ಲೆಬನಾನ್‌ನ ಹಿಜ್ಬುಲ್ಲಾ ಉಗ್ರರನ್ನು ಗುರಿಯಾಗಿಸಿಕೊಂಡು ಪೂರ್ಣ ದಾಳಿಗೆ ಇಸ್ರೇಲ್‌ ಸಜ್ಜು

| Published : Sep 27 2024, 01:18 AM IST / Updated: Sep 27 2024, 06:55 AM IST

ಸಾರಾಂಶ

ಲೆಬನಾನ್‌ನ ಹಿಜ್ಬುಲ್ಲಾ ಉಗ್ರರನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ ನಡೆಸುತ್ತಿರುವ ವೈಮಾನಿಕ ದಾಳಿ ತೀವ್ರಗೊಂಡಿದ್ದು, ಯುದ್ಧದ ಭೀತಿ ಎದುರಾಗಿದೆ. ಹಲವು ರಾಷ್ಟ್ರಗಳು ಯುದ್ಧ ವಿರಾಮಕ್ಕೆ ಕರೆ ನೀಡಿದ್ದರೂ ಇಸ್ರೇಲ್‌ ದಾಳಿ ಮುಂದುವರೆಸಿದೆ.

ಜೆರುಸಲೇಮ್: ಲೆಬನಾನ್‌ನ ಹಿಜ್ಬುಲ್ಲಾ ಉಗ್ರರನ್ನು ಗುರಿಯಾಗಿಸಿಕೊಂಡು ಕಳೆದ 3 ದಿನಗಳಿಂದ ಭಾರೀ ವೈಮಾನಿಕ ದಾಳಿ ನಡೆಸುತ್ತಿದ್ದ ಇಸ್ರೇಲ್‌, ಇದೀಗ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸಲು ಮುಂದಾಗಿದೆ.

ಹಿಜ್ಬುಲ್ಲಾ ಉಗ್ರರನ್ನು ಪೂರ್ಣ ಪ್ರಮಾಣದ ಬಲದೊಂದಿಗೆ ಎದುರಿಸುವಂತೆ ತಮ್ಮ ಸೇನೆಗೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಸೂಚಿಸಿದ್ದಾರೆ. ಇದರೊಂದಿಗೆ ಇಸ್ರೇಲ್‌- ಲೆಬನಾನ್‌ ನಡುವೆ ಯುದ್ಧದ ಭೀತಿ ಎದುರಾಗಿದೆ.

ಕದನ ವಿರಾಮಕ್ಕೆ ಕರೆ:

ಲೆಬನಾಬ್‌ ಮೇಲಿನ ದಾಳಿಯನ್ನು ನಿಲ್ಲಿಸಿ 21 ದಿನ ಯುದ್ಧ ವಿರಾಮ ಘೋಷಿಸುವಂತೆ ಅಮೆರಿಕ, ಯುರೋಪ್‌ ಒಕ್ಕೂಟ, ಯುಎಇ, ಜಪಾನ್‌ ಹಾಗೂ ಗಲ್ಫ್‌ ರಾಷ್ಟ್ರಗಳು ಸೇರಿದಂತೆ ಇತರೆ ಮಿತ್ರ ರಾಷ್ಟ್ರಗಳು ಇಸ್ರೇಲ್‌ ಮೇಲೆ ಒತ್ತಡ ಹಾಕಿದ್ದವು. ಜತೆಗೆ ಲೆಬನಾನ್‌ನಲ್ಲಿರುವ ತನ್ನ ಪ್ರಜೆಗಳನ್ನು ದೇಶಕ್ಕೆ ಹಿಂದಿರುಗುವಂತೆ ಬ್ರಿಟನ್‌ ಆದೇಶಿಸಿದ್ದು, ಅಲ್ಲಿಯವರೆಗೂ ಯುದ್ಧ ವಿರಾಮ ಘೋಷಿಸಬೇಕೆಂದು ಒತ್ತಾಯಿಸಿದೆ.

ಇದಕ್ಕೆ ಪ್ರತಿಕ್ರಿಯೆ ಇಸ್ರೇಲ್‌ ಪ್ರತಿಕ್ರಿಯೆ ನೀಡದೇ ಯುದ್ಧ ಮುಂದುವರೆಸುವಂತೆ ಸೇನೆಗೆ ತಿಳಿಸಿದೆ. ಈಗಾಗಲೇ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಗೆ ಹೆದರಿ 90 ಸಾವಿರ ಜನರು ಲೆಬನಾನ್‌ನಿಂದ ಗುಳೆ ಹೋಗಿದ್ದಾರೆ ಎನ್ನಲಾಗಿದೆ.

23 ಕಾರ್ಮಿಕರು ಸಾವು:

ಇಸ್ರೇಲ್‌ ತನ್ನ ವಾಯುದಾಳಿಯನ್ನು 4ನೇ ದಿನವೂ ಮುಂದುವರೆಸಿದ್ದು, ಸಿರಿಯಾ ಮೂಲದ 23 ಮಂದಿ ಕಾರ್ಮಿಕರು ಹಾಗೂ ಅವರ ಕುಟುಂಬ ಸದಸ್ಯರು ಮೃತಪಟ್ಟಿದ್ದಾರೆ. ಇದರಿಂದ ಲೆಬನಾನ್‌ನಲ್ಲಿ 630ಕ್ಕೂ ಹೆಚ್ಚು ಜನ ಸಾವನ್ನಪ್ಪಿದಂತಾಗಿದೆ.