗೆ ತೆಗೆದುಕೊಳ್ಳುತ್ತಾರೆ. ಕೊನೆಗೆ ಅವುಗಳನ್ನು ಇರಾನ್‌ನ ದಡಕ್ಕೆ ಕರೆದೊಯ್ಯಲಾಗುತ್ತದೆ.

ಟ್ರಂಪ್‌ಗೆ ಪರೋಕ್ಷ ಟಾಂಗ್‌?:

ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಸವಾಲೆಸೆಯಲು ಇರಾನ್‌ ಸೇನೆ ಈ ವಿಡಿಯೋ ಬಿಡುಗಡೆ ಮಾಡಿದೆ ಎನ್ನಲಾಗಿದೆ. ಕಾರಣ, ಹೋರ್ಮುಜ್‌ ಜಲಸಂಧಿಯಲ್ಲಿ ದೊಡ್ಡದೊಡ್ಡ ಯುದ್ಧನೌಕೆ ತಂದಿಟ್ಟುಕೊಂಡು, ಅದು ನಮ್ಮ ನಿಯಂತ್ರಣದಲ್ಲಿದೆ ಎಂದು ಅಮೆರಿಕ ಬೀಗುತ್ತಿತ್ತು. ಇದಕ್ಕೆ ಟಕ್ಕರ್‌ ಕೊಡುವಂತೆ ಅದೇ ಪ್ರದೇಶದಲ್ಲಿ 3 ನೌಕೆಗಳನ್ನು ವಶಕ್ಕೆ ಪಡೆಯುವ ಮೂಲಕ, ‘ಹೋರ್ಮುಜ್‌ ಹಾಗೂ ಅದರ ಮೇಲಿನ ಹಿಡಿತ ನಮ್ಮದು’ ಎಂದು ಇರಾನ್‌ ನೆನಪಿಸಿದೆ.