ಸಾರಾಂಶ
ಜಗದ್ವಿಖ್ಯಾತ ‘ಜಾನ್ ವಿಕ್ 2’, ‘ಐರನ್‌ಮ್ಯಾನ್’ನಂಥಾ ಹಾಲಿವುಡ್ ಸಿನಿಮಾಗಳಿಗೆ ಸ್ಟಂಟ್ ಕೊರಿಯೋಗ್ರಫಿ ಮಾಡಿರುವ ಜೆ.ಜೆ. ಪೆರ್ರಿ ಇದೀಗ ‘ಟಾಕ್ಸಿಕ್’ ಚಿತ್ರಕ್ಕೂ ಕೆಲಸ ಮಾಡಿದ್ದಾರೆ. ಇದೀಗ ಕೆಲಸ ಮುಗಿಸಿ ವಾಪಸ್ ಹೊರಟಿರುವ ಅವರು, ಹೀರೋ ಯಶ್ ಹಾಗೂ ಚಿತ್ರತಂಡದ ಬಗ್ಗೆ ಹೊಗಳಿದ್ದಾರೆ.
‘ಟಾಕ್ಸಿಕ್ ಸಿನಿಮಾಕ್ಕಾಗಿ ನನ್ನ ಆತ್ಮೀಯ ಮಿತ್ರ ಯಶ್ ಅವರೊಂದಿಗೆ ಕೆಲಸ ಮಾಡಿದ್ದು ಬಹಳ ಖುಷಿ ಕೊಟ್ಟಿದೆ. ಟಾಕ್ಸಿಕ್ ಅದ್ದೂರಿ ಅದ್ಭುತ ಸಿನಿಮಾ’ ಎಂದು ಶ್ಲಾಘಿಸಿದ್ದಾರೆ.‘ಚಿತ್ರೀಕರಣ ಹಂತದಲ್ಲಿರುವ ಟಾಕ್ಸಿಕ್ ಸಿನಿಮಾ ಭಾರತದಾದ್ಯಂತ ಸದ್ದು ಮಾಡುತ್ತಿದೆ. ಈ ಸಿನಿಮಾದಲ್ಲಿ ಯುರೋಪ್‌ನ ಹಲವು ವೃತ್ತಿಪರ ಗೆಳೆಯರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಹುರುಪು ಹೆಚ್ಚಿಸಿತು. ಈ ಸಿನಿಮಾವನ್ನು ತೆರೆ ಮೇಲೆ ನೋಡಲು ಪ್ರತಿಯೊಬ್ಬರೂ ಎಷ್ಟು ಕಾತರರಾಗಿದ್ದಾರೆ ಎಂಬುದು ಗೊತ್ತು. ಇದು ನಿಜಕ್ಕೂ ಎಕ್ಸೈಟಿಂಗ್ ಪ್ರಾಜೆಕ್ಟ್. ನಾವು ಈ ಪ್ರಾಜೆಕ್ಟ್‌ಗೆ ಕೆಲಸ ಮಾಡಿರುವುದಕ್ಕೆ ಹೆಮ್ಮೆ ಇದೆ’ ಎಂದು ಜೆಜೆ ಪೆರ್ರಿ ಹೇಳಿದ್ದಾರೆ.
ಇದಕ್ಕೆ ಸ್ಪಂದಿಸಿರುವ ಯಶ್, ‘ನಿಮ್ಮ ಜೊತೆ ಸಮಯ ಕಳೆದದ್ದು ಅದ್ಭುತ ಅನುಭವ, ನಿಮ್ಮ ಕೆಲಸ ನಮ್ಮ ಬಲ ಹೆಚ್ಚಿಸಿದೆ’ ಎಂದಿದ್ದಾರೆ.ಹಾಲಿವುಡ್‌ನ ಖ್ಯಾತ ಸಿನಿಮಾಗಳಿಗೆ ಸ್ಟಂಟ್ ಕೊರಿಯೋಗ್ರಫಿ ಮಾಡಿ ವಿಶ್ವಾದ್ಯಂತ ಹೆಸರು ಮಾಡಿದ ಪೆರ್ರಿ ಇದೀಗ ನಟ ಯಶ್ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿರುವುದು ವಿಶ್ವಾದ್ಯಂತ ಸದ್ದು ಮಾಡಿದೆ. ‘ಟಾಕ್ಸಿಕ್’ ಬಗೆಗಿನ ನಿರೀಕ್ಷೆ ಇದರಿಂದ ದುಪ್ಪಟ್ಟಾಗಿದೆ.