ಎಲ್‌-1ಗೆ ಮೊದಲ ಸುತ್ತು ಹಾಕಿದ ಇಸ್ರೋ ‘ಆದಿತ್ಯ’

| Published : Jul 03 2024, 12:22 AM IST / Updated: Jul 03 2024, 07:02 AM IST

ಸಾರಾಂಶ

ಭಾರತದ ಮೊದಲ ಸೌರ ಯೋಜನೆಯ ಭಾಗವಾಗಿ ಬಾಹ್ಯಾಕಾಶಕ್ಕೆ ಹಾರಿದ್ದ ಆದಿತ್ಯ ಎಲ್-1 ಬಾಹ್ಯಾಕಾಶ ನೌಕೆ ಸೂರ್ಯ-ಭೂಮಿ ಎಲ್ 1 ಪಾಯಿಂಟ್ ಸುತ್ತ ತನ್ನ ಮೊದಲ ಹಾಲೋ ಕಕ್ಷೆಯನ್ನು ಪೂರ್ಣಗೊಳಿಸಿದೆ ಎಂದು ಬಾಹ್ಯಾಕಾಶ ಸಂಸ್ಥೆ ಇಸ್ರೋ ತಿಳಿಸಿದೆ.

ಬೆಂಗಳೂರು: ಭಾರತದ ಮೊದಲ ಸೌರ ಯೋಜನೆಯ ಭಾಗವಾಗಿ ಬಾಹ್ಯಾಕಾಶಕ್ಕೆ ಹಾರಿದ್ದ ಆದಿತ್ಯ ಎಲ್-1 ಬಾಹ್ಯಾಕಾಶ ನೌಕೆ ಸೂರ್ಯ-ಭೂಮಿ ಎಲ್ 1 ಪಾಯಿಂಟ್ ಸುತ್ತ ತನ್ನ ಮೊದಲ ಹಾಲೋ ಕಕ್ಷೆಯನ್ನು ಪೂರ್ಣಗೊಳಿಸಿದೆ ಎಂದು ಬಾಹ್ಯಾಕಾಶ ಸಂಸ್ಥೆ ಇಸ್ರೋ ತಿಳಿಸಿದೆ. ಕಕ್ಷೆಯಲ್ಲಿರುವ ಆದಿತ್ಯ ಎಲ್-1 ಬಾಹ್ಯಾಕಾಶ ನೌಕೆ ಎಲ್-1 ಪಾಯಿಂಟನ್ನು ಸುತ್ತಲು 178 ದಿನಗಳನ್ನು ತೆಗದುಕೊಳ್ಳುತ್ತದೆ ಎಂದು ಇಸ್ರೋ ಮಾಹಿತಿ ನೀಡಿದೆ.

‘ಕಕ್ಷೆಯನ್ನು ನಿರ್ವಹಿಸಲು ಆದಿತ್ಯ-L1 ಕ್ರಮವಾಗಿ ಫೆಬ್ರವರಿ 22 ಮತ್ತು ಜೂನ್ 7ರಂದು ಎರಡು ನಿಲ್ದಾಣಗಳನ್ನು ಹಾದು ಮುಂದುವರೆದಿತ್ತು. ಇಂದು ಮೂರನೇ ನಿಲ್ದಾಣವನ್ನು ದಾಟಿ L1 ಸುತ್ತಲಿನ ಎರಡನೇ ಹಾಲೋ ಕಕ್ಷೆಯ ಪಥದಲ್ಲಿ ತನ್ನ ಪ್ರಯಾಣವನ್ನು ಮುಂದುವರೆಸಿದೆ’ ಎಂದು ಇಸ್ರೋ ಮಾಹಿತಿ ನೀಡಿದೆ.

2023ರ ಸೆ.2ರಂದು ಉಡಾವಣೆಯಾಗಿದ್ದ ಆದಿತ್ಯ ಎಲ್-1 2024ರ ಜ.6ರಂದು ಕಕ್ಷೆಗೆ ಯಶಸ್ವಿಯಾಗಿ ಸೇರಿತ್ತು.

==

ಚಂದ್ರನ ಕಲ್ಲಿನ ಪದರದ ಮೇಲೆ ವಾತಾವರಣದ ಪ್ರಭಾವ ದೃಢ

ನವದೆಹಲಿ: ಚಂದ್ರನ ದಕ್ಷಿಣ ಧ್ರುವ ಅಧ್ಯಯನಕ್ಕೆಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಹಾರಿಬಿಟ್ಟಿದ್ದ ಚಂದ್ರಯಾನ 3 ನೌಕೆಯು ಮಹತ್ವದ ಅಂಶವೊಂದರ ಕುರಿತು ಬೆಳಕು ಚೆಲ್ಲಿದೆ. ನೌಕೆಯ ಭಾಗವಾಗಿದ್ದ ಪ್ರಜ್ಞಾನ್‌ ರೋವರ್‌, ಚಂದ್ರನ ಮೇಲಿನ ಕಲ್ಲು, ಅಲ್ಲಿಯ ವಾತಾವರಣದ ಪರಿಣಾಮಗಳಿಗೆ ತುತ್ತಾಗುವುದನ್ನು ದೃಢಪಡಿಸಿದೆ.

ಚಂದ್ರನ ಮೇಲ್ಮೈ ಮೇಲೆ ಸಕ್ರಿಯವಾಗಿದ್ದ ವೇಳೆ ಪ್ರಜ್ಞಾನ್ ರೋವರ್‌ಗೆ ಇಳಿಜಾರಿನ ಪ್ರದೇಶವೊಂದರ ಬಳಿ ಸಣ್ಣ ಕಲ್ಲಿನ ಪದರಗಳು ಸಿಕ್ಕಿವೆ. ಅದರ ಸೂಕ್ಷ್ಮ ಅಧ್ಯಯನದ ವೇಳೆ ಅದು ಚಂದ್ರನ ವಾತಾವರಣಕ್ಕೆ ತುತ್ತಾಗಿ ಅಲ್ಲಿನ ಕಲ್ಲಿನ ಮೇಲ್ಮೈ ಪದರವು ಪುಡಿಪುಡಿಯಾಗಿರುವುದು ಎಂದು ಖಚಿತಪಟ್ಟಿದೆ. ಇದು ಚಂದ್ರನ ವಾತಾವರಣವು ಅಲ್ಲಿಯ ಕಲ್ಲು ಮಣ್ಣಿನ ಮೇಲೂ ಪ್ರಭಾವ ಬೀರುತ್ತಿದೆ ಎಂಬ ಈ ಹಿಂದಿನ ಸಂಶೋಧನೆಯನ್ನು ದೃಢಪಡಿಸಿದೆ.

ಈ ಕುರಿತ ಅಧ್ಯಯನ ವರದಿಯನ್ನು ಕೆಲ ದಿನಗಳ ಹಿಂದೆ ಅಹಮದಾಬಾದ್‌ನಲ್ಲಿ ನಡೆದ ‘ಗ್ರಹಗಳು, ಬೃಹತ್‌ ಗ್ರಹಗಳು ಮತ್ತು ವಾಸಯೋಗ್ಯ’ ಎಂಬ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಂಡಿಸಲಾಗಿದೆ.