ಹಿಜ್ಬುಲ್ಲಾ ಉಗ್ರರ ಸದೆಬಡಿಯಲು ನಿರ್ಧರಿಸಿರುವ ಇಸ್ರೇಲ್‌ : ಲೆಬನಾನ್‌ ಮೇಲಿನ ದಾಳಿ ಮತ್ತಷ್ಟು ತೀವ್ರ

| Published : Oct 06 2024, 01:15 AM IST / Updated: Oct 06 2024, 09:00 AM IST

ಸಾರಾಂಶ

ಹಿಜ್ಬುಲ್ಲಾ ಉಗ್ರರನ್ನು ನಿರ್ನಾಮ ಮಾಡಲು ಇಸ್ರೇಲ್‌ ದೃಢನಿಶ್ಚಯ ಮಾಡಿದ್ದು, ಲೆಬನಾನ್‌ ಮೇಲೆ ತನ್ನ ದಾಳಿಯನ್ನು ತೀವ್ರಗೊಳಿಸಿದೆ. ಇಸ್ರೇಲ್‌ ವಾಯುಪಡೆ ಬೈರೂತ್‌ನ ದಕ್ಷಿಣ ಭಾಗದಲ್ಲಿ ಹಿಜ್ಬುಲ್ಲಾಗಳ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. 

ಟೆಲ್‌ಅವೀವ್‌: ಹಿಜ್ಬುಲ್ಲಾ ಉಗ್ರರ ಸದೆಬಡಿಯಲು ನಿರ್ಧರಿಸಿರುವ ಇಸ್ರೇಲ್‌, ಲೆಬನಾನ್‌ ಮೇಲಿನ ತನ್ನ ದಾಳಿಯನ್ನು ಶನಿವಾರ ಮತ್ತಷ್ಟು ತೀವ್ರಗೊಳಿಸಿದೆ. ಮತ್ತೊಂದೆಡೆ ಪ್ಯಾಲೆಸ್ತೀನ್‌ ನಿರಾಶ್ರಿತರ ಶಿಬಿರದ ಮೇಲೂ ದಾಳಿ ನಡೆಸುವ ಏಕಕಾಲಕ್ಕೆ ಹಮಾಸ್‌ ಉಗ್ರರನ್ನೂ ಮಣಿಸುವ ಯತ್ನವನ್ನು ಮುಂದುವರೆಸಿದೆ.

ಇಸ್ರೇಲಿ ವಾಯುಪಡೆ, ಶನಿವಾರ ರಾಜಧಾನಿ ಬೈರೂತ್‌ ನಗರದ ದಕ್ಷಿಣ ಭಾಗದ ಪ್ರದೇಶಗಳನ್ನು ಗುರಿಯಾಗಿಸಿ ದಾಳಿ ನಡೆಸಿವೆ. ಹಿಜ್ಬುಲ್ಲಾಗಳ ಮೂಲಸೌಕರ್ಯಗಳ ಗುರಿಯಾಗಿಸಿ ನಡೆದ ದಾಳಿಯಲ್ಲಿ ಕ್ಷಿಪಣಿ, ಲಾಂಚ್‌ಪ್ಯಾಡ್‌, ಕಾವಲು ಗೋಪುರ, ಶಸ್ತ್ರಾಗಾರಗಳು ಧ್ವಂಸಗೊಡಿವೆ. ಜೊತೆಗೆ ಇಸ್ರೇಲ್ ಗಡಿಯನ್ನು ತಲುಪಲು ಹಿಜ್ಬುಲ್ಲಾಗಳು ಬಳಸುತ್ತಿದ್ದ ಸುರಂಗಗಳನ್ನು ಕೆಡವಿರುವುದಾಗಿ ಇಸ್ರೇಲ್‌ ಹೇಳಿಕೊಂಡಿದೆ.ಹಿಜ್ಬುಲ್ಲಾಗಳ ಸರ್ವನಾಶಕ್ಕೆ ಮುಂದಾಗಿರುವ ಇಸ್ರೇಲ್‌ ಕಳೆದೊಂದು ತಿಂಗಳಲ್ಲಿ ನಡೆಸಿದ ದಾಳಿಯಲ್ಲಿ 1,400 ಹಿಜ್ಬುಲ್ಲಾ ಹೋರಾಟಗಾರರು ಮತ್ತು ನಾಗರಿಕರು ಸಾವನ್ನಪ್ಪಿದ್ದು, 12 ಲಕ್ಷ ಜನರು ನೆಲೆ ಕಳೆದುಕೊಂಡಿದ್ದಾರೆ. ಅತ್ತ ಇಸ್ರೇಲ್‌ ಕೂಡ 9 ಪಡೆಗಳನ್ನು ಕಳೆದುಕೊಂಡಿದೆ.ಜೊತೆಗೆ ಟ್ರಿಪೋಲಿ ನಗರದ ಮೇಲೆ ನಡೆದ ದಾಳಿ ವೇಳೆ ಓವ್ ಹಮಾಸ್‌ ಅಧಿಕಾರಿ ತನ್ನ ಕುಟುಂಬ ಸಮೇತ ಸಾವನ್ನಪ್ಪಿದ್ದಾನೆ.

ಇಸ್ರೇಲ್‌ - ಹಮಾಸ್ ಕದನಕ್ಕೆ ನಾಳೆಗೆ ವರ್ಷ

ಜೆರುಸಲೇಂ: ಮಧ್ಯಪ್ರಾಚ್ಯದಲ್ಲಿ ಭಾರೀ ಬಿಕ್ಕಟ್ಟಿಗೆ ನಾಂದಿ ಹಾಡಿದ ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಯುದ್ಧಕ್ಕೆ ಅ.7ಕ್ಕೆ ಒಂದು ವರ್ಷ ತುಂಬಲಿದೆ. ಇಸ್ರೇಲ್‌ನೊಳಗೆ ನುಗ್ಗಿ ಹಮಾಸ್‌ ಉಗ್ರರು ಸಾವಿರಾರು ಅಮಾಯಕರನ್ನು ಕೊಲ್ಲುವ ಮೂಲಕ ಆರಂಭವಾಗಿದ್ದ ಯುದ್ಧ, ಬಳಿಕ ಹಮಾಸ್‌ ಉಗ್ರರ ವಶದಲ್ಲಿದ್ದ ಗಾಜಾಪಟ್ಟಿ ಪ್ರದೇಶವನ್ನು ಇಸ್ರೇಲ್‌ ನೆಲಸಮ ಮಾಡುವವರೆಗೆ ವಿಸ್ತರಣೆಯಾಗಿದೆ.

ಈ ವರ್ಷದ ಅವಧಿಯಲ್ಲಿ ಯುದ್ಧ 50000 ಜನರನ್ನು ಬಲಿಪಡೆದಿದ್ದರೆ, 1 ಲಕ್ಷಕ್ಕೂ ಹೆಚ್ಚು ಜನರು ಗಾಯಾಳುಗಳಾಗುವಂತೆ ಮತ್ತು 15 ಲಕ್ಷಕ್ಕೂ ಹೆಚ್ಚು ಜನರು ಮನೆ ತೊರೆಯುವಂತೆ ಮಾಡಿದೆ.ಭೀಕರ ದಾಳಿ: 2023ರ ಅ.7ರ ಬೆಳ್ಳಂ ಬೆಳಗ್ಗೆ ಇಸ್ರೇಲಿಗರು ತಮ್ಮ ದಿನಚರಿಗೆ ಆರಂಭಿಸುವ ವೇಳೆ ಇಸ್ರೇಲ್‌ ಮೇಲೆ ಗಾಜಾ ಪಟ್ಟಿಯಿಂದ ಹಮಾಸ್‌ ಉಗ್ರರು 2000ಕ್ಕೂ ಹೆಚ್ಚಿನ ರಾಕೆಟ್‌ಗಳಿಂದ ದಾಳಿ ನಡೆಸಿದ್ದಲ್ಲದೇ ನೂರಾರು ಜನ ಇಸ್ರೇಲ್‌ನೊಳಗೆ ನುಗ್ಗಿ ಗುಂಡಿನ ದಾಳಿಯ ಮೂಲಕ 1300ಕ್ಕೂ ಹೆಚ್ಚು ಜನರನ್ನು ಬಲಿಪಡೆದಿದ್ದರು. ಜೊತೆಗೆ 250ಕ್ಕೂ ಹೆಚ್ಚಿನ ಇಸ್ರೇಲಿಗರನ್ನು ಹಮಾಸ್‌ ಒತ್ತೆಯಾಳುಗಳಾಗಿ ಹಿಡಿದಿಟ್ಟುಕೊಂಡಿತ್ತು.

ಇಸ್ರೇಲ್‌ ಪ್ರತಿದಾಳಿ: ಹಮಾಸ್ ದಾಳಿಗೆ ಪ್ರತಿಯಾಗಿ ಸತತ ಒಂದು ವರ್ಷದಿಂದಲೂ ಇಸ್ರೇಲ್‌ ಭಾರೀ ವೈಮಾನಿಕ, ಭೂ ದಾಳಿ ನಡೆಸಿ ಗಾಜಾಪಟ್ಟಿ ಪ್ರದೇಶವನ್ನು ಬಹುತೇಕ ಸ್ಮಶಾನಸದೃಶ್ಯ ಮಾಡಿದೆ. ಆದರೆ ಹಮಾಸ್‌ ಉಗ್ರರು ಇನ್ನೂ ದಾಳಿ ನಿಲ್ಲಿಸದ ಕಾರಣ, ಇಸ್ರೇಲ್‌ ತನ್ನ ದಾಳಿ ಮುಂದುವರೆಸಿದೆ.

ಯುದ್ಧಕ್ಕೆ ಇತರರ ಪ್ರವೇಶ

ಮೊದಲಿಗೆ ಇಸ್ರೇಲ್‌ ಮತ್ತು ಹಮಾಸ್‌ ನಡುವೆ ಯುದ್ಧ ಆರಂಭವಾಗಿ ನಂತರದಲ್ಲಿ ಅದು ಲೆಬನಾನ್‌, ಹಿಜ್ಬುಲ್ಲಾ, ಇರಾನ್‌ ಪ್ರವೇಶಕ್ಕೆ ನಾಂದಿ ಹಾಡಿತು. ಇದರತ ಮತ್ತೊಂದೆಡೆ ಇಸ್ರೇಲ್‌ ಬೆಂಬಲಿತ ರಾಷ್ಟ್ರಗಳ ಹಡಗುಗಳ ಮೇಲೆ ಯೆಮೆನ್‌ನ ಹೌತಿ ಉಗ್ರರು ದಾಳಿ ನಡೆಸಲು ಆರಂಭಿಸಿದೆ.