ಪ್ರವಾಸೋದ್ಯಮ ವಿಚಾರದಲ್ಲಿ ಭಾರತದ ಜತೆ ಕ್ಯಾತೆ ತೆಗೆದಿದ್ದ ದ್ವೀಪದೇಶ ಮಾಲ್ಡೀವ್ಸ್‌, ಈಗ ಇಸ್ರೇಲ್‌ ಪ್ರವಾಸಿಗರ ಮೇಲೂ ನಿರ್ಬಂಧ ಹೇರಿದೆ.

ಟೆಲ್‌ ಅವೀವ್‌: ಪ್ರವಾಸೋದ್ಯಮ ವಿಚಾರದಲ್ಲಿ ಭಾರತದ ಜತೆ ಕ್ಯಾತೆ ತೆಗೆದಿದ್ದ ದ್ವೀಪದೇಶ ಮಾಲ್ಡೀವ್ಸ್‌, ಈಗ ಇಸ್ರೇಲ್‌ ಪ್ರವಾಸಿಗರ ಮೇಲೂ ನಿರ್ಬಂಧ ಹೇರಿದೆ. ಇಸ್ರೇಲ್ ಪಾಸ್‌ಪೋರ್ಟ್‌ ಹೊಂದಿರುವವರು ಮತ್ತು ವಿದೇಶಿ ಪಾಸ್‌ಪೋರ್ಟ್‌ ಹೊಂದಿರುವ ಇಸ್ರೇಲಿಗರು ಮಾಲ್ಡೀವ್ಸ್ ವಿದೇಶಾಂಗ ಸಚಿವಾಲಯ ತಮ್ಮ ದೇಶಕ್ಕೆ ಬರದಂತೆ ಸೂಚಿಸಿದೆ. ಅಲ್ಲದೆ, ತಮ್ಮ ದೇಶದಲ್ಲಿರುವ ಇಸ್ರೇಲಿಗರನ್ನೂ ಶೀಘ್ರದಲ್ಲೇ ದೇಶ ಬಿಟ್ಟು ತೊರೆಯುವಂತೆ ಸೂಚಿಸಿದೆ.

ಇಸ್ರೇಲ್‌ ಸೇನೆಯು ಹಮಾಸ್‌ ಉಗ್ರರ ಮೇಲಿನ ದಾಳಿ ನೆಪದಲ್ಲಿ ಗಾಜಾ಼ ಪಟ್ಟಿಯಲ್ಲಿರುವ ಅಮಾಯಕರನ್ನು ಕೊಲ್ಲುತ್ತಿದೆ ಎಂದು ಆರೋಪಿಸಿ ಮಾಲ್ಡೀವ್ಸ್‌ ಈ ಕ್ರಮ ಜರುಗಿಸಿದೆ.

ಭಾರತಕ್ಕೆ ಬನ್ನಿ- ಇಸ್ರೇಲ್‌ ದೂತಾವಾಸ ಮನವಿ:

ಈ ನಡುವೆ, ಇಸ್ರೇಲ್‌ ಪ್ರವಾಸಿಗರಿಗೆ ನಿರ್ಬಂಧ ಹೇರಿದ ಮಾಲ್ಡೀವ್ಸ್‌ಗೆ ಭಾರತದ ಇಸ್ರೇಲಿ ದೂತಾವಾಸ ಸಡ್ಡು ಹೊಡೆದಿದೆ. ‘ಇಸ್ರೇಲಿ ಪ್ರವಾಸಿಗರು ಭಾರತೀಯ ವಿಹಾರಧಾಮಗಳಾದ ಲಕ್ಷದ್ವೀಪ, ಅಂಡಮಾನ್‌ ನಿಕೋಬಾರ್‌, ಗೋವಾ, ಕೇರಳ ಮುಂತಾದ ಕಡೆಗೆ ಭೇಟಿ ನೀಡಬಹುದು’ ಎಂದು ಇಸ್ರೇಲ್‌ ದೂತಾವಾಸ ಮನವಿ ಮಾಡಿದೆ. ಅಲ್ಲದೆ, ಪ್ರಧಾನಿ ಮೋದಿ ಲಕ್ಷದ್ವೀಪದಲ್ಲಿ ವಿಹರಿಸುತ್ತಿರುವ ದೃಶ್ಯವನ್ನು ಮತ್ತು ಭಾರತದ ವಿವಿಧ ಸುಂದರ ಸಮುದ್ರ ತೀರಗಳ ಚಿತ್ರಗಳನ್ನು ಟ್ಯಾಗ್‌ ಮಾಡಿದೆ.